ADVERTISEMENT

ಲೋಯ ಸಾವು: ‘ಅನುಮಾನ ಇಲ್ಲ’

ಏಜೆನ್ಸೀಸ್
Published 15 ಜನವರಿ 2018, 5:23 IST
Last Updated 15 ಜನವರಿ 2018, 5:23 IST
ಲೋಯ ಸಾವು: ‘ಅನುಮಾನ ಇಲ್ಲ’
ಲೋಯ ಸಾವು: ‘ಅನುಮಾನ ಇಲ್ಲ’   

ಮುಂಬೈ: ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಬ್ರಿಜ್‌ಗೋಪಾಲ್‌ ಹರ್‌ಕಿಶನ್‌ ಲೋಯ ಅವರ ಸಾವಿನಲ್ಲಿ ಅನುಮಾನಾಸ್ಪದ ಅಂಶಗಳು ಇಲ್ಲ. ಈ ವಿಚಾರಕ್ಕೆ ಸಂಬಂಧಿಸಿ ತಮಗೆ ಕಿರುಕುಳ ನೀಡಬಾರದು ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ.

‘ಈವರೆಗಿನ ಘಟನಾವಳಿಗಳಿಂದ ನಾವು ನೊಂದಿದ್ದೇವೆ. ನಮಗೆ ಕಿರುಕುಳ ನೀಡಬೇಡಿ’ ಎಂದು ಲೋಯ ಅವರ ಮಗ ಅನುಜ್‌ ಲೋಯ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ. ಅವರ ಜತೆಗೆ ಕುಟುಂಬದ ಇತರ ಸದಸ್ಯರೂ ಇದ್ದರು.

ನಾಯ್ಕ್‌ ಎಂಡ್‌ ಕಂಪನಿ ಎಂಬ ಕಾನೂನು ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಅಮಿತ್‌ ನಾಯ್ಕ್‌ ಅವರೂ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ನ್ಯಾಯಾಧೀಶ ಲೋಯ ಸಾವಿನ ಬಗ್ಗೆ ಯಾವುದೇ ಅನುಮಾನ ಇಲ್ಲ ಎಂದು ಅವರೂ ಹೇಳಿದರು.

ADVERTISEMENT

ಸೊಹ್ರಾಬುದ್ದೀನ್‌ ಶೇಖ್‌ ಎನ್‌ಕೌಂಟರ್‌ ಪ್ರಕರಣವನ್ನು ಲೋಯ ವಿಚಾರಣೆ ನಡೆಸುತ್ತಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಈ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಈಗ ಅವರು ಖುಲಾಸೆಯಾಗಿದ್ದಾರೆ. ಲೋಯ 2014ರ ಡಿಸೆಂಬರ್‌ನಲ್ಲಿ ಮೃತಪಟ್ಟಿದ್ದಾರೆ.

ಕುಟುಂಬದ ಸದಸ್ಯರು ಹಿಂದೆ ಬೇರೆ ರೀತಿಯಲ್ಲಿ ಹೇಳಿಕೆ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅನುಜ್‌, ‘ಅದು ಭಾವನಾತ್ಮಕ ತುಮುಲದ ಸಮಯವಾಗಿತ್ತು... ನಮಗೆ ಕಿರುಕುಳ ನೀಡಬಾರದು ಎಂಬ ಮನವಿಯನ್ನು ಪತ್ರಕರ್ತರು, ಎನ್‌ಜಿಒಗಳು, ಹೋರಾಟಗಾರರು ಮತ್ತು ರಾಜಕಾರಣಿಗಳಿಗೆ ಮಾಧ್ಯಮ ತಲುಪಿಸಬೇಕು’ ಎಂದರು.

ತಂದೆಯ ಸಾವಿನ ಬಗ್ಗೆ ತನಿಖೆ ನಡೆಯಬೇಕೇ ಎಂಬ ಪ್ರಶ್ನೆಗೆ, ‘ಅದನ್ನು ನಿರ್ಧರಿಸಲು ನಾನು ಯಾರು, ತನಿಖೆಯ ಬೇಡಿಕೆಯ ಬಗ್ಗೆ ನನಗೆ ಹೇಳುವುದಕ್ಕೆ ಏನೂ ಇಲ್ಲ. ತಂದೆ ಸತ್ತಾಗ ನನಗೆ 17 ವರ್ಷ. ಆಗ ಏನೂ ಅರ್ಥವಾಗುವ ಸ್ಥಿತಿಯಲ್ಲಿ ನಾನು ಇರಲಿಲ್ಲ. ಆಗ ಭಾವನಾತ್ಮಕ ಕ್ಷೋಭೆಯಲ್ಲಿದ್ದೆ. ಯಾವುದೇ ವಿವಾದ ಇಲ್ಲ. ಈ ವಿಚಾರವನ್ನು ರಾಜಕೀಯಕ್ಕೆ ಬಳಸಬಾರದು. ಅದೊಂದು ದುರಂತ. ಈ ವಿಚಾರವನ್ನು ರಾಜಕೀಯಗೊಳಿಸಿ ಅದರ ಸಂತ್ರಸ್ತರಾಗಲು ನಾವು ಬಯಸುವುದಿಲ್ಲ’ ಎಂದೂ ಅವರು ತಿಳಿಸಿದ್ದಾರೆ.

ಅನುಜ್‌ ಈಗ ಎರಡನೇ ವರ್ಷದ ಕಾನೂನು ವಿದ್ಯಾರ್ಥಿ.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.