ADVERTISEMENT

55 ರೂಪಾಯಿಯೂ ಬಂದಿಲ್ಲ– ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2014, 19:45 IST
Last Updated 29 ಅಕ್ಟೋಬರ್ 2014, 19:45 IST

ನವದೆಹಲಿ: ಬಿಜೆಪಿಯು ಅಧಿಕಾರಕ್ಕೆ ಬಂದ ೧೦೦ ದಿನಗಳೊಳಗೆ ವಿದೇಶಿ ಬ್ಯಾಂಕು­ಗಳಲ್ಲಿರುವ ಕಪ್ಪುಹಣವನ್ನು ವಾಪಸ್‌ ತರಿಸಿಕೊಳ್ಳುವುದಾಗಿ ಭರವಸೆ ನೀಡಿತ್ತು. ಆದರೆ ಇದನ್ನು ಮರೆತಿರುವ ಪಕ್ಷವು ಜನತೆಯನ್ನು ಮೂರ್ಖರನ್ನಾಗಿ­ಸುತ್ತಲೇ ಇದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

ಬಿಜೆಪಿಯು ಚುನಾವಣೆ ಪ್ರಚಾರ ಮಾಡುವಾಗ ೫೫ ಸಾವಿರ ಕಪ್ಪುಹಣ ಖಾತೆದಾರರ ಹೆಸರು ಬಹಿರಂಗ ಮಾಡು­ವುದಾಗಿ ಹೇಳಿತ್ತು. ಆದರೆ ಅಧಿಕಾರಕ್ಕೆ ಬಂದು ಐದು ತಿಂಗಳಾ­ದರೂ ಇನ್ನೂ ೫೫ ರೂಪಾಯಿಯನ್ನು ಅದು ದೇಶಕ್ಕೆ ತರಿಸಿಕೊಂಡಿಲ್ಲ ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಜರಿದಿದ್ದಾರೆ.

ಪ್ರಾಮಾಣಿಕ ಕ್ರಮ: ಜಿನೀವಾ ಎಚ್‌ಎಸ್‌ಬಿಸಿ ಖಾತೆ­ದಾರರ ಪಟ್ಟಿಯನ್ನು ಸುಪ್ರೀಂ­ಕೋರ್ಟ್‌ಗೆ ಸಲ್ಲಿಸಿದ್ದನ್ನು ಬಿಜೆಪಿ ಉಪಾಧ್ಯಕ್ಷ ಮುಖ್ತಾರ್‌ ಅಬ್ಬಾಸ್‌ ನಕ್ವಿ ಸಮರ್ಥಿಸಿಕೊಂಡಿದ್ದಾರೆ. ಸರ್ಕಾರವು ಈ ಪ್ರಕರಣದ ಸೂಕ್ಷ್ಮತೆಯನ್ನು ಅರಿತಿದೆ. ಈ ಸಂಬಂಧ ಸರ್ಕಾರ ಪ್ರಾಮಾಣಿಕವಾಗಿ ಕ್ರಮ ತೆಗೆದುಕೊಳ್ಳಲಿದೆ ಎಂದಿದ್ದಾರೆ. ಎನ್‌ಡಿಎ ಸರ್ಕಾರವು ಅಧಿಕಾರಕ್ಕೆ ಬಂದಂದಿ­ನಿಂದಲೂ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುತ್ತಾ ಬಂದಿದೆ. ಬೇರೆ ದೇಶ­ಗಳೊಂದಿಗೆ ಒಪ್ಪಂದ ಮಾಡಿ­ಕೊಂಡು ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ಸಹಕರಿಸಲು ಉತ್ತೇಜಿಸುತ್ತಿದೆ ಎಂದರು.

‘ಹೆಸರು ಬಹಿರಂಗಕ್ಕೆ ಜರ್ಮನಿ ಆಕ್ಷೇಪ’
ಲೀಚ್‌ಟೆನ್‌ಸ್ಟೀನ್‌ ಬ್ಯಾಂಕಿನಲ್ಲಿ ಖಾತೆ ಹೊಂದಿದವರ ಎಂಟು ಜನರ ಹೆಸರನ್ನು ಕೇಂದ್ರ ಸರ್ಕಾರ ಐದು ತಿಂಗಳ ಹಿಂದೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದಾಗ ಜರ್ಮನಿಯು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು ಎಂಬುದನ್ನು ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ಅವರು ಬಹಿರಂಗಪಡಿಸಿದ್ದಾರೆ.

ಈ ಹೆಸರುಗಳನ್ನು ಪ್ರಕಟಿಸುವಂತೆ ಸುಪ್ರೀಂಕೋರ್ಟ್‌ ಮೇ ತಿಂಗಳಲ್ಲಿ ನಿರ್ದೇಶನ ನೀಡಿತ್ತು. ಆಗ ಜರ್ಮನಿಯ ಸಂಬಂಧಿಸಿದ ಇಲಾಖೆಯು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ‘ಈ ಹೆಸರುಗಳನ್ನು ಬಹಿರಂಗಗೊಳಿಸಿದ್ದು ಏಕೆ’ ಎಂದು ಕೇಳಿತ್ತು. ನಂತರ, ಅದಕ್ಕೆ ನಾವು ವಿವರಣೆ ನೀಡಬೇಕಾಯಿತು ಎಂದು ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಅವರು ಹೇಳಿದರು.

ಬರ್ಲಿನ್‌ ಸಭೆಗೆ ಭಾರತ ಗೈರು
ನವದೆಹಲಿ: ವಿದೇಶಿ ಬ್ಯಾಂಕಿನಲ್ಲಿ ಖಾತೆ ಹೊಂದಿರುವವರ ಭಾರತೀಯರ ಹೆಸರಿನ ಪಟ್ಟಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ದಿನವೇ ಬರ್ಲಿನ್‌ನಲ್ಲಿ ಕಪ್ಪುಹಣ ಮಾಹಿತಿ ಗೋಪ್ಯತೆ ಕಾಪಾಡುವ ಸಂಬಂಧ ನಡೆದ ಸಭೆಗೆ ಭಾರತ ಗೈರು ಹಾಜರಾಗಿದೆ. ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಕಪ್ಪುಹಣ ಮಾಹಿತಿ ವಿನಿಮಯದ ಗೋಪ್ಯತೆ ಕಾಪಾಡುವುದಾಗಿ ಈ ಸಭೆಯಲ್ಲಿ ಬಹುಪಕ್ಷೀಯ ಒಪ್ಪಂದಕ್ಕೆ ಭಾರತ ಸಹಿ ಹಾಕಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.