ADVERTISEMENT

550 ಕಿ.ಮೀ ಈಜಲಿದ್ದಾಳೆ 11ರ ಬಾಲೆ !

ಎರಡನೇ ವಯಸ್ಸಿನಲ್ಲೇ ಈಜು ಕಲಿತಿದ್ದ ಪೋರಿ

ಐಎಎನ್ಎಸ್
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST
550 ಕಿ.ಮೀ ಈಜಲಿದ್ದಾಳೆ 11ರ ಬಾಲೆ !
550 ಕಿ.ಮೀ ಈಜಲಿದ್ದಾಳೆ 11ರ ಬಾಲೆ !   

ಲಖನೌ (ಐಎಎನ್‌ಎಸ್‌): ವಾರಾಣಸಿಯಿಂದ ಕಾನ್ಪುರದವರೆಗಿನ 550 ಕಿ.ಮೀ. ದೂರವನ್ನು ಉಕ್ಕಿ ಹರಿಯುತ್ತಿರುವ ಗಂಗಾ ನದಿಯಲ್ಲಿ ಈಜಿ 10 ದಿನಗಳಲ್ಲಿ ಕ್ರಮಿಸುವ ಗುರಿಯೊಂದಿಗೆ 11 ವರ್ಷದ ಬಾಲೆ ಶ್ರದ್ಧಾ ಶುಕ್ಲಾ ಭಾನುವಾರ ನದಿಗೆ ಧುಮುಕಿದ್ದಾಳೆ ! ಗಂಗಾ ನದಿಯಲ್ಲಿ ನೀರಿನ ಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಿದೆ.

ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಬಿಹಾರ ರಾಜ್ಯಗಳ ಹಲವೆಡೆ ಗಂಗೆ ತನ್ನ ಕೋಪ ತೋರಿಸಿದ್ದಾಳೆ. ಹೀಗಿದ್ದರೂ, ಬಾಲಕಿ ಶ್ರದ್ಧಾ ಕಾನ್ಪುರದ ಸತಿ ಚೌರಾ ಘಾಟ್‌ನಿಂದ ಸ್ಥಳೀಯರ ಹರ್ಷೋದ್ಗಾರದ ನಡುವೆ ಭಾನುವಾರ ಈಜು ಆರಂಭಿಸಿದ್ದಾಳೆ.

ಭಾನುವಾರದಿಂದ ಆರಂಭಿಸಿ ಹತ್ತನೆಯ ದಿನ ವಾರಾಣಸಿಯ ಗೌಘಾಟ್‌ ತಲುಪಿ, ಈಜು ಪೂರ್ಣಗೊಳಿಸಲು ಈಕೆ ನಿರ್ಧರಿಸಿದ್ದಾಳೆ. ಈಜಿನ ನಡುವೆ ಈಕೆ ಪ್ರತಿ ನಾಲ್ಕು ಅಥವಾ ಐದು ತಾಸಿಗೊಮ್ಮೆ ವಿಶ್ರಾಂತಿ ಪಡೆಯಲಿದ್ದಾಳೆ.

ಈಕೆ ಈಜಿ ಸಾಗಲಿರುವ ಮಾರ್ಗದ ಉದ್ದ ಒಲಿಂಪಿಕ್ಸ್‌ ಕ್ರೀಡಾಕೂಟದ ಮ್ಯಾರಥಾನ್‌ ಸ್ಪರ್ಧೆಯಲ್ಲಿ ಹದಿಮೂರು ಬಾರಿ ಓಡಿದ್ದಕ್ಕೆ ಸಮವಾಗಲಿದೆ. ಈ ಪೋರಿ ಈಜಲು ಆರಂಭಿಸಿದ್ದು ಎರಡು ವರ್ಷದ ಎಳೆ ವಯಸ್ಸಿನಲ್ಲಿ. ಅಜ್ಜ ಮುನ್ನು ಶುಕ್ಲಾ ಮೊಮ್ಮಗಳನ್ನು ಗಂಗಾ ನದಿಗೆ ಕರೆದೊಯ್ದ ದಿನದಿಂದ.

ಅಲ್ಲಿಂದ ಈಕೆಗೆ ಈಜಿನ ಬಗ್ಗೆ ಆಸಕ್ತಿ ಮೊಳೆಯಿತು. ಬಹುದೂರದವರೆಗೆ ಈಜಿಕೊಂಡೇ ಸಾಗುವುದು ಶ್ರದ್ಧಾಗೆ ಇಷ್ಟವಾಗಿದ್ದ ಕಾರಣ, ಕುಟುಂಬ ಈಕೆಗೆ ಪ್ರೋತ್ಸಾಹ ನೀಡಿತು ಎನ್ನುತ್ತಾರೆ ತಂದೆ ಲಲಿತ್ ಶುಕ್ಲಾ. 550 ಕಿ.ಮೀ ಈಜುವ ಸಾಹಸದಲ್ಲಿ ಈಕೆಗೆ ಎಂಟು ಜನ ಮುಳುಗು ತಜ್ಞರು, ಒಬ್ಬ ವೈದ್ಯ ಬೆಂಗಾವಲಾಗಿ ಇರಲಿದ್ದಾರೆ. ಶ್ರದ್ಧಾ ಆರು ವರ್ಷ ವಯಸ್ಸಿನಲ್ಲಿದ್ದಾಗ ಆರು ಕಿ.ಮೀ. ದೂರ ಈಜಿದ್ದಳು.

ಮಾರನೆಯ ವರ್ಷ ಒಂದೇ ಏಟಿಗೆ ಏಳು ಕಿ.ಮೀ. ಈಜಿದಳು. 2012ರಲ್ಲಿ ಆಕೆ ಇನ್ನೂ ಹೆಚ್ಚು ದೂರ ಈಜಿದಳು. 2013ರಲ್ಲಿ ತನ್ನ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡ ಶ್ರದ್ಧಾ, ಒಟ್ಟು 16 ಕಿ.ಮೀ. ಈಜಿ ತೋರಿಸಿದಳು. 2014ರಲ್ಲಿ ಗಂಗಾ ನದಿಯಲ್ಲಿ ಕಾನ್ಪುರದಿಂದ ಅಲಹಾಬಾದ್‌ವರೆಗೆ (282.5 ಕಿ.ಮೀ) ಈಜಿ ದಾಖಲೆ ಬರೆದಳು. ಶ್ರದ್ಧಾ ಬಡ ಕುಟುಂಬಕ್ಕೆ ಸೇರಿದವಳು.

ಈಜಿನಲ್ಲಿ ಸಾಂಪ್ರದಾಯಿಕ ತರಬೇತಿ ಪಡೆದವಳಲ್ಲ. ಪಿ.ವಿ. ಸಿಂಧು ಹಾಗೂ ಸಾಕ್ಷಿ ಮಲಿಕ್ ಅವರು ದೇಶಕ್ಕೆ ಕೀರ್ತಿ ತಂದಂತೆಯೇ, ಸೂಕ್ತ ತರಬೇತಿ ಒದಗಿಸಿದರೆ ಶ್ರದ್ಧಾ ಕೂಡ ದೇಶಕ್ಕೆ ಒಳ್ಳೆಯ ಹೆಸರು ತರಬಲ್ಲಳು ಎನ್ನುತ್ತಾರೆ ಸ್ಥಳೀಯರು.

*
ಶ್ರದ್ಧಾ ಈಜಿನ ಹಾದಿ

*ಶ್ರದ್ಧಾ ಶುಕ್ಲಾ ಮೊದಲನೆಯ ದಿನ (ಭಾನುವಾರ) ಒಟ್ಟು 100 ಕಿ.ಮೀ. ಈಜಿದ್ದಾಳೆ.
*ಎರಡನೆಯ ದಿನ ಆಕೆ ಉನ್ನಾಂವ್‌ನ ಚಂದ್ರಿಕಾ ದೇವಿ ದೇವಸ್ಥಾನದಿಂದ ರಾಯ್‌ ಬರೇಲಿಯ ಸಂಕಟ ದೇವಿ ದೇವಸ್ಥಾನದವರೆಗೆ ಈಜಿದ್ದಾಳೆ (40 ಕಿ.ಮೀ ದೂರ)
*ಮೂರನೆಯ ದಿನ: ಸಂಕಟ ದೇವಿ ದೇವಸ್ಥಾನದಿಂದ ಸಿಂಗ್ವೇರ್‌ಪುರ (60 ಕಿ.ಮೀ)
*ನಾಲ್ಕನೆಯ ದಿನ: ಸಿಂಗ್ವೇರ್‌ಪುರದಿಂದ ಫತೇಪುರ. (40 ಕಿ.ಮೀ)
*ಐದನೆಯ ದಿನ: ಫತೇಪುರದಿಂದ ಕೌಶಾಂಬಿಯ ಕಡೇಧಾಮ್‌ (30 ಕಿ.ಮೀ)
*ಆರನೆಯ ದಿನ: ಕೌಶಾಂಬಿಯಿಂದ ಅಲಹಾಬಾದ್‌ನ ಸಂಗಮ ಸ್ಥಳ (30 ಕಿ.ಮೀ)
*ಏಳನೆಯ ದಿನ: ಅಲಹಾಬಾದ್‌ನಿಂದ ಮಿರ್ಜಾಪುರದ ವಿಂಧ್ಯವಾಸಿನಿ ಘಾಟ್‌ (60 ಕಿ.ಮೀ)
*ಎಂಟನೆಯ ದಿನ: ವಿಂಧ್ಯವಾಸಿನಿ ಘಾಟ್‌ನಿಂದ ಮಿರ್ಜಾಪುರದ ಕಾತಳಘಾಟ್‌ (60 ಕಿ.ಮೀ)
*ಒಂಬತ್ತನೆಯ ದಿನ: ಕಾತಳಘಾಟ್‌ನಿಂದ ವಾರಾಣಸಿಯ ಬರೌಲಿ ಘಾಟ್‌ (60 ಕಿ.ಮೀ)
*ಹತ್ತನೆಯ ದಿನ: ಬರೌಲಿ ಘಾಟ್‌ನಿಂದ ಗೌಘಾಟ್‌ (70 ಕಿ.ಮೀ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.