ADVERTISEMENT

6 ವರ್ಷ ಬಳಿಕ ಕುಟುಂಬ ಸೇರಿದ ಬಾಲಕ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 22:30 IST
Last Updated 30 ಜೂನ್ 2016, 22:30 IST
ಬಾಂಗ್ಲಾದೇಶದಿಂದ ಮರಳಿದ ಬಾಲಕ ಸೋನುನನ್ನು ಬಿಗಿದಪ್ಪಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌.
ಬಾಂಗ್ಲಾದೇಶದಿಂದ ಮರಳಿದ ಬಾಲಕ ಸೋನುನನ್ನು ಬಿಗಿದಪ್ಪಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌.   

ನವದೆಹಲಿ (ಪಿಟಿಐ): ವಿದೇಶಾಂಗ ಸಚಿವಾಲಯದ ಮಧ್ಯಪ್ರವೇಶದಿಂದಾಗಿ ದೆಹಲಿಯ ಪಾಲಕರು ಆರು ವರ್ಷ ಹಿಂದೆ ಕಳೆದುಕೊಂಡಿದ್ದ ಮಗನನ್ನು ಮರಳಿ ಪಡೆದಿದೆ.

ಪೂರ್ವ ದೆಹಲಿಯ ಸೋನು (12) ಎಂಬ ಬಾಲಕ ಆರು ವರ್ಷಗಳ ಹಿಂದೆ ಮನೆಯ ಪಕ್ಕದಿಂದಲೇ ಅಪಹರಣಗೊಂಡಿದ್ದ. ಆ ಬಗ್ಗೆ ದೂರೂ ದಾಖಲಾಗಿತ್ತು. ಕೆಲವು ವರ್ಷಗಳ ಕಾಲ ಹುಡುಕಾಟ ನಡೆಸಿದ ಪೊಲೀಸರು ಬಾಲಕ ಸಿಗದೆ ಪ್ರಕರಣವನ್ನೇ ಮರೆತುಬಿಟ್ಟಿದ್ದರು.

ಈ ಮಧ್ಯೆ ಅಪಹರಣಕಾರರು ಬಾಲಕನನ್ನು ಬಾಂಗ್ಲಾದೇಶಕ್ಕೆ ಸಾಗಿಸಿದ್ದರು. ಬಾಲಕ ಸೋನು ಹೇಗೋ ಬಾಂಗ್ಲಾದೇಶದ ಜೆಸ್ಸೋರೆಯ ಮಕ್ಕಳ ಪುನರ್ವಸತಿ ಕೇಂದ್ರ ತಲುಪಿದ್ದ. ಈತ ಭಾರತದ ಬಾಲಕ ಎಂದು ತಿಳಿದ ಬಳಿಕ ಮೂರು ದಿನಗಳ ಹಿಂದೆ ಅಲ್ಲಿನ ಅಧಿಕಾರಿಗಳು ಸೋನುವನ್ನು ಭಾರತೀಯ ರಾಯಭಾರಿ ಕಚೇರಿಗೆ ಹಸ್ತಾಂತರಿಸಿದ್ದರು.

ಜೆಸ್ಸೋರೆಯ ವ್ಯಕ್ತಿಯೊಬ್ಬರು ಈಚೆಗೆ ಸೋನು ಪೋಷಕರನ್ನು ಸಂಪರ್ಕಿಸಿದಾಗ  ಸೋನು ಬಾಂಗ್ಲಾದೇಶದ ಲ್ಲಿದ್ದಾನೆ ಎಂಬ ಮಾಹಿತಿ ನೀಡಿದ್ದರು. ಎಚ್ಚೆತ್ತುಕೊಂಡ ಪಾಲಕರು ವಿದೇಶಾಂಗ ವ್ಯವಹಾರಗಳ ಇಲಾಖೆ ನೆರವು ಯಾಚಿಸಿದರು. ಸೋನು ಮತ್ತೆ ತನ್ನ ಪೋಷಕರನ್ನು ಸೇರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವೆ ಸುಷ್ಮಾ ಸ್ವರಾಜ್‌ ಅಧಿಕಾರಿಗಳಿಗೆ ಸೂಚಿಸಿದ್ದರು.

ಇಲಾಖೆಯ ಪ್ರಯತ್ನದಿಂದಾಗಿ ಬಾಲಕ ಆರು ವರ್ಷಗಳ ಬಳಿಕ ಮರಳಿ ಕುಟುಂಬ ಸೇರಿದ್ದಾನೆ. ನವದೆಹಲಿಗೆ ಬಂದ ಕೂಡಲೇ ಸೋನು ತನ್ನ ತಂದೆ ತಾಯಿ ಜತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ತನ್ನನ್ನು ಮರಳಿ ಮನೆಗೆ ಕರೆತರಲು ಸಹಕರಿಸಿದ್ದಕ್ಕೆ ಧನ್ಯವಾದ ಹೇಳಿದ್ದಾನೆ.

‘ಹಿಂದೆ ಗೀತಾ ಮತ್ತು ಗುರ್‌ಪ್ರೀತ್‌ ಎಂಬುವರನ್ನು ಭಾರತಕ್ಕೆ ಕರೆತರಲಾಗಿತ್ತು. ಇದೀಗ ಸೋನುವನ್ನು ಬಾಂಗ್ಲಾದೇಶದಿಂದ ಮನೆಗೆ ಕರೆತರಲಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ವಿಕಾಸ್‌ ಸ್ವರೂಪ್‌ ಟ್ವೀಟ್‌ ಮಾಡಿದ್ದಾರೆ. 

‘ಸೋನು ಮತ್ತು ಆತನ ತಾಯಿಯ  ಡಿಎನ್‌ಎ ಪರೀಕ್ಷೆ ನಡೆಸಿ ಹೊಂದಿಕೆಯಾದ ನಂತರವೇ ಬಾಲಕನನ್ನು ಪೋಷಕರಿಗೆ ನೀಡಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.