ADVERTISEMENT

ಬೆಟ್ಟಿಂಗ್‌, ಜೂಜು ಸಕ್ರಮಗೊಳಿಸಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 19:42 IST
Last Updated 6 ಜುಲೈ 2018, 19:42 IST
ಜೂಜಾಟ
ಜೂಜಾಟ   

ನವದೆಹಲಿ: ಜೂಜಾಟ ಮತ್ತು ಕ್ರಿಕೆಟ್‌ ಹಾಗೂ ಇತರ ಕ್ರೀಡೆಗಳಲ್ಲಿ ಬೆಟ್ಟಿಂಗ್‌ಗೆ ಅವಕಾಶ ಕೊಡಬೇಕು ಎಂದು ಕಾನೂನು ಆಯೋಗ ಶಿಫಾರಸು ಮಾಡಿದೆ. ನಿಯಂತ್ರಿತ ಚಟುವಟಿಕೆಗಳಾಗಿ ಇವುಗಳನ್ನು ನಡೆಸಬೇಕು ಮತ್ತು ನೇರ ಮತ್ತು ಪರೋಕ್ಷ ತೆರಿಗೆ ವ್ಯಾಪ್ತಿಗೆ ಇವನ್ನು ತರಬೇಕು ಎಂದು ಶಿಫಾರಸಿನಲ್ಲಿ ಹೇಳಲಾಗಿದೆ.

ಜೂಜಾಟ ಮತ್ತು ಬೆಟ್ಟಿಂಗ್‌ ಅನ್ನು ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸುವ ಮೂಲವಾಗಿಯೂ ಬಳಸಿಕೊಳ್ಳಬಹುದು ಎಂದು ಆಯೋಗ ಹೇಳಿದೆ.

‘ಇಂತಹ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ. ಹಾಗಾಗಿ, ಅವುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು ನಮ್ಮ ಮುಂದಿರುವ ಏಕೈಕ ಆಯ್ಕೆಯಾಗಿದೆ’ ಎಂದು ಆಯೋಗ ಹೇಳೀದೆ.

ADVERTISEMENT

‘ಭಾರತದಲ್ಲಿ ಜೂಜಾಟ, ಕ್ರಿಕೆಟ್‌ ಮತ್ತು ಇತರ ಕ್ರೀಡೆಗಳಲ್ಲಿ ಬೆಟ್ಟಿಂಗ್‌ನ ಕಾನೂನು ಚೌಕಟ್ಟು’ ಎಂಬ ವರದಿಯನ್ನು ಆಯೋಗವು ಸರ್ಕಾರಕ್ಕೆ ಸಲ್ಲಿಸಿದೆ.

ಬೆಟ್ಟಿಂಗ್‌ ಕಾನೂನುಬದ್ಧಗೊಳಿಸಿ ಅದನ್ನು ಆದಾಯ ಗಳಿಕೆ ಮಾರ್ಗವನ್ನಾಗಿ ಮಾಡಬೇಕು ಎಂದು ವರದಿ ಹೇಳಿದೆ.

ಬೆಟ್ಟಿಂಗ್‌ ಮತ್ತು ಜೂಜಾಟವನ್ನು ಕಾನೂನುಬದ್ಧಗೊಳಿಸಬೇಕು ಎಂದ ಮಾತ್ರಕ್ಕೆ ಮ್ಯಾಚ್‌ ಫಿಕ್ಸಿಂಗ್‌ ಮತ್ತು ವಂಚನೆಗೆ ಅವಕಾಶ ಕೊಡಬೇಕು ಎಂದು ಅರ್ಥವಲ್ಲ. ಮ್ಯಾಚ್‌ ಫಿಕ್ಸಿಂಗ್‌ ಮತ್ತು ವಂಚನೆಯನ್ನು ಅಪರಾಧ ಎಂದು ಸ್ಪಷ್ಟವಾಗಿ ಗುರುತಿಸಬೇಕು. ಇಂತಹ ಅಪರಾಧ ಕೃತ್ಯಗಳಿಗೆ ಕಠಿಣ ಶಿಕ್ಷೆ ನಿಗದಿ ಮಾಡಬೇಕು ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಜೂಜಾಟ ಮತ್ತು ಬೆಟ್ಟಿಂಗ್‌ ನಗದುರಹಿತವಾಗಿ ಅಂದರೆ ಡಿಜಿಟಲ್‌ ಪಾವತಿ ಮಾಧ್ಯಮದ ಮೂಲಕ ನಡೆಸಬೇಕು ಎಂಬ ಸಲಹೆಯನ್ನೂ ಆಯೋಗ ಕೊಟ್ಟಿದೆ. ಇದರಲ್ಲಿ ಭಾಗಿಯಾಗುವವರ ಆಧಾರ್‌ ಅಥವಾ ಪ್ಯಾನ್‌ ಕಾರ್ಡ್‌ ಮೂಲಕ ಹಣದ ವರ್ಗಾವಣೆಯನ್ನು ನಿಯಂತ್ರಿಸಬೇಕು. ಇದರ ಮೂಲಕ ಹಣ ಅಕ್ರಮ ವರ್ಗಾವಣೆಯನ್ನೂ ನಿಯಂತ್ರಿಸಬಹುದು ಎಂದು ಆಯೋಗ ವಿವರಿಸಿದೆ.

ಕ್ಯಾಸಿನೊ ಮತ್ತು ಆನ್‌ಲೈನ್‌ ಗೇಮಿಂಗ್‌ ಉದ್ಯಮದಲ್ಲಿ ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡುವುದಕ್ಕಾಗಿ ವಿದೇಶಿ ವಿನಿಮಯ ಮತ್ತು ವಿದೇಶಿ ನೇರ ಹೂಡಿಕೆ ಕಾನೂನುಗಳಿಗೆ ತಿದ್ದಪಡಿ ತರಬೇಕು ಎಂಬ ಸಲಹೆಯನ್ನೂ ಆಯೋಗವು ಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.