ADVERTISEMENT

ಕೇಜ್ರಿವಾಲ್‌ ಮುಂದೆ ಸಾಧಿಸಿ ತೋರಿಸಬೇಕಾದ ಸವಾಲು

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 20:28 IST
Last Updated 4 ಜುಲೈ 2018, 20:28 IST
   

ನವದೆಹಲಿ: ಲೆಫ್ಟಿನೆಂಟ್‌ ಗವರ್ನರ್‌ ಅವರ ಅಧಿಕಾರಕ್ಕೆ ನಿರ್ಬಂಧ ಹೇರಿ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟಿಸಿದ ತಕ್ಷಣವೇ ಗೆಲುವಿನ ಸಂಭ್ರಮದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಸಂಪುಟ ಸಭೆ ನಡೆಸಿದ್ದಾರೆ. ‘ಈತನಕ ತಡೆಹಿಡಿಯಲಾಗಿದ್ದ ಸಾರ್ವಜನಿಕ ಮಹತ್ವದ ಯೋಜನೆಗಳ ಬಗ್ಗೆ ಚರ್ಚಿಸಲು ಈ ಸಂಪುಟ ಸಭೆ’ ನಡೆದಿದೆ.

ತಮ್ಮ ಸರ್ಕಾರದ ಆಧಿಕಾರಗಳನ್ನು ‘ಕಾನೂನುಬಾಹಿರ’ವಾಗಿ ಕಸಿದುಕೊಂಡು ಸರ್ಕಾರದ ಅಮೂಲ್ಯ ಮೂರು ವರ್ಷಗಳನ್ನು ಹಾಳುಮಾಡಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೇಜ್ರಿವಾಲ್‌ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.

ದೆಹಲಿ ಆಡಳಿತ ವ್ಯವಸ್ಥೆಯ ಮುಖ್ಯಸ್ಥ ಯಾರು ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್‌ ತೀರ್ಪು ಉತ್ತರ ನೀಡಿದೆ. ಹಾಗಾಗಿ, ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ತಮ್ಮ ಪಕ್ಷದ ಕಾರ್ಯಸೂಚಿ ಏನು ಎಂಬುದನ್ನು ಸಂಪುಟ ಸಭೆಯಲ್ಲಿಕೇಜ್ರಿವಾಲ್‌ ಬಹಿರಂಗಪಡಿಸಿದ್ದಾರೆ.

ADVERTISEMENT

ಪಡಿತರ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಪ್ರಸ್ತಾವದ ಜಾರಿಗೆ ತ್ವರಿತ ಕ್ರಮ ಮತ್ತು ಸಿ.ಸಿ.ಟಿ.ವಿ. ಕ್ಯಾಮೆರಾಗಳ ಅಳವಡಿಕೆ ಬಗ್ಗೆ ಸಂಪುಟ ನಿರ್ಧಾರ ಕೈಗೊಂಡಿದೆ.

ಎಎಪಿ ಅರಾಜಕತಾವಾದಿ ಮತ್ತು ಸಂಘರ್ಷಪ್ರೇಮಿ ಎಂದು ಪ್ರತಿಸ್ಪರ್ಧಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಆರೋಪಿಸುತ್ತಿವೆ. ತನ್ನ ಅದಕ್ಷತೆಯನ್ನು ಮರೆ ಮಾಚುವುದಕ್ಕಾಗಿ ದೆಹಲಿ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ ಎಂದು ಎರಡೂ ಪಕ್ಷಗಳು ಆಪಾದಿಸಿದ್ದವು. ಹಾಗಾಗಿ, ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿಕೂಲ ತೀರ್ಪು ಬಂದಿದ್ದರೆ ಎಎಪಿ ಮೂಲೆಗುಂಪಾಗುವ ಸಾಧ್ಯತೆ ಇತ್ತು.

ಎಲ್‌.ಜಿಯಿಂದ ಸರ್ಕಾರದ ಕಾರ್ಯನಿರ್ವಹಣೆಗೆ ‘ಅಡ್ಡಿ’ ಆಗಿತ್ತು ಎಂಬುದನ್ನು ಜನರ ಮುಂದೆ ಹೇಳುವುದಕ್ಕೆ ಈಗ ಎಎಪಿಗೆ ಅವಕಾಶ ಇದೆ. ಆಡಳಿತ ಹಳಿತಪ್ಪಲು ಎಲ್‌.ಜಿಯೇ ಕಾರಣ ಎಂಬ ಎಎಪಿ ಆರೋಪಕ್ಕೂ ಈಗ ಸಮರ್ಥನೆ ದೊರೆತಿದೆ. ಆದರೆ, ಮುಂದಿನ ದಿನಗಳಲ್ಲಿ ಸರ್ಕಾರದ ಸಾಧನೆಯ ಬಗ್ಗೆ ಎಲ್ಲರೂ ಕಣ್ಣಿಡಲಿದ್ದಾರೆ ಎಂಬುದೂ ಸ್ಪಷ್ಟ.

‌ಲೋಕಸಭೆ ಚುನಾವಣೆ ಹತ್ತಿರವಾಗಿರುವುದರಿಂದ ಮತ್ತು ವಿರೋಧ ಪಕ್ಷಗಳ ಆರೋಪ ತಪ್ಪು ಎಂದು ಸಾಬೀತುಪಡಿಸುವುದಕ್ಕಾಗಿ ಕಣ್ಣಿಗೆ ಕಾಣುವಂತಹ ಸಾಧನೆಯನ್ನು ಸರ್ಕಾರ ಮಾಡಲೇಬೇಕಾಗಿದೆ ಎಂದು ಎಎಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ತೀರ್ಪು ಆಡಳಿತಾತ್ಮಕವಾಗಿ ಮತ್ತು ರಾಜಕೀಯವಾಗಿ ದೊಡ್ಡ ಅನುಕೂಲ ಮಾಡಿಕೊಟ್ಟಿದೆ. ಈಗ ಎಎಪಿ ಸರ್ಕಾರವು ಅಧಿಕಾರಶಾಹಿಯ ಮೇಲೆ ಹೆಚ್ಚಿನ ನಿಯಂತ್ರಣ ಹೊಂದುವುದು ಸಾಧ್ಯವಾಗಲಿದೆ ಎಂದು ಪಕ್ಷದ ಮುಖಂಡರು ಭಾವಿಸಿದ್ದಾರೆ. ಈತನಕ, ದೆಹಲಿ ಸರ್ಕಾರ ಮತ್ತು ಅಧಿಕಾರಶಾಹಿ ನಡುವೆ ದೊಡ್ಡ ಸಂಘರ್ಷ ಇತ್ತು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟ ಸಾಧ್ಯತೆಯನ್ನು ಗಮನದಲ್ಲಿ ಇರಿಸಿಕೊಂಡಿರುವ ಕೇಜ್ರಿವಾಲ್‌, ಬಿಜೆಪಿಯೇ ತಮ್ಮ ಮುಖ್ಯ ಪ್ರತಿಸ್ಪರ್ಧಿ ಎಂದು ಗುರುತಿಸಿದ್ದಾರೆ. ಹಾಗಾಗಿಯೇ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಚುನಾಯಿತ ಸರ್ಕಾರದ ಅಧಿಕಾರವನ್ನು ಮೋದಿ ಅವರು ಕಸಿದುಕೊಳ್ಳದೇ ಇದ್ದಿದ್ದರೆ ಸರ್ಕಾರಕ್ಕೆ ಅಮೂಲ್ಯ ಮೂರು ವರ್ಷಗಳು ಸಿಗುತ್ತಿದ್ದವು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್‌.ಜಿ ಅವರ ಎಲ್ಲ ನಡೆಯೂ ಕೇಂದ್ರದ ಕುಮ್ಮಕ್ಕಿನಿಂದಲೇ ನಡೆದಿದೆ ಎಂಬುದನ್ನು ಸ್ಥಾಪಿಸಲು ಎಎಪಿ ನಿರಂತರವಾಗಿ ಪ್ರಯತ್ನ ನಡೆಸಿದೆ.

ಎಲ್‌.ಜಿ ವಿರುದ್ಧದ ಸಂಘರ್ಷದಲ್ಲಿ ವಿರೋಧ ಪಕ್ಷಗಳೆಲ್ಲ ಎಎಪಿಯನ್ನು ಬೆಂಬಲಿಸಿದ್ದರೂ ಕಾಂಗ್ರೆಸ್‌ ಜತೆ ಸೇರಿರಲಿಲ್ಲ. ಕಾಂಗ್ರೆಸ್‌ ವಿರುದ್ಧ ಕೇಜ್ರಿವಾಲ್‌ ಟೀಕೆ ಮಾಡದಿದ್ದರೂ ಎಎಪಿ ವಕ್ತಾರ ಸೌರಭ್‌ ಭಾರದ್ವಾಜ್‌ ವಾಗ್ದಾಳಿ ನಡೆಸಿದ್ದಾರೆ.

**

ದೆಹಲಿ ಮತ್ತು ಇತರೆಡೆಗಳಲ್ಲಿ ಕೂಡ ಸಂವಿಧಾನವೇ ಪರಮೋಚ್ಚ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅರಾಜಕತಾವಾದನ್ನು ಕೈಬಿಟ್ಟು ಸಂವಿಧಾನವನ್ನು ಅನುಸರಿಸಲು ಕೇಜ್ರಿವಾಲ್‌ಗೆ ಇದು ಅಂತಿಮ ಎಚ್ಚರಿಕೆ

–ಮನೋಜ್‌ ತಿವಾರಿ, ದೆಹಲಿ ಬಿಜೆಪಿ ಅಧ್ಯಕ್ಷ

**

ದೆಹಲಿಯ ಅಧಿಕಾರದ ಬಗ್ಗೆ ಸುಪ್ರೀಂ ಕೋರ್ಟ್‌ ಸ್ಪಷ್ಟವಾದ ತೀರ್ಪು ನೀಡಿದೆ. ಕಾಂಗ್ರೆಸ್‌ ಅಧಿಕಾರದಿಂದ ಕೆಳಗಿಳಿದಾಗಿನಿಂದ ಸ್ಥಗಿತಗೊಂಡಿರುವ ಅಭಿವೃದ್ಧಿ ಕೆಲಸಗಳು ಇನ್ನಾದರೂ ಆರಂಭವಾಗಲಿ

–ಅಜಯ್‌ ಮಾಕೆನ್‌, ದೆಹಲಿ ಕಾಂಗ್ರೆಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.