ADVERTISEMENT

ದೆಹಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ: ಸಾಮೂಹಿಕ ಭೀತಿ, ಹುಸಿ ಬೆದರಿಕೆಯ ಉದ್ದೇಶ

ಪಿಟಿಐ
Published 2 ಮೇ 2024, 15:14 IST
Last Updated 2 ಮೇ 2024, 15:14 IST
<div class="paragraphs"><p>ನವದೆಹಲಿಯಲ್ಲಿ ಅನೇಕ ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್ ಬೆದರಿಕೆಗಳು ಬಂದ ನಂತರ ಮಯೂರ್ ವಿಹಾರ್‌ನ ಮದರ್ ಮೇರಿ ಶಾಲೆ ಬಳಿ ಬುಧವಾರ ಪೊಲೀಸರನ್ನು ನಿಯೋಜಿಸಲಾಗಿತ್ತು </p></div>

ನವದೆಹಲಿಯಲ್ಲಿ ಅನೇಕ ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್ ಬೆದರಿಕೆಗಳು ಬಂದ ನಂತರ ಮಯೂರ್ ವಿಹಾರ್‌ನ ಮದರ್ ಮೇರಿ ಶಾಲೆ ಬಳಿ ಬುಧವಾರ ಪೊಲೀಸರನ್ನು ನಿಯೋಜಿಸಲಾಗಿತ್ತು

   

ಪಿಟಿಐ ಚಿತ್ರ

ನವದೆಹಲಿ: ದೆಹಲಿ ಎನ್‌ಸಿಆರ್‌ನ ಸುಮಾರು 200 ಶಾಲೆಗಳಿಗೆ ಬಂದಿರುವ ಹುಸಿ ಬಾಂಬ್ ಸಂದೇಶದ ಇಮೇಲ್‌ಗಳ ಉದ್ದೇಶವು ಸಾಮೂಹಿಕ ಭೀತಿ ಸೃಷ್ಟಿಸುವುದು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದಾಗಿತ್ತು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ADVERTISEMENT

ದೆಹಲಿ ಪೊಲೀಸ್‌ ವಿಶೇಷ ಘಟಕವು ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ. ಸಾಮೂಹಿಕವಾಗಿ ಭೀತಿ ಸೃಷ್ಟಿಸುವ ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುವ ಪಿತೂರಿ ಉದ್ದೇಶದಿಂದ ಇಂತಹ ಇಮೇಲ್‌ಗಳನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಬೆಳಿಗ್ಗೆ 5.47ರಿಂದ ಮಧ್ಯಾಹ್ನ 2.13 ರವರೆಗೆ ವಿವಿಧ ಶಾಲೆಗಳಿಂದ ಬಾಂಬ್‌ ಬೆದರಿಕೆಯ ಸಂದೇಶ ಬಂದಿರುವ ಬಗ್ಗೆ ಸುಮಾರು 125 ಕರೆಗಳನ್ನು ಸ್ವೀಕರಿಸಲಾಯಿತು. ನಂತರ, ತುರ್ತು ಸ್ಪಂದನಾ ವಾಹನಗಳನ್ನು ಶಾಲೆಗಳಿಗೆ ಕಳುಹಿಸಲಾಯಿತು. ಜಿಲ್ಲಾ ಪೊಲೀಸ್, ಬಿಡಿಎಸ್, ಎಂಎಸಿ, ವಿಶೇಷ ಕೋಶ ಮತ್ತು ಅಪರಾಧ ನಿಯಂತ್ರಣ ಕೊಠಡಿ, ಡಿಡಿಎಂಎ, ಎನ್‌ಡಿಆರ್‌ಎಫ್, ಫೈರ್ ಕ್ಯಾಟ್ಸ್ ಮತ್ತು ಇತರ ಹಲವು ಇಲಾಖೆಗಳನ್ನು ಎಚ್ಚರಿಸಲಾಯಿತು ಎಂದು ಅಧಿಕೃತ ಮೂಲಗಳು ಹೇಳಿವೆ.

ದೆಹಲಿ-ಎನ್‌ಸಿಆರ್‌ನ ಸುಮಾರು 200 ಶಾಲೆಗಳಿಗೆ ಬುಧವಾರ ನಸುಕಿನಲ್ಲಿ ಬಾಂಬ್‌ ಬೆದರಿಕೆಯ ಇಮೇಲ್ ಬಂದಿದ್ದು, ಶಾಲಾ ಆವರಣಗಳಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಇ–ಮೇಲ್‌ನಲ್ಲಿ ಭಯಹುಟ್ಟಿಸಲಾಗಿತ್ತು. ಇದರಿಂದ ಭಯಭೀತರಾದ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಶಾಲೆಗಳತ್ತ ದೌಡಾಯಿಸಿದ್ದರು. ಕೆಲ ತಾಸು ಶಾಲಾ ಆವರಣಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.