ನವದೆಹಲಿ: ‘ಏಮ್ಸ್‌ನ ತಜ್ಞ ವೈದ್ಯರ ಜೊತೆ ಸಮಾಲೋಚನೆ ನಡೆಸಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಅವಕಾಶ ಮಾಡಿಕೊಡಲಾಯಿತು ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ನ್ಯಾಯಾಲಯದಲ್ಲಿ ಸುಳ್ಳು ಹೇಳಿದೆ’ ಎಂದು ಸಚಿವೆ ಆತಿಶಿ ಅವರು ಸೋಮವಾರ ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ, ಕೇಜ್ರಿವಾಲ್ ಅವರಿಗೆ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆ ನಿರ್ಧರಿಸುವ ಸಲುವಾಗಿ ವೈದ್ಯಕೀಯ ಮಂಡಳಿ ರಚಿಸಲು ಏಮ್ಸ್‌ಗೆ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ.
ತಮ್ಮ ವೈದ್ಯರ ಜೊತೆ ಪ್ರತಿದಿನ 15 ನಿಮಿಷಗಳ ಸಮಯ ಸಮಾಲೋಚನೆ ನಡೆಸಲು ಮತ್ತು ಇನ್ಸುಲಿನ್ ಒದಗಿಸಲು ಅವಕಾಶ ಮಾಡಿಕೊಡಬೇಕೆಂದು ತಿಹಾರ ಜೈಲಿನಲ್ಲಿರುವ ಕೇಜ್ರಿವಾಲ್ ಅವರು ಶುಕ್ರವಾರ ಅರ್ಜಿ ಸಲ್ಲಿಸಿದ್ದರು. ಅರ್ಜಿ ತಿರಸ್ಕರಿಸಿದ ವಿಶೇಷ ನ್ಯಾಯಾಧೀಶರು, ಸೋಮವಾರ ಈ ನಿರ್ದೇಶನ ನೀಡಿದರು.
‘ಕೇಜ್ರಿವಾಲ್ ಅವರಿಗೆ ವೈದ್ಯರು ಸೂಚಿಸಿರುವ ಆಹಾರ ಪಟ್ಟಿಗೂ, ಅವರಿಗೆ ನೀಡಲಾದ ಆಹಾರಕ್ಕೂ ವ್ಯತ್ಯಾಸವಿದೆ. ಇದು ಗೊತ್ತಿದ್ದೂ ಅವರಿಗೆ ಅಂತಹ ಆಹಾರ ಪೂರೈಸಲು ಬಿಟ್ಟಿದ್ದಾದರೂ ಏಕೆ, ಅದನ್ನು ತಡೆಯಲು ಏನು ಕ್ರಮ ಕೈಗೊಳ್ಳಲಾಯಿತು? ಎಂದು ಜೈಲಿನ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ಏಮ್ಸ್‌ನ ವೈದ್ಯಕೀಯ ಮಂಡಳಿಯು ತಪಾಸಣೆ ನಡೆಸಿ, ಅವರಿಗೆ ಇನ್ಸುಲಿನ್ ಅಗತ್ಯ ಇದೆಯೇ ಇಲ್ಲವೇ ಎನ್ನುವುದರ ಕುರಿತು ಶಿಘ್ರ ವರದಿ ಸಲ್ಲಿಸಬೇಕು’ ಎಂದು ಹೈಕೋರ್ಟ್ ನಿರ್ದೇಶಿಸಿತು.
ಖಾಸಗಿ ವೈದ್ಯರಿಂದ ವಿಡಿಯೊ ಸಮಾಲೋಚನೆಗೆ ಅವಕಾಶ ನೀಡುವಂತೆ ಕೇಜ್ರಿವಾಲ್ ಮಾಡಿದ್ದ ಮನವಿಯನ್ನು ಅದು ತಿರಸ್ಕರಿಸಿತು.
‘ಕೇಜ್ರಿವಾಲ್ ಅವರಿಗೆ ವೈದ್ಯಕೀಯ ಸಮಾಲೋಚನೆ ನೀಡಿದ್ದ ಏಮ್ಸ್ ವೈದ್ಯರು ಅವರಿಗೆ ಇನ್ಸುಲಿನ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಅವರಿಗಾಗಿ ಪಥ್ಯಾಹಾರ ಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಇ.ಡಿ ಸುಳ್ಳು ಹೇಳಿದೆ. ಕೇಜ್ರಿವಾಲ್ ಅವರಿಗೆ ಸಮಾಲೋಚನೆ ನೀಡಿದವರು ವೈದ್ಯರೇ ಅಲ್ಲ. ಅವರು ಕೇವಲ ಆಹಾರ ತಜ್ಞರು ಎಂದು ಇ.ಡಿ ಹೇಳಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಆತಿಶಿ ಹೇಳಿದರು.
ಕೇಜ್ರಿವಾಲ್ ಪತ್ರ: ಅರವಿಂದ ಕೇಜ್ರಿವಾಲ್ ಅವರು ತಿಹಾರ ಜೈಲು ವರಿಷ್ಠಾಧಿಕಾರಿಗೆ ಸೋಮವಾರ ಪತ್ರ ಬರೆದು, ತಮ್ಮ ದೇಹದಲ್ಲಿ ಸಕ್ಕರೆ ಮಟ್ಟವು ಹೆಚ್ಚಾಗಿದ್ದು, ಪ್ರತಿದಿನ ಇನ್ಸುಲಿನ್ ನೀಡುವಂತೆ ಕೋರಿದ್ದಾರೆ ಎಂದು ಎಎಪಿ ಮೂಲಗಳು ತಿಳಿಸಿವೆ.
ರಾಜಕೀಯ ಒತ್ತಡದ ಕಾರಣದಿಂದ ತಮ್ಮ ಆರೋಗ್ಯ ಸ್ಥಿತಿಯ ಕುರಿತು ಜೈಲು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಕೇಜ್ರಿವಾಲ್ ಅವರು ಜೈಲು ವರಿಷ್ಠಾಧಿಕಾರಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
‘ಆರೋಗ್ಯದ ಬಗ್ಗೆ ಗಾಬರಿಯಾಗಬೇಕಿಲ್ಲ ಎಂದು ವೈದ್ಯರು ನನಗೆ ಹೇಳಿಯೇ ಇಲ್ಲ. ಬದಲಾಗಿ, ನನ್ನ ಹಿಂದಿನ ವೈದ್ಯಕೀಯ ವರದಿಗಳ ಅಧ್ಯಯನ ನಡೆಸಿ ಸಧ್ಯದ ಸ್ಥಿತಿ ಕುರಿತು ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದ್ದಾರೆ’ ಎಂದು ಬರೆದಿದ್ದಾರೆ. ಆದರೆ, ತಿಹಾರ ಜೈಲು ಆಡಳಿತವು ಈ ಆರೋಪಗಳಿಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ನವದೆಹಲಿ: ಅರವಿಂದ ಕೇಜ್ರಿವಾಲ್ ಅವರಿಗೆ ವಿಶೇಷ ಮಧ್ಯಂತರ ಜಾಮೀನು ನೀಡಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿ ಸಲ್ಲಿಸಿದ್ದ ಕಾನೂನು ವಿದ್ಯಾರ್ಥಿಯೊಬ್ಬರಿಗೆ ದೆಹಲಿ ಹೈಕೋರ್ಟ್ ₹75 ಸಾವಿರ ದಂಡ ವಿಧಿಸಿದೆ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿಗೆ ವಿಶೇಷ ಮಧ್ಯಂತರ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಪ್ರಭಾರ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಅವರಿದ್ದ ನ್ಯಾಯಪೀಠ ಹೇಳಿದೆ.
‘ವಿ ದಿ ಪೀಪಲ್ ಆಫ್ ಇಂಡಿಯಾ’ ಹೆಸರಿನಲ್ಲಿ ಪಿಐಎಲ್ ಸಲ್ಲಿಸಿರುವ ನಾಲ್ಕನೇ ವರ್ಷದ ಕಾನೂನು ವಿದ್ಯಾರ್ಥಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ ‘ಅರ್ಜಿದಾರರು ತರಗತಿಗೆ ಹಾಜರಾಗುತ್ತಿದ್ದಾರೆಯೇ? ಅವರು ಕಾನೂನಿನ ನಿಯಮಗಳನ್ನು ಪಾಲಿಸುವಂತೆ ಕಾಣುತ್ತಿಲ್ಲ’ ಎಂದು ತರಾಟೆಗೆ ತೆಗೆದುಕೊಂಡಿತು.
ಕಾನೂನು ರೀತ್ಯ ಪರಿಹಾರ ಕಂಡುಕೊಳ್ಳಲು ಕೇಜ್ರಿವಾಲ್ ಅವರಿಗೆ ಅವಕಾಶಗಳಿವೆ. ಅದಕ್ಕೂ ಮಿಗಿಲಾಗಿ ಕೇಜ್ರಿವಾಲ್ ಪರವಾಗಿ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ‘ಪವರ್ ಆಫ್ ಅಟಾರ್ನಿ’ ಇಲ್ಲ. ಕೇಜ್ರಿವಾಲ್ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ ಮತ್ತು ನ್ಯಾಯಾಂಗದ ಆದೇಶಗಳಿಗೆ ಒಳಪಟ್ಟಿದ್ದಾರೆ ಎಂದು ಹೇಳಿದೆ.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ಹೊರಡಿಸಿರುವ ಸಮನ್ಸ್ ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮೇ 15ರಂದು ನಡೆಸಲು ದೆಹಲಿ ಹೈಕೋರ್ಟ್ ಪಟ್ಟಿಮಾಡಿದೆ.
ಒತ್ತಾಯದ ಕ್ರಮಗಳಿಂದ ರಕ್ಷಣೆ ನಿಡುವಂತೆ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದ ಹೈಕೋರ್ಟ್ ಇ.ಡಿ ಸಲ್ಲಿಸಿರುವ ಪ್ರತಿಕ್ರಿಯೆಗೆ ಪ್ರತಿಸವಾಲು ಹಾಕಲು ಕೇಜ್ರಿವಾಲ್ ಅವರಿಗೆ ಅವಕಾಶ ನೀಡಿತ್ತು. ಹಣ ಅಕ್ರಮ ವರ್ಗಾವಣೆ ತಡೆ ನೀತಿ (ಪಿಎಂಎಲ್‌ಎ) ಅಡಿ ಕೇಜ್ರಿವಾಲ್ ಅವರ ವಿರುದ್ಧ ಆರಂಭಿಕ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಇಡಿ ಹೈಕೋರ್ಟ್‌ಗೆ ಪ್ರತಿಕ್ರಿಯಿಸಿತ್ತು. ಆ ಹೇಳಿಕೆ ವಿರುದ್ಧವೇ ಪ್ರತಿಸವಾಲು ಹಾಕುವುದಾಗಿ ಕೇಜ್ರಿವಾಲ್ ಪರ ವಕೀಲ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.