ADVERTISEMENT

ಸರ್ವಾಧಿಕಾರಿ ಅಲ್ಲ: ಮೋದಿ

ಪಿಟಿಐ
Published 4 ಜುಲೈ 2018, 4:18 IST
Last Updated 4 ಜುಲೈ 2018, 4:18 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ನಾನು ಜನರ ಪ್ರೀತಿಗೆ ಸ್ಪಂದನೆಯೇ ಇಲ್ಲದ ಚಕ್ರವರ್ತಿ (ಶಹೆನ್‌ಶಾ) ಅಥವಾ ಸರ್ವಾಧಿಕಾರಿ ಅಲ್ಲ. ಜನರ ಜತೆಗಿನ ಸಂವಹನದಿಂದಲೇ ಶಕ್ತಿ ಪಡೆದುಕೊಳ್ಳುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ನಾನು ವಿವಿಧ ಸ್ಥಳಗಳಿಗೆ ಭೇಟಿ ನೀಡಿದಾಗ ಸ್ವಾಗತಿಸಲು, ಶುಭಹಾರೈಸಲು ಸಾಕಷ್ಟು ಜನ ಸೇರುತ್ತಾರೆ. ಎಲ್ಲ ವಯೋಮಾನದ, ಎಲ್ಲ ಸಮುದಾಯಗಳ ಜನರೂ ಇರುತ್ತಾರೆ. ಅಂತಹ ಸಂದರ್ಭದಲ್ಲಿ ನಾನು ಕಾರಿನೊಳಗೇ ಕುಳಿತು ಅವರ ಪ್ರೀತಿಯಿಂದ ದೂರ ಉಳಿಯಲು ಸಾಧ್ಯವಿಲ್ಲ. ಹಾಗಾಗಿ ನಾನು ಕಾರಿನಿಂದ ಇಳಿಯುತ್ತೇನೆ. ಜನರ ಜತೆಗೆ ಎಷ್ಟು ಸಾಧ್ಯವೋ ಅಷ್ಟು ಸಂವಹನ ನಡೆಸುತ್ತೇನೆ’ ಎಂದು ‘ಸ್ವರಾಜ್ಯ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮೋದಿ ಹೇಳಿದ್ದಾರೆ.

ಪ್ರಧಾನಿಯ ಭದ್ರತೆಯನ್ನು ಅಭೂತಪೂರ್ವ ಮಟ್ಟಕ್ಕೆ ಏರಿಸಿದ್ದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.ಪ್ರಧಾನಿಯ ಭದ್ರತೆಗೆ ಹೊಸ ಮಾರ್ಗದರ್ಶಿಸೂತ್ರವನ್ನು ಗೃಹ ಸಚಿವಾಲಯವು ಇತ್ತೀಚೆಗೆ ಸಿದ್ಧಪಡಿಸಿದೆ. 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೋದಿ ಜೀವಕ್ಕೆ ಅತಿ ಹೆಚ್ಚಿನ ಅಪಾಯ ಇದೆ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.

ADVERTISEMENT

ಅವಕಾಶವಾದಿ ಮೈತ್ರಿ:ಮುಂದಿನ ಲೋಕಸಭಾ ಚುನಾವಣೆಯು ಆಡಳಿತ, ಅಭಿವೃದ್ಧಿ ಮತ್ತು ಅರಾಜಕತೆಯ ನಡುವಣ ಆಯ್ಕೆಯಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟವು ಜನಾದೇಶವನ್ನು ಕಸಿದುಕೊಂಡು ಸರ್ಕಾರ ರಚಿಸಿದೆ. ಅಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.

‘ಯಾವ ಚುನಾವಣೆಯಲ್ಲಿಯೇ ಆಗಲಿ, ಸಿದ್ಧಾಂತವಿಲ್ಲದ, ಅವಕಾಶವಾದಿ ಮೈತ್ರಿಕೂಟವು ಅರಾಜಕತೆಯಲ್ಲಿಯೇ ಕೊನೆಯಾಗುತ್ತದೆ ಎಂಬುದು ಖಚಿತ. ಕರ್ನಾಟಕದಲ್ಲಿ ಈಗ ಆಗುತ್ತಿರುವುದು ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬುದರ ಟ್ರೇಲರ್‌’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಚಿವರು ಭೇಟಿಯಾಗಬೇಕು ಎಂಬ ನಿರೀಕ್ಷೆ ಜನರಲ್ಲಿ ಇರುತ್ತದೆ. ಆದರೆ, ಕರ್ನಾಟಕದಲ್ಲಿ ಜಗಳ ಪರಿಹಾರಕ್ಕಾಗಿ ಮಾತ್ರ ಅವರು ಭೇಟಿಯಾಗುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಒಗ್ಗಟ್ಟಿನ ಹಿಂದೆ ಮೋದಿ ದ್ವೇಷ:‘ಮೋದಿ ದ್ವೇಷವೇ ವಿರೋಧ ಪಕ್ಷಗಳನ್ನು ಒಟ್ಟಾಗಿಸಿರುವ ಅಂಟು’ ಎಂದು ಅವರು ಹೇಳಿದ್ದಾರೆ. ಹಾಗಿದ್ದರೂ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ಏರಿಸಲಿದ್ದಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈತ್ರಿಕೂಟವನ್ನು ಅನಿವಾರ್ಯ ಎಂದು ಬಿಜೆಪಿ ನೋಡುತ್ತಿಲ್ಲ, ಬದಲಿಗೆ ವಿಶ್ವಾಸದ ದ್ಯೋತಕ ಎಂದು ಪರಿಗಣಿಸಿದೆ
-ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.