ನವದೆಹಲಿ: ಪಟ್ನಾದಲ್ಲಿ ಪಕ್ಷದ ಕಾರ್ಯಕರ್ತರ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಬಿಹಾರ ಸರ್ಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದರು. ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಸಿಬಿಐ ಆರೋಪಪಟ್ಟಿಯಲ್ಲಿರುವ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ರಕ್ಷಿಸುವ ಪ್ರಯತ್ನದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ನೈತಿಕತೆಯನ್ನು ಮರೆತಿದ್ದಾರೆ ಎಂದು ಟೀಕಿಸಿದ್ದಾರೆ.
ಬಿಹಾರ ಸರ್ಕಾರದ ಶಿಕ್ಷಕರ ನೇಮಕಾತಿ ನೀತಿಯನ್ನು ವಿರೋಧಿಸಿ ವಿಧಾನಸಭೆಯತ್ತ ಮೆರವಣಿಗೆ ನಡೆಸಲು ಪ್ರಯತ್ನಿಸಿದ ಬಿಜೆಪಿಯ ಹಿರಿಯ ನಾಯಕರು ಸೇರಿದಂತೆ ಸಾವಿರಾರು ಕಾರ್ಯಕರ್ತರನ್ನು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿ ಪೊಲೀಸರು ಚದುರಿಸಿದರು. ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ನಡ್ಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪಟ್ನಾದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲಿನ ಲಾಠಿ ಚಾರ್ಜ್ ರಾಜ್ಯ ಸರ್ಕಾರದ ವೈಫಲ್ಯ ಮತ್ತು ಭಯದ ಪ್ರತೀಕವಾಗಿದೆ’ ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ.
‘ಭ್ರಷ್ಟಾಚಾರದ ಕೋಟೆಯನ್ನು ಉಳಿಸಲು ಮಹಾಮೈತ್ರಿ ಸರ್ಕಾರವು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಿದೆ. ಚಾರ್ಜ್ ಶೀಟ್‌ಗೆ ಒಳಗಾಗಿರುವ ವ್ಯಕ್ತಿಯನ್ನು ಉಳಿಸಲು ಬಿಹಾರದ ಮುಖ್ಯಮಂತ್ರಿ ತಮ್ಮ ನೈತಿಕತೆಯನ್ನು ಸಹ ಮರೆತಿದ್ದಾರೆ’ ಎಂದು ನಡ್ಡಾ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.