ADVERTISEMENT

ಜೆಇಇ–ಮೇನ್‌: ತೀವ್ರ ತಪಾಸಣೆ

ಪಿಟಿಐ
Published 3 ಜನವರಿ 2024, 13:31 IST
Last Updated 3 ಜನವರಿ 2024, 13:31 IST
   

ನವದೆಹಲಿ: ಎನ್‌ಐಟಿ ಮತ್ತು ಐಐಐಟಿಗಳಲ್ಲಿನ ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ‘ಜೆಇಇ– ಮೇನ್‌’ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಶೌಚಾಲಯಕ್ಕೆ ಹೋಗಿ ಬಂದ ಬಳಿಕವೂ ಬಯೋಮೆಟ್ರಿಕ್‌ ಹಾಜರಾತಿ ಮತ್ತು ತಪಾಸಣೆಗೆ ಒಳಗಾಗಬೇಕಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಅಧಿಕಾರಿಗಳು ತಿಳಿಸಿದ್ದಾರೆ.

ಪರೀಕ್ಷಾ ಕಾರ್ಯದಲ್ಲಿ ತೊಡಗುವ ಅಧಿಕಾರಿಗಳು, ವೀಕ್ಷಕರು, ಸಿಬ್ಬಂದಿ ಹಾಗೂ ಉಪಹಾರ ನೀಡುವವರೂ ಇದೇ ರೀತಿ ತಪಾಸಣೆಗೆ ಒಳಗಾಗಬೇಕಾಗುತ್ತದೆ ಎಂದು ಹೇಳಿದ್ದಾರೆ.

‘ಈಗಾಗಲೇ ಈ ನಿಟ್ಟಿನಲ್ಲಿ ಎನ್‌ಟಿಎ ಕಠಿಣ ಕಾರ್ಯ ವಿಧಾನಗಳನ್ನು ಹೊಂದಿದೆ. ಆದರೂ, ನಕಲು ಅಭ್ಯರ್ಥಿಗಳ ಹಾಜರಾತಿ ಸೇರಿದಂತೆ ಯಾವುದೇ ರೀತಿಯ ಅಕ್ರಮಕ್ಕೂ ಅವಕಾಶ ಸಿಗದಂತೆ ಎಚ್ಚರವಹಿಸುವ ಉದ್ದೇಶದಿಂದ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ಎನ್‌ಟಿಎ ನಿರ್ದೇಶಕ ಸುಬೋಧ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ADVERTISEMENT

ಪ್ರಸ್ತುತ, ಪರೀಕ್ಷಾ ಕೇಂದ್ರಗಳ ಪ್ರವೇಶದಲ್ಲಿ ಅಭ್ಯರ್ಥಿಗಳನ್ನು ತಪಾಸಣೆಗೆ ಒಳಪಡಿಸಿ, ಬಯೋಮೆಟ್ರಿಕ್‌ ಹಾಜರಾತಿಯನ್ನು ದಾಖಲಿಸುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಇದೇ ರೀತಿಯ ಪ್ರಕ್ರಿಯೆಗಳನ್ನು ಮುಂದೆ ಇತರ ಪರೀಕ್ಷೆಗಳಿಗೂ ವಿಸ್ತರಿಸಲಾಗುತ್ತದೆ ಎಂದು ಸಿಂಗ್‌ ವಿವರಿಸಿದ್ದಾರೆ.

ಇದೇ 24ರಿಂದ ಪರೀಕ್ಷೆ: ಜೆಇಇ–ಮೇನ್‌ (2024) ಪರೀಕ್ಷೆಯು ಜನವರಿ 24ರಿಂದ ಫೆಬ್ರುವರಿ 1ರವರೆವರೆಗೆ ನಡೆಯಲಿದೆ. ಇದು ಕಂಪ್ಯೂಟರ್‌ ಆಧಾರಿತ ಪರೀಕ್ಷೆಯಾಗಿದ್ದು (ಸಿಬಿಟಿ), ಫೆಬ್ರುವರಿ 12ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ಬಾರಿಯ ಪರೀಕ್ಷೆಗೆ ಒಟ್ಟು 12.3 ಲಕ್ಷ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಪರೀಕ್ಷೆ ಎರಡನೇ ಆವೃತ್ತಿ ಏಪ್ರಿಲ್‌ನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.