ADVERTISEMENT

ಪರಿಶೀಲನೆಗೆ ‘ಸುಪ್ರೀಂ’ ಸೂಚನೆ

ಈ ವರ್ಷದಿಂದ ಎಂಬಿಬಿಎಸ್‌ ಪ್ರವೇಶ ಸಂಖ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 26 ಜುಲೈ 2018, 19:50 IST
Last Updated 26 ಜುಲೈ 2018, 19:50 IST
   

ನವದೆಹಲಿ: ಬೆಂಗಳೂರಿನಲ್ಲಿರುವ ಸೇಂಟ್ ಜಾನ್ ವೈದ್ಯಕೀಯ ಕಾಲೇಜು ಸೇರಿದಂತೆ ದೇಶದಾದ್ಯಂತ ಇರುವ ಐದು ವೈದ್ಯಕೀಯ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಂಬಿಬಿಎಸ್ ಪ್ರವೇಶ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಪ್ರಸಕ್ತ ಸಾಲಿನ ಪ್ರವೇಶ ಸಂಖ್ಯೆಯನ್ನು 60ರಿಂದ 100ಕ್ಕೆ ಹೆಚ್ಚಿಸಲು ಅನುಮತಿ ಕೋರಿ ಕಿಶನ್‌ಗಂಜ್‌ನ ಮಾತಾ ಗುಜ್ರಿ ವೈದ್ಯಕೀಯ ಕಾಲೇಜು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌.ಎ. ಬೋಬಡೆ ಹಾಗೂ ಎಲ್‌.ನಾಗೇಶ್ವರರಾವ್‌ ಅವರಿದ್ದ ಪೀಠ ಈ ಸೂಚನೆ ನೀಡಿದೆ.

ಪ್ರವೇಶ ಸಂಖ್ಯೆ ಹೆಚ್ಚಿಸುವಂತೆ ಭಾರತೀಯ ವೈದ್ಯಕೀಯ ಮಂಡಳಿ ಮಾಡಿದ್ದ ಶಿಫಾರಸ್ಸನ್ನು ವಿರೋಧಿಸಿರುವ ಕೇಂದ್ರ ಸರ್ಕಾರವು, ಈ ಕುರಿತು ತಕ್ಷಣವೇ ಪರಿಶೀಲನೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರಿಂದ ಎಲ್ಲ ಕಾಲೇಜುಗಳಿಗೆ ಅನ್ವಯವಾಗುವಂತೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ನ್ಯಾಯಪೀಠ ಆದೇಶ ಹೊರಡಿಸಿದೆ.

ADVERTISEMENT

ಬೆಂಗಳೂರು, ಹರಿಯಾಣದ ಗುರುಗ್ರಾಮ, ಮಹಾರಾಷ್ಟ್ರದ ಲಾತೂರು, ತೆಲಗಾಂವ್, ಪುಣೆ ಮತ್ತು ತಮಿಳುನಾಡಿನ ಚೆನ್ನೈನಲ್ಲಿರುವ ವೈದ್ಯಕೀಯ ಕಾಲೇಜುಗಳೂ ಇದೇ ರೀತಿಯ ಮನವಿ ಸಲ್ಲಿಸಿವೆ. ಮೇ 30ಕ್ಕೆ ಮೊದಲು ತಪಾಸಣೆ ನಡೆಸಿ ವೈದ್ಯಕೀಯ ಮಂಡಳಿ ಸೂಚಿಸಿರುವ ದೋಷಗಳನ್ನು ಈ ಕಾಲೇಜುಗಳು ಸರಿಪಡಿಸಿವೆ. ಹಾಗಾಗಿ, ಪ್ರವೇಶ ಸಂಖ್ಯೆ ಹೆಚ್ಚಿಸಬಹುದೇ ಎಂಬ ಕುರಿತು ಪರಿಶೀಲಿಸಬಹುದು ಎಂದು ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.