ADVERTISEMENT

ಅಂತರ್‌ ಧರ್ಮೀಯ ಜೋಡಿಗೆ ರಕ್ಷಣೆ ನೀಡಲು ಹೈಕೋರ್ಟ್‌ ತಾಕೀತು

​ಪ್ರಜಾವಾಣಿ ವಾರ್ತೆ
Published 22 ಮೇ 2015, 19:44 IST
Last Updated 22 ಮೇ 2015, 19:44 IST

ಬೆಂಗಳೂರು: ‘ಅಂತರ್‌ ಧರ್ಮೀಯ ವಿವಾಹವಾದ ಮಂಗಳೂರಿನ ಜೋಡಿಯೊಂದಕ್ಕೆ ಯಾರಿಂದಲೂ ಕಿರುಕುಳ ಆಗದಂತೆ ನೋಡಿಕೊಳ್ಳಿ’ ಎಂದು ಪೊಲೀಸರಿಗೆ ಹೈಕೋರ್ಟ್‌ ಆದೇಶ ನೀಡಿದೆ.

‘ಈ ಜೋಡಿಗೆ ಮುಂದಿನ ದಿನಗಳಲ್ಲಿ ಯಾರಾದರೂ ಬೆದರಿಕೆ ಒಡ್ಡಿದರೆ, ಹಿಂಸೆ ನೀಡಿದರೆ ಅವರ ವಿರುದ್ಧ ಕಾನೂನು ಅನುಸಾರ ಕ್ರಮ ಕೈಗೊಳ್ಳಬೇಕು’ ಎಂದು ಮಂಗಳೂರಿನ ಉಳ್ಳಾಲ ದಕ್ಷಿಣ ಉಪ ವಿಭಾಗದ ಪೊಲೀಸರಿಗೆ ಸೂಚಿಸಿದೆ.

ಮಂಗಳೂರಿನಲ್ಲಿ ಬಸ್‌ ನಿರ್ವಾಹಕರಾಗಿ ಕೆಲಸ ಮಾಡುತ್ತಿರುವ ಕೃಷ್ಣ ಅವರು (ಹೆಸರು ಬದಲಾಯಿಸಲಾಗಿದೆ) ಅನ್ಯ ಧರ್ಮಕ್ಕೆ ಸೇರಿದ ಫಾತಿಮಾರನ್ನು (ಹೆಸರು ಬದಲಿಸಲಾಗಿದೆ) ಪ್ರೀತಿಸುತ್ತಿದ್ದರು. ಈ ಯುವತಿ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದರು. ಈ ಪ್ರೇಮಿಗಳು 2014ರ ನವೆಂಬರ್‌ನಲ್ಲಿ ವಿವಾಹ ಬಂಧನಕ್ಕೆ ಒಳಪಟ್ಟರು.

ತಾವು ಮದುವೆ ಆಗಿರುವ ವಿಚಾರವನ್ನು ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಮಾಧ್ಯಮವೊಂದರ ಮೂಲಕ ಸಮಾಜಕ್ಕೆ ತಿಳಿಸಿದರು. ನಂತರ ಮದುವೆ ಬಗ್ಗೆ ಯುವತಿಯು ಪಾಲಕರಿಗೂ ಮಾಹಿತಿ ನೀಡಿದರು. ಆದರೆ ತನ್ನ ಮಗಳನ್ನು ಕೃಷ್ಣ  ಅಪಹರಿಸಿದ್ದಾರೆ ಎಂದು ಯುವತಿಯ ತಂದೆ ಉಳ್ಳಾಲ ಪೊಲೀಸರಿಗೆ ದೂರು ನೀಡಿದರು.

ಇದನ್ನು ಆಧರಿಸಿ ಪೊಲೀಸರು ಎಫ್‌ಆರ್‌ ದಾಖಲಿಸಿದ್ದರು. ಇದರ ವಿರುದ್ಧ ಕೃಷ್ಣ ಅವರು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಎನ್‌. ವೇಣುಗೋಪಾಲ ಗೌಡ ನಡೆಸಿದರು.

‘ಯುವತಿಗೆ 18ಕ್ಕಿಂತ ಹೆಚ್ಚು ವರ್ಷ ವಯಸ್ಸಾಗಿದೆ. ತನ್ನಿಷ್ಟದ ವ್ಯಕ್ತಿಯನ್ನು ವರಿಸುವ, ಆತನ ಜೊತೆಗಿರುವ ಹಕ್ಕು ಆಕೆಗಿದೆ. ಅಲ್ಲದೆ, ಅಂತರ್ಜಾತಿ ಅಥವಾ ಅಂತರ್‌ ಧರ್ಮೀಯ ವಿವಾಹವನ್ನು ದೇಶದ ಯಾವುದೇ ಕಾನೂನು ನಿಷೇಧಿಸಿಲ್ಲ. ಹೀಗಿರುವಾಗ ಕೃಷ್ಣ–ಫಾತಿಮಾ ಯಾವುದೇ ತಪ್ಪು ಮಾಡಿಲ್ಲ’ ಎಂದು ನ್ಯಾಯಮೂರ್ತಿ ಗೌಡ ಅವರು ಆದೇಶದಲ್ಲಿ ಹೇಳಿದ್ದಾರೆ.

‘ಅಂತರ್ಜಾತಿ ಅಥವಾ ಅಂತರ್‌ ಧರ್ಮ ವಿವಾಹ ಆಗುವ ಯುವಕ–ಯುವತಿಯರಿಗೆ ಯಾರಿಂದಲೂ ತೊಂದರೆ ಬಾರದಂತೆ ದೇಶದ ಎಲ್ಲ ರಾಜ್ಯಗಳ ಪೊಲೀಸರು ಕಾಳಜಿ ವಹಿಸಬೇಕು. ಇಂಥ ಯುವಕ–ಯುವತಿಯರಿಗೆ ಹಿಂಸೆ ಕೊಡಲು ಯತ್ನಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕು ಎಂಬ ನಿರ್ದೇಶನವನ್ನು ಸುಪ್ರೀಂ ಕೋರ್ಟ್‌ 2006ರಲ್ಲೇ ನೀಡಿದೆ’ ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ನೆನಪಿಸಿದ್ದಾರೆ.
*
ಎಫ್‌ಐಆರ್‌ ರದ್ದು
ಪೊಲೀಸರು ಅಧಿಕಾರ ದುರ್ಬಳಕೆ ಮಾಡಿ ದಂಪತಿ ಮೇಲೆ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ ಎಂದು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡು, ಎಫ್‌ಐಆರ್‌ ರದ್ದುಗೊಳಿಸಿದೆ.

ಸ್ವಇಚ್ಛೆಯ ಮದುವೆ
ಕೋರ್ಟ್‌ನಲ್ಲಿ ಹಾಜರಾಗಿದ್ದ ಫಾತಿಮಾ ಅವರು, ‘ನಾನು ಮತ್ತು ಕೃಷ್ಣ ಬೇರೆ ಬೇರೆ ಧರ್ಮಗಳಿಗೆ ಸೇರಿದ್ದರೂ ಪರಸ್ಪರ ಪ್ರೀತಿಸುತ್ತಿದ್ದೇವೆ. ಕೃಷ್ಣ ನನ್ನನ್ನು ಅಪಹರಿಸಿಲ್ಲ. ಈ ಮದುವೆ ನನ್ನ ಸಮ್ಮತಿಯಿಂದಲೇ ಆಗಿದೆ’ ಎಂದು ಹೇಳಿಕೆ ನೀಡಿದ್ದರು.
*
ದೇಶಕ್ಕಂಟಿದ ಶಾಪ
ಜಾತಿ ವ್ಯವಸ್ಥೆ ದೇಶಕ್ಕೆ ಅಂಟಿರುವ  ಶಾಪ. ಅದು ದೇಶವನ್ನು ಒಡೆಯುತ್ತಿದೆ. ಇದನ್ನು ಎಷ್ಟು ಬೇಗ ಕಿತ್ತೆಸೆಯುತ್ತೇವೋ ಅಷ್ಟು ಒಳ್ಳೆಯದು. ಅಂತರ್ಜಾತಿ ಮದುವೆಗಳು ರಾಷ್ಟ್ರಹಿತಕ್ಕೆ ಪೂರಕ. ಇವುಗಳಿಂದ ಜಾತಿ ವ್ಯವಸ್ಥೆ ಅಳಿಯುತ್ತದೆ. ಅಂತರ್ಜಾತಿ/ ಧರ್ಮೀಯ ವಿವಾಹಿತರ ಮೇಲೆ ದೌರ್ಜನ್ಯ ನಡೆಸುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.
- ಸುಪ್ರೀಂ ಕೋರ್ಟ್‌ 2006ರಲ್ಲಿ ನೀಡಿದ ಆದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.