ADVERTISEMENT

ಅಂತಿಮ ತೀರ್ಮಾನ ನಾಳೆ

81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2014, 19:30 IST
Last Updated 26 ಸೆಪ್ಟೆಂಬರ್ 2014, 19:30 IST

ಹೊಸಪೇಟೆ: ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿ ಸಭೆ ಇದೇ 28ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಗಿರಿಸೀಮೆಯಲ್ಲಿ ನಡೆಯಲಿದೆ. ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷ ಪುಂಡಲೀಕ ಹಾಲಂಬಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ 30 ಜಿಲ್ಲೆಗಳ ಜಿಲ್ಲಾ ಘಟಕ ಗಳ ಅಧ್ಯಕ್ಷರು, ನಾಲ್ಕು ಜನ ಗಡಿ ನಾಡು ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿಯ 10 ಸದಸ್ಯರು ಸೇರಿ ಒಟ್ಟು 44 ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿ ದ್ದಾರೆ.

81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ಆಯ್ಕೆ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದ್ದು, ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಮಡಿಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ­ದಲ್ಲಿ 81ನೇ ಸಾಹಿತ್ಯ ಸಮ್ಮೇಳ­ನದ ಆತಿಥ್ಯವನ್ನು ಹಾವೇರಿಗೆ ವಹಿಸಲಾಗಿತ್ತು. ಆದರೆ, ಸಮ್ಮೇಳನ ಆಯೋಜಿಸಲು ಹಾವೇರಿ ಮತ್ತು ರಾಣೆಬೆನ್ನೂರು ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಈ ಬಗ್ಗೆ ಒಮ್ಮತ ಮೂಡಿಸಲು ಸಾಹಿತ್ಯ ಪರಿಷತ್ತಿನ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ. ಮಾಸಣಗಿ ವಿಫಲರಾದುದರಿಂದ ಹಾವೇರಿಯಿಂದ ಸಮ್ಮೇಳನವನ್ನು ಹಿಂದೆಪಡೆಯಲಾಗಿತ್ತು. ಈಗ ಸಮ್ಮೇಳನದ ಆತಿಥ್ಯ ವಹಿಸಲು ಬಳ್ಳಾರಿ ಹಾಗೂ ಹಾಸನ ಜಿಲ್ಲೆಗಳು ತೀವ್ರ ಪೈಪೋಟಿ ನಡೆಸಿವೆ. ಕಾರ್ಯಕಾರಿ ಸಮಿತಿಯಲ್ಲಿ ಹೆಚ್ಚು ಮತಗಳನ್ನು ಪಡೆಯುವ ಜಿಲ್ಲೆಗೆ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ದೊರೆಯಲಿದೆ.

ಕಾರ್ಯಕಾರಿ ಸಭೆಯ ನಂತರ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ಸಭೆ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಯರಿಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.