ADVERTISEMENT

ಅಕ್ರಮ ಗಣಿಗಾರಿಕೆ ಪ್ರಕರಣ: ಮೇಲ್ಮನವಿ ಸಲ್ಲಿಸದೇ ಕೇಂದ್ರ ಸರ್ಕಾರದ ಮೃದು ಧೋರಣೆ

​ಪ್ರಜಾವಾಣಿ ವಾರ್ತೆ
Published 21 ಮೇ 2017, 10:43 IST
Last Updated 21 ಮೇ 2017, 10:43 IST
ಟಿ.ಬಿ.ಜಯಚಂದ್ರ (ಸಾಂದರ್ಭಿಕ ಚಿತ್ರ)
ಟಿ.ಬಿ.ಜಯಚಂದ್ರ (ಸಾಂದರ್ಭಿಕ ಚಿತ್ರ)   

ತುಮಕೂರು: ‘ಅಕ್ರಮ ಗಣಿಗಾರಿಕೆ ನಡೆಸಿದ ಬಳ್ಳಾರಿ ಗಣಿಧಣಿ ಜನಾರ್ದನರೆಡ್ಡಿ ಮತ್ತು ಅವರ ಸಹೋದರರ ವಿರುದ್ಧದ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಿತ್ತು. ತಾಂತ್ರಿಕ ಕಾರಣದಿಂದ ಪ್ರಕರಣಗಳು ಹೈಕೋರ್ಟ್‌ನಲ್ಲಿ ವಜಾಗೊಂಡವು. ಆದರೆ, ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸದೇ ಮೃದು ಧೋರಣೆ ತಾಳಿದೆ’ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಆರೋಪಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ಈ ರೀತಿ ಮೃದು ಧೋರಣೆ ತಾಳಿರುವುದರಿಂದ ಸಮಾಜಕ್ಕೆ ಏನು ಸಂದೇಶ ರವಾನೆಯಾಗುತ್ತದೆ’ ಎಂದು ಪ್ರಶ್ನಿಸಿದರು.

‘ನಾಲ್ಕು ವರ್ಷವಾದರೂ ಅಕ್ರಮ ಗಣಿಗಾರಿಕೆ ಪ್ರಕರಣಗಳ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಕೆಲವರು ಟೀಕಿಸಿದ್ದಾರೆ. ಗಣಿ ಪ್ರಕರಣ ತನಿಖೆ ವಿಚಾರದಲ್ಲಿ ಸರ್ಕಾರ ಕಣ್ಣುಮುಚ್ಚಿ ಕುಳಿತಿಲ್ಲ’ ಎಂದು ಅವರು ಹೇಳಿದರು.

ADVERTISEMENT

‘70 ಅಕ್ರಮ ಗಣಿಗಾರಿಕೆ ಪ್ರಕರಣಗಳ ಬಗ್ಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ತನಿಖೆ ನಡೆಸುತ್ತಿದೆ. 28 ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಹಾಕಲಾಗಿದೆ.  5 ಪ್ರಕರಣಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.  15 ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ಮಾಡುತ್ತಿದೆ’ ಎಂದು ಅವರು ವಿವರಿಸಿದರು.

‘ಜಂತಕಲ್ ಗಣಿಗಾರಿಕೆ ಪ್ರಕರಣಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ನಾನಾಗಲಿ, ಮುಖ್ಯಮಂತ್ರಿಯಾಗಲಿ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಸುಪ್ರೀಂ ಕೋರ್ಟ್ ಸೂಚನೆ ಪ್ರಕಾರ ಎಸ್‌ಐಟಿ ತನಿಖೆ ನಡೆಸುತ್ತಿದೆ. ವಿನಾಕಾರಣ ಕೆಲವರು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ’ ಎಂದು ಹೇಳಿದರು.

ಈಗ ಎಚ್ಚರ: ಚುನಾವಣೆ ಸಮೀಪಿಸುತ್ತಿರುವುದರಿಂದ ದಲಿತರ ಬಗ್ಗೆ ಈಗ ಬಿಜೆಪಿಯವರಿಗೆ ಎಚ್ಚರ ಆಗಿದೆ. ನಿಜವಾಗಿ ದಲಿತರ  ಬಗ್ಗೆ ಕಾಳಜಿ ಇದ್ದರೆ ದಲಿತರ ಕಾಲೊನಿಗೆ ಹೋಗಿ ಉಪಹಾರ, ಊಟ ಮಾಡುವ ಬದಲು ಕೇಂದ್ರ ಸರ್ಕಾರದಿಂದ ದಲಿತರ ಪರ ಹೆಚ್ಚು ಯೋಜನೆಗಳನ್ನು ಅನುಷ್ಠಾನ ಮಾಡಿಸಲಿ ಎಂದು ಜಯಚಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.