ADVERTISEMENT

ಅಡುಗೆ ಮನೆಯಲ್ಲಿ ಎಲ್ಲವೂ ಕೊರತೆ

ಜಗನ್ನಾಥ ಶೇರಿಕಾರ
Published 3 ಡಿಸೆಂಬರ್ 2016, 3:16 IST
Last Updated 3 ಡಿಸೆಂಬರ್ 2016, 3:16 IST
ಅಡುಗೆ ಮನೆಯಲ್ಲಿ ಎಲ್ಲವೂ ಕೊರತೆ
ಅಡುಗೆ ಮನೆಯಲ್ಲಿ ಎಲ್ಲವೂ ಕೊರತೆ   

ರಾಯಚೂರು: ಹಸಿದು ಬಂದ ಜನರಿಗೆ ಉಣ ಬಡಿಸಲು ತೆರೆದ ಊಟದ ಕೌಂಟರ್‌ಗಳಲ್ಲಿ ಅನ್ನ, ಸಾಂಬರ್‌ ಹಾಗೂ ಪಲ್ಲೆಗೆ ಕೊರತೆಯಾಗಿದ್ದರಿಂದ ಜನರು ಬೆವರು ಸುರಿಸುತ್ತ ಗಂಟೆ ಗಟ್ಟಲೇ ಅಸಹಾಯಕರಾಗಿ ಸರತಿ ಸಾಲಿನಲ್ಲಿಯೇ ನಿಂತಿದ್ದರು.

ಇದು  ಸಾಹಿತ್ಯ ಸಮ್ಮೇಳನದ ಪಾಕ ಶಾಲೆಯಲ್ಲಿ ಶುಕ್ರವಾರ ಕಂಡು ಬಂದ ಚಿತ್ರಣ.

ಬೆಳಿಗ್ಗೆ 11 ಗಂಟೆಯಿಂದಲೇ ಬಂದವರಿಗೆ ಊಟ ಬಡಿಸಲಾಗುತ್ತಿತ್ತು. ಆಗ ಕೌಂಟರ್‌ನಲ್ಲಿ ಹೆಚ್ಚಿನ ಜನ ಸಂದಣಿ ಕಾಣಲಿಲ್ಲ. ಆದರೆ ಮಧ್ಯಾಹ್ನ 1ಗಂಟೆಯಿಂದ 1.30ರ ಹೊತ್ತಿಗೆ ಪ್ರವಾಹದಂತೆ ಜನರು ಹರಿದು ಬಂದಿದ್ದರಿಂದ ಊಟ ಬಡಿಸುವುದರಲ್ಲಿ ಅಸ್ತವ್ಯಸ್ತವಾಯಿತು.

ADVERTISEMENT

ಊಟಕ್ಕಾಗಿ ಜೋಳ ಮತ್ತು ಸಜ್ಜೆ ರೊಟ್ಟಿ, ಬದನೆಕಾಯಿ ಪಲ್ಲೆ, ಸಾಂಬರ್‌, ಗೋಧಿ ಹುಗ್ಗಿ, ಬಿಳಿ ಅನ್ನ, ಹಾಗೂ ಉಪ್ಪಿನಕಾಯಿ ಬಡಿಸಲಾಗುತ್ತಿತ್ತು. ಎಲ್ಲವೂ ಶಿಸ್ತಿನಿಂದ ನಡೆಯುತ್ತಿರುವಾಗ ಮಧ್ಯಾಹ್ನ 1.30ಕ್ಕೆ ಕೆಲವು ಕೌಂಟರ್‌ಗಳಲ್ಲಿ ಬದನೆಕಾಯಿ ಪಲ್ಲೆ ಖಾಲಿ ಆಯಿತು. ಪಲ್ಲೆ ತಯಾರಿ ಆರಂಭಿಸಿದರು. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಗೋಧಿ ಹುಗ್ಗಿಯೂ ಖಾಲಿ ಆಯಿತು. ಜನರ ಒತ್ತಾಯಕ್ಕೆ ಸುಸ್ತಾದ ಅಡುಗೆಯವರು ಶನಿವಾರ ಬಡಿಸಲು ಇಟ್ಟಿದ್ದ ‘ಮೈಸೂರು ಪಾಕ್‌’ ತಂದು ಅರೆಬರೆ ಬಡಿಸಿದರು. ಸ್ವಲ್ಪ ಹೊತ್ತಿನಲ್ಲಿ ಅನ್ನವೂ ಇಲ್ಲವಾಯಿತು. ಅನ್ನ ತಯಾರಿಸುತ್ತಿದ್ದಂತೆ ಸಾಂಬರ್‌ ಕೊರತೆ  ಎದುರಾಯಿತು. ಹೀಗೆ ಒಂದೊಂದೇ ಪದಾರ್ಥದ ಕೊರತೆ ಕಾಡಗಿತು.

‘ಊಟದಲ್ಲಿ ಕೆಲವು ಪದಾರ್ಥ ಕಡಿಮೆ ಬಿದ್ದಿವೆ. ಅವುಗಳು ತಯಾರಿಸುತ್ತಿದ್ದಾರೆ. ಎಲ್ಲರಿಗೂ ಊಟ ನೀಡುತ್ತೇವೆ. ಯಾರು ಗೊಂದಲಕ್ಕೆ ಒಳಗಾಗುವುದು ಬೇಡ’ ಎಂದು ಸಂಘಟಕರು ಮನವಿ ಮಾಡುತ್ತಿದ್ದರು. ಊಟಕ್ಕಿಂತ ಕುಡಿವ ನೀರಿನ ವ್ಯವಸ್ಥೆ ಕಳಪೆಯಾಗಿತ್ತು. ಕೈ ತೊಳೆಯುವುದು ಮತ್ತು ಕುಡಿವ ನೀರಿನ ಎರಡು ವ್ಯವಸ್ಥೆ ಒಂದೇ ಕಡೆ ಮಾಡಿದ್ದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡಬೇಕಾಯಿತು. ಬೆಳಗಿನ ಉಪಾಹಾರಕ್ಕೆ 35ಸಾವಿರ ಜನ ಸೇವಿಸಿದ್ದರು. ಆದರೆ ಯಾವುದೇ ತೊಂದರೆಯಾಗಿರಲಿಲ್ಲ.

ಜನರಿಗೆ ಊಟ ಬಡಿಸಲು 65 ಕೌಂಟರ್‌ ತೆರೆಯಲಾಗಿತ್ತು, ಮಹಿಳೆಯರು, ವೃದ್ಧರು ಹಾಗೂ ಇತರರಿಗೆ ಹೀಗೆ ಮೂರು ರೀತಿಯಲ್ಲಿ ವಿಂಗಡಿಸಲಾಗಿತ್ತು.

‘ಊಟದ ವ್ಯವಸ್ಥೆಯಲ್ಲಿ ಶಿಸ್ತು ಮತ್ತು ಅಚ್ಚುಕಟ್ಟುತನದ ಕೊರತೆಯಿತ್ತು. ಆದರೂ ಪರವಾಗಿಲ್ಲ. ಸಮ್ಮೇಳನ ಅದ್ದೂರಿಯಾಗಿದೆ’ ಎಂದು ಗದಗನ ಪಿ.ಎಂ. ಜಂಬಗೆ ತಿಳಿಸಿದರು.

‘ನಾವು 50ರಿಂದ 60ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಹೊಂದಿದ್ದೆವು. ಆದರೆ 90 ಸಾವಿರಕ್ಕೂ ಮಿಕ್ಕಿ ಜನ ಸೇರಿದ್ದಾರೆ. ಇವರಿಗೆ ಊಟ ಬಡಿಸಲು ಮುಂದಾಗಿದ್ದೇವೆ. ಆದರೂ ಯಾರು ಉಪವಾಸ ಹೋಗದಂತೆ ನೋಡಿಕೊಂಡಿದ್ದೇವೆ. ಇದಕ್ಕಾಗಿ 3ಲಕ್ಷ ರೊಟ್ಟಿ, 80 ಕ್ವಿಂಟಲ್‌ ಅಕ್ಕಿ, 14 ಕ್ವಿಂಟಲ್‌ ಗೋಧಿ ಖರ್ಚಾಗಿದೆ’  ಎಂದು ಸಮಿತಿಯ ವಿಶ್ವನಾಥ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.