ADVERTISEMENT

ಅಣ್ಣಿಗೇರಿ ತಲೆಬುರುಡೆ ಇನ್ನಷ್ಟು ಸಂಶೋಧನೆ ಅಗತ್ಯ

ರಾಜೇಶ್ ರೈ ಚಟ್ಲ
Published 20 ಫೆಬ್ರುವರಿ 2013, 19:59 IST
Last Updated 20 ಫೆಬ್ರುವರಿ 2013, 19:59 IST
ಅಣ್ಣಿಗೇರಿಯಲ್ಲಿ ಪತ್ತೆಯಾದ ತಲೆಬುರುಡೆಗಳು  (ಸಂಗ್ರಹ ಚಿತ್ರ)
ಅಣ್ಣಿಗೇರಿಯಲ್ಲಿ ಪತ್ತೆಯಾದ ತಲೆಬುರುಡೆಗಳು (ಸಂಗ್ರಹ ಚಿತ್ರ)   

                                                                                                                                                                                                                                                                                                                                                                                    
ಹುಬ್ಬಳ್ಳಿ: ಅಣ್ಣಿಗೇರಿ ತಲೆಬುರುಡೆ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸಂಶೋಧನೆ ನಡೆಸುವುದು ಅಗತ್ಯವಾಗಿದೆ ಎಂದು ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ನಿರ್ದೇಶಕ ಡಾ.ಆರ್. ಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲ್ಲಿಸಿರುವ ಅಂತಿಮ ವರದಿಯಲ್ಲಿ ಇಲಾಖೆಯು `ಇದು ಡೋಗಿ ಬರಗಾಲದ ಪರಿಣಾಮ' ಎಂದು ಷರಾ ಹಾಕಿದೆ. ಆದರೆ, `ಪ್ರಜಾವಾಣಿ' ಜತೆ ಮಾತನಾಡಿದ ಡಾ. ಗೋಪಾಲ್,  ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆ ಅಗತ್ಯ ಎಂದು ಹೇಳಿದರು.

`ಅಣ್ಣಿಗೇರಿ ತಲೆಬುರುಡೆ ಕುರಿತು ಕೈಗೊಂಡ ಅಧ್ಯಯನ ವರದಿಯನ್ನು `ಡೋಗಿ ಬರ' ಎಂಬ ಶೀರ್ಷಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಸವರಾಜು ಅವರಿಗೆ ಕಳೆದ ತಿಂಗಳ 15ರಂದು ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

'2010ರಲ್ಲಿ ಪತ್ತೆಯಾದ ಈ ತಲೆಬುರುಡೆಗಳ ಕುರಿತು ಸಾಕಷ್ಟು ಅಧ್ಯಯನ, ಸಂಶೋಧನೆ ನಡೆಸಿದ ಬಳಿಕ ಇವು 180 ವರ್ಷದಷ್ಟು ಹಳೆಯವು ಎಂಬ ತೀರ್ಮಾನಕ್ಕೆ ಬರಲಾಗಿದೆ. ಈ ಹಿನ್ನೆಲೆಯಲ್ಲಿ ಆ ಕಾಲಮಾನದಲ್ಲಿ ಮನುಷ್ಯನ ಆಕಾರ, ಜೀವನ, ಭೌತಿಕ ಸ್ಥಿತಿ ಹೇಗಿತ್ತು ಎಂದು ತಿಳಿಯುವ ಉದ್ದೇಶದಿಂದ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಇದೇ ಉದ್ದೇಶದಿಂದ ಚೆನ್ನೈ ಮೂಲದ, ಆಸ್ಟ್ರೇಲಿಯಾದ ಮೆಲ್ಬರ್ನ್ ವಿಶ್ವವಿದ್ಯಾನಿಲಯದಲ್ಲಿ ಮಾನವಶಾಸ್ತ್ರ ವಿಭಾಗದ ಪ್ರೊ. ರಾಮನ್ ಅವರನ್ನು ಸಂಪರ್ಕಿಸಲಾಗಿದೆ.

ಈ ಯೋಜನೆ ಪೂರ್ಣಗೊಳಿಸಲು ಅವರು 5 ವರ್ಷ ಕಾಲಾವಧಿ ಮತ್ತು ಸುಮಾರು ರೂ.40 ಲಕ್ಷ  ವೆಚ್ಚ ತಗುಲಬಹುದು ಎಂದು ತಿಳಿಸಿದ್ದಾರೆ. ಅವರನ್ನು ಭಾರತಕ್ಕೆ ಕರೆಸಿಕೊಂಡು, ಸಾಧಕಬಾಧಕಗಳ ಬಗ್ಗೆ ಇನ್ನಷ್ಟು ಚರ್ಚೆ ನಡೆಸಿ, ಸದ್ಯದಲ್ಲೆ ಸರ್ಕಾರಕ್ಕೆ ಇನ್ನೊಂದು ವರದಿ ಸಲ್ಲಿಸಲಾಗುವುದು' ಎಂದು ಅವರು ಹೇಳಿದರು. 

`ತಲೆಬುರುಡೆಗಳ ಕುರಿತು ಅಮೆರಿಕದ ಫ್ಲಾರಿಡಾದ ಬೀಟಾ ಅನಾಲಿಟಿಕ್ ಪ್ರಯೋಗಾಲಯದಲ್ಲಿ ನಡೆದ ಪರೀಕ್ಷೆಯಲ್ಲಿ ಇವು 180 ವರ್ಷ ಹಳೆಯವು ಎಂಬ ನಿರ್ಧಾರಕ್ಕೆ ಬರಲಾಗಿದೆ. ಅದೇ ಕಾಲಮಾನದ ಮುಂಬೈ ಸ್ಟೇಟ್ ಗೆಜೆಟಿಯರ್ ತೆಗೆದು ನೋಡಿದಾಗ ಅಣ್ಣಿಗೇರಿ ಸುತ್ತಮುತ್ತಲಿನ ಪ್ರದೇಶ ತೀವ್ರ ಬರಗಾಲಕ್ಕೆ ತುತ್ತಾಗಿದ್ದುದು ತಿಳಿದುಬರುತ್ತದೆ. ಇದನ್ನು `ಡೋಗಿ ಬರಗಾಲ' ಎಂದು ಅಂದು ಕರೆಯಲಾಗಿತ್ತು. ಫ್ಲಾರಿಡಾದಿಂದ ಬಂದ ವರದಿಯ ಕುರಿತು ಮೈಸೂರು ಮಾನಸಗಂಗೋತ್ರಿಯಲ್ಲಿರುವ ಭೌತಶಾಸ್ತ್ರ ಪ್ರಯೋಗಾಲಯದ ಹಿರಿಯ ತಜ್ಞರ ಅಭಿಮತ ಪಡೆಯಲಾಗಿದೆ' ಎಂದರು.

`ಧಾರವಾಡ ಜಿಲ್ಲಾಧಿಕಾರಿಯಾಗಿದ್ದ ದರ್ಪಣ್ ಜೈನ್ ಈ ತಲೆಬುರುಡೆಗಳ ಕುರಿತು ಅಧ್ಯಯನ ನಡೆಸಲು ಇಲಾಖೆಗೆ ವಹಿಸುವ ಜತೆಗೆ, ಒಡಿಶಾದ ಭುವನೇಶ್ವರದಲ್ಲಿ ವೈದ್ಯಕೀಯ ನ್ಯಾಯಶಾಸ್ತ್ರ (ಫ್ಲೊರೆನ್ಸಿಕ್) ಪರೀಕ್ಷೆಯನ್ನೂ ನಡೆಸಿದ್ದರು. ಭುವನೇಶ್ವರದ ವರದಿಯಲ್ಲಿ ಈ ತಲೆಬುರುಡೆಗಳು 630 ವರ್ಷ (60 ವರ್ಷ ಹಿಂದೆಮುಂದಿರಬಹುದು) ಹಿಂದಿನವು ಎಂದು ಉಲ್ಲೇಖಿಸಲಾಗಿದೆ. ಎರಡೂ ವರದಿಗಳನ್ನು ತಾಳೆ ಮಾಡಿದಾಗ ಫ್ಲಾರಿಡಾದ ಅಧ್ಯಯನವೇ ಸರಿ ಎಂದು ಅಂತಿಮ ನಿರ್ಧಾರಕ್ಕೆ ಬರಲಾಯಿತು' ಎಂದು ವಿವರಿಸಿದರು.

'17ನೇ ಶತಮಾನದ ಕೊನೆಯಲ್ಲಿ ಅಣ್ಣಿಗೇರಿ ಸುತ್ತಮುತ್ತ ಬಂದ ಬರಗಾಲಕ್ಕೆ ಅನೇಕ ಜನರು ಗುಳೆ ಹೋಗಿದ್ದರು. ಊರಿನಲ್ಲಿಯೇ ಉಳಿದಿದ್ದವರು ಹಸಿವೆಯಿಂದ ಸತ್ತಿದ್ದರು. ಸತ್ತವರ ಅಂತ್ಯಕ್ರಿಯೆ ಮಾಡಿರಲಿಲ್ಲ. ಅವರ ದೇಹದ ಗಟ್ಟಿ ಎಲುಬುಗಳು ಮತ್ತು ತಲೆಬುರುಡೆಗಳನ್ನು ಹೊರತುಪಡಿಸಿ ಉಳಿದ ಭಾಗಗಳನ್ನು ಪ್ರಾಣಿ, ಪಕ್ಷಿಗಳು ತಿಂದುಹಾಕಿದ್ದವು. ಗುಳೆ ಹೋಗಿದ್ದವರು ವಾಪಸ್ ಬಂದಾಗ ಅಲ್ಲಲ್ಲಿ ತಲೆಬುರುಡೆಗಳು ಬಿದ್ದಿದ್ದವು. ಅವುಗಳನ್ನು ಜೋಡಿಸಿಟ್ಟು ಹೂತು ಹಾಕಿದ್ದರು ಎಂದು ಮುಂಬೈ ಸ್ಟೇಟ್ ಗೆಜೆಟಿಯರ್‌ನಿಂದ ತಿಳಿದುಬರುತ್ತದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.