ADVERTISEMENT

ಅಧಿಕಾರಿಗಳ ತಪ್ಪು: ಎಸ್ಸೆಸ್ಸೆಲ್ಸಿ ಕನಸು ‘ಭಗ್ನ’

ವಿದ್ಯಾರ್ಥಿಗಳನ್ನು ದೂರದ ಪರೀಕ್ಷಾ ಕೇಂದ್ರಕ್ಕೆ ದೂಡಿದ ಇಲಾಖೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2015, 20:24 IST
Last Updated 29 ಮಾರ್ಚ್ 2015, 20:24 IST

ದೇವದುರ್ಗ(ರಾಯಚೂರು ಜಿಲ್ಲೆ): ಅಧಿಕಾರಿಗಳ ತಪ್ಪಿನಿಂದಾಗಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ತಾಲ್ಲೂಕಿನ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳ ತಪ್ಪಿನಿಂದಾಗಿ ಬುಂಕಲದೊಡ್ಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 26 ವಿದ್ಯಾರ್ಥಿಗಳು ಸುಮಾರು 70 ಕಿ.ಮೀ ದೂರದ ಗಬ್ಬೂರಿನ ಪರೀಕ್ಷಾ ಕೇಂದ್ರ, ಗಬ್ಬೂರಿನ ಶ್ರೀ ಶಾಂತಮೂರ್ತಿ ಪ್ರೌಢ ಶಾಲೆಯ 23 ವಿದ್ಯಾರ್ಥಿಗಳು 40ಕಿ.ಮೀ ದೂರದ ಅರಕೇರಾ ಪರೀಕ್ಷಾ ಕೇಂದ್ರ ಮತ್ತು ಕೋತ್ತದೊಡ್ಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು 30ಕಿ.ಮೀ ದೂರದ ಮಸರಕಲ್‌ ಗ್ರಾಮದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಖ್ಯಾಂಶಗಳು

* ಶಿಕ್ಷಣ ಇಲಾಖೆಯ ತಪ್ಪಿನಿಂದಾಗಿ 80ಕ್ಕೂ ವಿದ್ಯಾರ್ಥಿಗಳಿಗೆ ತೊಂದರೆ
* ಸ್ಥಳೀಯ ಪರೀಕ್ಷಾ ಕೇಂದ್ರ ಇದ್ದರೂ 70ಕಿ.ಮೀ ದೂರಕ್ಕೆ ಹೋಗಬೇಕು
* ಕೈಚೆಲ್ಲಿದ ಇಲಾಖೆ, ವಿದ್ಯಾರ್ಥಿ– ಪಾಲಕರಲ್ಲಿ ಗೊಂದಲ

ಈ ಮೊದಲಿನಿಂದಲೂ ಗಬ್ಬೂರು ಗ್ರಾಮದ ಶ್ರೀ ಶಾಂತಮೂರ್ತಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಅದೇ ಗ್ರಾಮದ ಪರೀಕ್ಷಾ ಕೇಂದ್ರದಲ್ಲಿ, ಕೋತ್ತದೊಡ್ಡಿ ಗ್ರಾಮದ ವಿದ್ಯಾರ್ಥಿಗಳು ಪಕ್ಕದ ಅರಕೇರಾ ಪರೀಕ್ಷಾ ಕೇಂದ್ರ ಮತ್ತು ಬುಂಕಲದೊಡ್ಡಿ ಗ್ರಾಮದ ವಿದ್ಯಾರ್ಥಿಗಳು ಪಕ್ಕದ ಜಾಲಹಳ್ಳಿ ಪರೀಕ್ಷಾ ಕೇಂದ್ರದಲ್ಲಿಯೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದರು. ಆದರೆ, ಈ ಬಾರಿ  ಸಮಸ್ಯೆ ನಿರ್ಮಾಣವಾಗಿದೆ.

‘ಯಾರೋ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳು ಕಷ್ಟ ಎದುರಿಸಬೇಕಾಗಿದೆ. ಅದರಲ್ಲಿ ಬಾಲಕಿಯರಿಗೆ ಪರೀಕ್ಷಾ ಅವಧಿಯಲ್ಲಿ ಪ್ರತಿನಿತ್ಯ ದೂರದ ಪರೀಕ್ಷಾ ಕೇಂದ್ರಕ್ಕೆ ಹೋಗಿ ಬರುವುದು ಸಮಸ್ಯೆಯಾಗಿದೆ. ಈ ಎಲ್ಲ ಗೊಂದಲದಿಂದಾಗಿ ಕೆಲವು ಬಾಲಕಿಯರ ಪಾಲಕರು ಪರೀಕ್ಷೆ ಬರೆಯುವುದೇ ಬೇಡ ಎನ್ನುವ ಸ್ಥಿತಿಗೆ ಬಂದಿದ್ದಾರೆ’ ಎಂದು ಪಾಲಕರೊಬ್ಬರು ಹೇಳಿದರು.

‘ಪರೀಕ್ಷಾ ಕೇಂದ್ರ ಬದಲಾದ ಬಗ್ಗೆ  ಇಲಾಖೆಯ ನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ. ಪಾಲಕರೇ ಪರೀಕ್ಷಾ ಕೇಂದ್ರಕ್ಕೆ ತಮ್ಮ ಮಕ್ಕಳನ್ನು ಕರೆದೊಯ್ಯಬೇಕು’ ಎಂದು ಕೋತ್ತದೊಡ್ಡಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿ ವೆಂಕಟಮ್ಮ ಪ್ರತಿಕ್ರಿಯಿಸಿದರು.

*ರಾಜ್ಯ ಪರೀಕ್ಷಾ ಮಂಡಳಿಯಲ್ಲಿ ಆದ ತಪ್ಪಿನಿಂದಾಗಿ ಪರೀಕ್ಷಾ ಕೇಂದ್ರಗಳು ಬದಲಾಗಿವೆ. ಶಾಲಾ ಮುಖ್ಯಸ್ಥರೇ ಈ ಮಕ್ಕಳಿಗೆ ಪರೀಕ್ಷಾ ಕೇಂದ್ರಗಳಿಗೆ ಕಳಿಸುವ ವ್ಯವಸ್ಥೆ ಕಲ್ಪಿಸಬೇಕು.
ಎಚ್‌.ಡಿ.ಹುನುಗುಂದ, ಕ್ಷೇತ್ರ ಶಿಕ್ಷಣಾಧಿಕಾರಿ ದೇವದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.