ADVERTISEMENT

ಅಧಿಕಾರಿಗಳ ತಲೆಯಲ್ಲಿ ದೆವ್ವ ಕೂತಿದೆ: ಕಾಗೋಡು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 19:28 IST
Last Updated 27 ಆಗಸ್ಟ್ 2016, 19:28 IST
ಅಧಿಕಾರಿಗಳ ತಲೆಯಲ್ಲಿ ದೆವ್ವ ಕೂತಿದೆ: ಕಾಗೋಡು
ಅಧಿಕಾರಿಗಳ ತಲೆಯಲ್ಲಿ ದೆವ್ವ ಕೂತಿದೆ: ಕಾಗೋಡು   

ಕಾರವಾರ:  ‘ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ತಲೆಯಲ್ಲಿ ದೆವ್ವ ಕೂತಿದ್ದು, ಅದನ್ನು ಬಿಡಿಸಬೇಕಾಗಿದೆ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಶನಿವಾರ ಇಲ್ಲಿ ಖಾರವಾಗಿ ಪ್ರತಿಕ್ರಿಯಿಸಿದರು.

ಅರಣ್ಯ ಹಕ್ಕು ಕಾಯ್ದೆಯಡಿ ಜಿಲ್ಲೆಯಲ್ಲಿ 92 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಅವುಗಳಲ್ಲಿ ಸುಮಾರು 2 ಸಾವಿರ ಅರ್ಜಿಗಳು ಮಾತ್ರ ಇತ್ಯರ್ಥವಾಗಿದ್ದು, ಉಳಿದ ಅರ್ಜಿಗಳ ವಿಲೇವಾರಿ ವಿಳಂಬವಾಗಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಚಿವರು ಈ ರೀತಿಯಾಗಿ ಉತ್ತರಿಸಿದರು.

ಅರಣ್ಯವಾಸಿಗಳಿಗೆ ಭೂಮಿ ಮಂಜೂರು ಮಾಡಲು 75 ವರ್ಷಗಳ ದಾಖಲೆ ಕೊಡಬೇಕು ಎಂಬ ಅಂಶವನ್ನು ಅಧಿಕಾರಿಗಳು ತಮ್ಮ ತಲೆಯಲ್ಲಿ ತುಂಬಿಕೊಂಡಿದ್ದಾರೆ. ಆದರೆ ಕಾಯ್ದೆಯಲ್ಲಿ ವಿವರಿಸಿರುವಂತೆ 13 ಸಾಕ್ಷ್ಯಗಳ ಪೈಕಿ ಒಂದಕ್ಕಿಂತ ಹೆಚ್ಚು ಸಾಕ್ಷ್ಯ ಒದಗಿಸಿದರೆ ಸಾಕು. ಅಂತಹ ಅರ್ಜಿಗಳನ್ನು ಇತ್ಯರ್ಥಗೊಳಿಸಬಹುದು ಎಂದರು.

ಮತ್ತೊಮ್ಮೆ ಸೂಚನೆ:  ‘ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅರಣ್ಯ ಅತಿಕ್ರಮಣ ಸಮಸ್ಯೆ ಹೆಚ್ಚಾಗಿದೆ. ಡಿಸೆಂಬರ್‌ ಒಳಗೆ ಈ ಸಮಸ್ಯೆಗಳಿಗೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ಇತ್ಯರ್ಥಗೊಳಿಸಬೇಕು ಎಂದು ಸರ್ಕಾರ ಸೂಚಿಸಿದೆ. ಅಧಿಕಾರಿಗಳು ಕಾಯ್ದೆಯಲ್ಲಿನ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಪುಟ ಉಪಸಮಿತಿ ವತಿಯಿಂದ ಮತ್ತೊಮ್ಮೆ ಸೂಚನೆ ಕೊಡಿಸಲಾಗುವುದು’ ಎಂದು ಹೇಳಿದರು.

ಜಗತ್ತು ಯಾರಿಗೋಸ್ಕರ?: ‘ಈ ಜಗತ್ತಿನಲ್ಲಿ ಮನುಷ್ಯನ ಬದುಕಿಗೆ ಮೊದಲ ಆದ್ಯತೆ ಕೊಡಬೇಕು. ಇದರ ಜತೆಗೆ ಅರಣ್ಯ ಸಂರಕ್ಷಣೆ ಕೂಡ ಆಗಬೇಕು. ಭೂಮಿ ಸಮಸ್ಯೆ ಬಗೆಹರಿಸಲು ಹಾಗೂ ಭೂರಹಿತರಿಗೆ ಸಾಗುವಳಿ ಹಕ್ಕು ನೀಡಲು ಅಧಿಕಾರಿಗಳು ಬದ್ಧತೆ ತೋರಬೇಕು’ ಎಂದು ಕಾಗೋಡು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.