ADVERTISEMENT

ಅನುಪಮಾ ಪ್ರಕರಣ: ಬಳ್ಳಾರಿ ಎಸ್ಪಿಗೆ 2ನೇ ನೋಟಿಸ್

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST

ಬೆಂಗಳೂರು:  ಕೂಡ್ಲಿಗಿ ಉಪ–ವಿಭಾಗದ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರ ಮೇಲಿನ ಕಿರುಕುಳ ಆರೋಪ ಸಂಬಂಧ ಜುಲೈ 16ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಬಳ್ಳಾರಿ ಎಸ್ಪಿ ಚೇತನ್ ಅವರಿಗೆ ರಾಜ್ಯಮಹಿಳಾ ಆಯೋಗ ಮತ್ತೊಂದು ನೋಟಿಸ್ ಜಾರಿಗೊಳಿಸಿದೆ.

ಗುರುವಾರ ಆಯೋಗದ ವಿಚಾರಣೆ ಎದುರಿಸಿದ ಶೆಣೈ, ಎಸ್ಪಿ ವಿರುದ್ಧ ತಾವು ಮಾಡಿರುವ ಆರೋಪಗಳಿಗೆ ವಿವರಣೆ ನೀಡಿದರು. ಆಯೋಗದ ನೋಟಿಸ್ ಹೊರತಾಗಿಯೂ ಗೈರಾಗಿದ್ದ ಎಸ್ಪಿ ಚೇತನ್, ತಮ್ಮ ಪರವಾಗಿ ಡಿವೈಎಸ್ಪಿ ಅವರನ್ನು ವಿಚಾರಣೆಗೆ ಕಳುಹಿಸಿದ್ದರು.

ಚೇತನ್ ಅವರ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಯೋಗ, ಜುಲೈ 16ರಂದು ಖುದ್ದು ಕಚೇರಿಗೆ ಹಾಜರಾಗಿ ವಿವರಣೆ ನೀಡಬೇಕೆಂದು ಎಸ್ಪಿಗೆ ಸೂಚಿಸಿದೆ.

ನಂತರ ಸುದ್ದಿಗಾರರ ಜತೆ ಮಾತನಾಡಿದ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ, ‘ಶೆಣೈ ಅವರ ಹೇಳಿಕೆ ಪಡೆಯಲಾಗಿದೆ. ಅವರು ಕಿರುಕುಳಕ್ಕೆ ಒಳಗಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ, ಎಸ್ಪಿ ಅವರ ವಿವರಣೆ ಪಡೆಯದೆ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ಅವರನ್ನು ವಿಚಾರಣೆಗೆ ಕರೆಯಲಾಗಿದೆ’ ಎಂದು ಹೇಳಿದರು. 

ದಾಖಲೆ ಒದಗಿಸಿದ್ದೇನೆ: ‘ನಾನು ರಾಜೀನಾಮೆ ನೀಡಲು ಅಬಕಾರಿ ಲಾಬಿ ಹಾಗೂ ಭೂ ಮಾಫಿಯಾ ಮಾತ್ರ ಕಾರಣವಲ್ಲ. ಬಳ್ಳಾರಿ ಎಸ್ಪಿ ಸೇರಿದಂತೆ ಇಲಾಖೆಯ ಕೆಲ ಅಧಿಕಾರಿಗಳ ಅಸಹಕಾರ ನನ್ನಲ್ಲಿ ಬೇಸರ ತಂದಿತ್ತು. ನಾನು ಮಾಡಿರುವ ಆರೋಪಗಳಿಗೆ ಪೂರಕ ದಾಖಲೆಗಳನ್ನು ಆಯೋಗಕ್ಕೆ ಒದಗಿಸಿದ್ದೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದ ಅನುಪಮಾ ಶೆಣೈ, ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಸ್ಟೇಟಸ್‌ಗಳು ಪ್ರಕಟವಾದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಕೆಲ ದಿನಗಳ ಹಿಂದೆ ಶೆಣೈ ಅವರು ಎಸ್ಪಿ ಚೇತನ್ ವಿರುದ್ಧ ಕಿರುಕುಳ ಆರೋಪ ಹೊರಿಸಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಅದರ ಅನ್ವಯ ಜೂನ್ 30ರಂದು ವಿಚಾರಣೆಗೆ ಹಾಜರಾಗುವಂತೆ ಶೆಣೈ ಹಾಗೂ ಎಸ್ಪಿಗೆ ಆಯೋಗ ನೋಟಿಸ್ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.