ADVERTISEMENT

ಅಮ್ಮಣಗಿ ಜಿ.ಪಂ ಕ್ಷೇತ್ರದಲ್ಲಿ ಇಬ್ಬರು ಕುಬೇರರು!

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2016, 19:38 IST
Last Updated 9 ಫೆಬ್ರುವರಿ 2016, 19:38 IST
ಅಮ್ಮಣಗಿ ಜಿ.ಪಂ ಕ್ಷೇತ್ರದಲ್ಲಿ ಇಬ್ಬರು ಕುಬೇರರು!
ಅಮ್ಮಣಗಿ ಜಿ.ಪಂ ಕ್ಷೇತ್ರದಲ್ಲಿ ಇಬ್ಬರು ಕುಬೇರರು!   

ಹುಕ್ಕೇರಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಅಮ್ಮಣಗಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಸ್ಪರ್ಧಿಸಿರುವವರ ಪೈಕಿ ಇಬ್ಬರು ಮುಖಂಡರ ಪುತ್ರರು ಕೋಟ್ಯಧೀಶರು.
ಬಿಜೆಪಿ ಶಾಸಕ ಉಮೇಶ ಕತ್ತಿ ಅವರ ಪುತ್ರ ನಿಖಿಲ್ ಮತ್ತು ಮಾಜಿ ಸಚಿವ ಎ.ಬಿ. ಪಾಟೀಲ (ಕಾಂಗ್ರೆಸ್‌) ಅವರ ಮಗ ವಿನಯ್‌  ಕಣದಲ್ಲಿದ್ದಾರೆ. ಇಬ್ಬರೂ ಪ್ರಥಮ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಒಟ್ಟು ₹ 31 ಕೋಟಿ:  ಬಿಜೆಪಿ ಅಭ್ಯರ್ಥಿ ನಿಖಿಲ್ ಕತ್ತಿ, ಚರಾಸ್ತಿ ₹ 5 ಕೋಟಿ ಹಾಗೂ ಸ್ಥಿರಾಸ್ತಿ ₹ 26 ಕೋಟಿ ಸೇರಿ ಒಟ್ಟು ₹ 31 ಕೋಟಿ ಎಂದು ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ.

ತಮ್ಮ ಬಳಿ ₹50 ಸಾವಿರ, ಪತ್ನಿ ಬಳಿ ₹10 ಸಾವಿರ ನಗದು ಇದೆ.  ವಿವಿಧ ಬ್ಯಾಂಕುಗಳಲ್ಲಿ ₹17.98 ಲಕ್ಷ ಠೇವಣಿ ಹಾಗೂ ಪತ್ನಿ ₹9.75 ಲಕ್ಷ  ಠೇವಣಿ ಇಟ್ಟಿದ್ದಾರೆ. ತಮ್ಮ ಬಳಿ ₹ 5,40 ಲಕ್ಷ ಮೌಲ್ಯದ ಬಂಗಾರ, ₹ 2.48 ಲಕ್ಷ ಮೌಲ್ಯದ ಬೆಳ್ಳಿ ಹಾಗೂ ಪತ್ನಿಯ ಬಳಿ ₹ 21.06 ಲಕ್ಷ ಮೌಲ್ಯದ ಚಿನ್ನದ ಆಭರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ.

ವಿವಿಧ ಕಂಪೆನಿಗಳಲ್ಲಿ ₹ 4.45 ಕೋಟಿ ಮೌಲ್ಯದ ಷೇರು ಮತ್ತು ಬಾಂಡ್‌ಗಳು, ಅಂಚೆ ಕಚೇರಿಯಲ್ಲಿ ಎನ್.ಎಸ್‌.ಸಿ, ಎಲ್ಐಸಿ ಪಾಲಿಸಿಗಳಲ್ಲಿ ₹ 3.07 ಲಕ್ಷ ತೊಡಗಿಸಿರುವುದಾಗಿ ಘೋಷಿಸಿಕೊಂಡಿದ್ದಾರೆ. ತಮ್ಮ ಹೆಸರಿನಲ್ಲಿ ₹ 28.35 ಲಕ್ಷ  ಬೆಲೆಬಾಳುವ ಕಾರು, ಪತ್ನಿ ಹೆಸರಿನಲ್ಲಿ  ₹ 16.33 ಲಕ್ಷ ಮೌಲ್ಯದ ಕಾರು ಇದೆ. ಇದಲ್ಲದೇ ಸುಮಾರು ₹ 7.50 ಕೋಟಿ ಮೌಲ್ಯದ ಜಮೀನು ಇದೆ.

ಒಟ್ಟು ₹ 1.21 ಕೋಟಿ: ಕಾಂಗ್ರೆಸ್ ಅಭ್ಯರ್ಥಿ ವಿನಯ್‌ ಪಾಟೀಲ,  ಚರಾಸ್ತಿ ₹ 28.75 ಲಕ್ಷ  ಹಾಗೂ ಸ್ಥಿರಾಸ್ತಿ ₹ 84.31 ಲಕ್ಷ  ಸೇರಿ ಒಟ್ಟು ₹ 1.21 ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ವಿನಯ್‌ ಅವರ ಬಳಿ ₹ 60 ಸಾವಿರ ಹಾಗೂ ಪತ್ನಿ ಅಶ್ವಿನಿ ಬಳಿ ₹25 ಸಾವಿರ ನಗದು ಇದೆ. ಬ್ಯಾಂಕಿನಲ್ಲಿ ₹1.80 ಲಕ್ಷ ಠೇವಣಿ ಇದೆ. ವಿನಯ್‌ ಹೆಸರಿನಲ್ಲಿ ವಿವಿಧ ಕಂಪೆನಿಗಳಲ್ಲಿ ₹ 6.90 ಲಕ್ಷ ಮೌಲ್ಯದ ಷೇರುಗಳಿವೆ.

ಇದಲ್ಲದೇ ₹1.10 ಲಕ್ಷ ಮೌಲ್ಯದ ಎನ್‌.ಎಸ್‌.ಸಿ, ₹ 5.60 ಲಕ್ಷ ಮೊತ್ತದ ಎಲ್ಐಸಿ ಪಾಲಿಸಿ ಹೊಂದಿದ್ದಾರೆ. ವಿನಯ್‌ ₹ 2.75 ಲಕ್ಷ  ಮೌಲ್ಯದ ಚಿನ್ನಾಭರಣ ಹೊಂದಿದ್ದರೆ, ಪತ್ನಿಯ ಬಳಿ ₹ 5.50 ಲಕ್ಷ ಬೆಲೆಬಾಳುವ ಚಿನ್ನಾಭರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.