ADVERTISEMENT

ಅಮ್ಮನ ಅನೈತಿಕ ಸಂಬಂಧಕ್ಕೆ ಮಕ್ಕಳೂ ಬಲಿ!

ಸಿ.ಎ ಓದುತ್ತಿದ್ದ ನೆರೆಮನೆಯ ಯುವಕ ಎಸಗಿದ ಕೃತ್ಯ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2015, 19:30 IST
Last Updated 17 ಆಗಸ್ಟ್ 2015, 19:30 IST

ಬೆಳಗಾವಿ: ಯುವಕನೊಂದಿಗೆ ಅನೈತಿಕ ಸಂಬಂಧ ಬೆಳೆಸಿದ ಗೃಹಿಣಿಯೊಬ್ಬಳು ಇಬ್ಬರು ಮಕ್ಕಳ ಜೊತೆಗೆ ತನ್ನ ಪ್ರಾಣವನ್ನೂ ಕಳೆದುಕೊಂಡ ಹೃದಯವಿದ್ರಾವಕ ಘಟನೆಯಿದು. ಸಖ್ಯ ಬೆಳೆಸಿದ ವ್ಯಕ್ತಿಯೇ ‘ಗೆಳತಿ’ಯ ಜತೆಗೆ ಅವರ ಕರುಳ ಕುಡಿಗಳನ್ನೂ ಹೊಸಕಿ ಹಾಕಿದ ಕಥೆಯಿದು.

ಬಟ್ಟೆ ವ್ಯಾಪಾರಿ ರಾಕೇಶ ಮಾಲಗತ್ತಿ ಅವರ ಪತ್ನಿ ರೀನಾ (37), ಮಕ್ಕಳಾದ ಆದಿತ್ಯ (11) ಮತ್ತು ಸಾಹಿತ್ಯಾ (4) ಅವರನ್ನು ಭಾನುವಾರ ಬೆಳಗಿನಜಾವ ಕೊಲೆ ಮಾಡಲಾಗಿತ್ತು. ಪೊಲೀಸರು ಕೇವಲ 12 ಗಂಟೆಯೊಳಗೆ ಪ್ರಕರಣವನ್ನು ಭೇದಿಸಿ, ನೆರೆ ಮನೆಯ ಪ್ರವೀಣ ಸುಬ್ರಹ್ಮಣ್ಯ ಭಟ್‌ ಎಂಬ ಸಿ.ಎ. ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.

ಆರೋಪಿಯು ಪೊಲೀಸರಿಗೆ ತನಿಖೆ ವೇಳೆ ಬಹಿರಂಗಪಡಿಸಿದ ಮಾಹಿತಿಯನ್ನು ಪೊಲೀಸ್ ಕಮಿಷನರ್ ಎಸ್‌. ರವಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ‘ಪ್ರವೀಣ ಮತ್ತು ರೀನಾ ಅವರ ಪರಿಚಯ ಸ್ನೇಹಕ್ಕೆ ತಿರುಗಿ, ಕೆಲವೇ ದಿನಗಳಲ್ಲಿ ಅನೈತಿಕ ಸಂಬಂಧವೂ ಏರ್ಪಟ್ಟಿತ್ತು.

‘ಪತಿ ಮನೆಯಲ್ಲಿ ಇಲ್ಲದಿದ್ದ ಸಂದರ್ಭದಲ್ಲಿ ರೀನಾ ಕರೆಯ ಮೇರೆಗೆ, ಹಗ್ಗದ ಸಹಾಯದಿಂದ ಗೋಡೆ ಏರಿ ತಾರಸಿ ಮೂಲಕ ಯುವಕ ಅವರ ಮನೆಗೆ ಬರುತ್ತಿದ್ದ. ಕೆಲ ತಿಂಗಳಾದ ಬಳಿಕ ಈ ಸಂಬಂಧದಿಂದ ಬೇಸತ್ತು ಆಕೆಯಿಂದ ದೂರವಾಗಲು ಆತ ಬಯಸಿದ್ದ. ಆದರೆ, ರೀನಾ ಇದಕ್ಕೆ ವಿರೋಧಿಸಿ, ಪದೇ ಪದೇ ಆತನಿಗೆ ಕರೆ ಮಾಡುತ್ತಿದ್ದರು. ಹೀಗಾಗಿ ಆತ ತನ್ನ ಮೊಬೈಲ್‌ ಸಂಖ್ಯೆಯನ್ನು ಮೂರು ಬಾರಿ ಬದಲಾಯಿಸಿದ್ದ.

ರೀನಾ ಪತಿ ಗೋವಾಕ್ಕೆ ತೆರಳಿದ್ದರಿಂದ ಶನಿವಾರ ರಾತ್ರಿ 11.30ರ ಸುಮಾರಿಗೆ ಆಕೆ ಬಲವಂತವಾಗಿ ಪ್ರವೀಣನನ್ನು ಮನೆಗೆ ಕರೆಸಿಕೊಂಡಿದ್ದರು. ತಮ್ಮ  ಮನೆಯಲ್ಲಿದ್ದುಕೊಂಡು ಕಾಲೇಜಿಗೆ ಹೋಗುತ್ತಿದ್ದ ಹರ್ಷ ರೆಡೇಕರ ಮಲಗಿದ್ದ ಕೋಣೆಗೆ ರೀನಾ ಹೊರಗಿನಿಂದ ಚಿಲಕ ಹಾಕಿದ್ದರು.

ಬಳಿಕ ಪ್ರವೀಣ್‌ ಜತೆ ಮದ್ಯ ಸೇವಿಸಿ ಸುಮಾರು 2 ಗಂಟೆ  ಕಾಲ ಮಾತುಕತೆ ನಡೆಸಿದ್ದಾರೆ. ತಾವಿಬ್ಬರೂ ಇನ್ನು ದೂರವಾಗೋಣ ಎಂದು ಈ ಸಂದರ್ಭದಲ್ಲಿ  ಪ್ರವೀಣ   ಕೋರಿಕೊಂಡಿದ್ದಾನೆ.

ಇದಕ್ಕೆ ರೀನಾ ಒಪ್ಪದಿದ್ದಾಗ ಇಬ್ಬರ ನಡುವೆ ಜಗಳವಾಗಿದೆ. ಬೆಳಗಿನ ಜಾವ 3ರ ಸುಮಾರಿಗೆ ಆತ ರೀನಾ ಮನೆಯಿಂದ ವಾಪಸ್ಸಾಗಿದ್ದಾನೆ. ಆಕೆಯಿಂದ ಮುಕ್ತಿ ಪಡೆಯಲೇಬೇಕು ಎಂದು ನಿರ್ಧರಿಸಿದ ಆತ ಮತ್ತೆ 3.30ರ ಸುಮಾರಿಗೆ  ರೀನಾಳ ಮನೆಗೆ ಬಂದಿದ್ದಾನೆ. ಚಾಕುವಿನಿಂದ ಗೆಳತಿಯ ಕತ್ತು ಹಾಗೂ ತಲೆಗೆ ಹಲವು ಬಾರಿ ಇರಿದು ಕೊಂದಿದ್ದಾನೆ. ಮಕ್ಕಳಿಬ್ಬರು ಇದನ್ನು ನೋಡುತ್ತಿದ್ದುದನ್ನು ಕಂಡು ಗಾಬರಿಯಿಂದ ಅವರಿಬ್ಬರನ್ನೂ  ಕೊಲೆ ಮಾಡಿದ್ದಾನೆ. ನಂತರ ಬೆಳಿಗ್ಗೆ 4ರ ಸುಮಾರಿಗೆ ಪೈಪ್‌ ಸಹಾಯದಿಂದ ತಾರಸಿಯಿಂದ ಜಿಗಿದು ತನ್ನ ಮನೆ  ಸೇರಿಕೊಂಡಿದ್ದಾನೆ.

‘ಮೊಬೈಲ್‌ ಕರೆಗಳ ವಿವರ ಆಧರಿಸಿ ತನಿಖೆ ನಡೆಸಿದಾಗ ಪ್ರವೀಣನೊಂದಿಗೆ ಆಕೆ ಹಲವು ಬಾರಿ ಸಂಭಾಷಣೆ ನಡೆಸಿರುವುದು ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ಪ್ರವೀಣನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅನೈತಿಕ ಸಂಬಂಧದಿಂದ ಮುಕ್ತಿ ಪಡೆಯಲು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೊಲೆ ಮಾಡಿದ್ದನ್ನು ನೋಡಿದ ಮಕ್ಕಳು ವೈರಿಗಳಂತೆ ಕಂಡು ಬಂದುದರಿಂದ ಅವರನ್ನೂ ಕೊಂದಿರುವುದಾಗಿ ಹೇಳಿದ್ದಾನೆ. ಆತನ ಮನೆಯಲ್ಲಿ ರಕ್ತದ ಕಲೆಯಿರುವ ಜಾಕೆಟ್‌ ಸಹ ಪತ್ತೆಯಾಗಿದೆ’ ಎಂದು ರವಿ ತಿಳಿಸಿದರು.

ನ್ಯಾಯಾಂಗ ಬಂಧನ: ಪ್ರವೀಣ ಭಟ್‌ನನ್ನು 4ನೇ ಜೆ.ಎಂ.ಎಫ್‌.ಸಿ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇದೇ 28ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪಾಲಕರಿಗೆ ಮತ್ತೊಂದು ಆಘಾತ
ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪ್ರವೀಣ ತಂದೆ, ಮಾಜಿ ಸೈನಿಕ ಸುಬ್ರಹ್ಮಣ್ಯ ಭಟ್‌ ಅವರಿಗೆ ಈ ಘಟನೆಯು ಎರಡನೇ ದೊಡ್ಡ ಆಘಾತವಾಗಿದೆ.

ಕೆಲವು ವರ್ಷಗಳ ಹಿಂದೆ ಅವರ ಎರಡನೇ ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ. ಇದೀಗ ದೊಡ್ಡ ಮಗನೂ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾನೆ.

‘ಅಮಾನುಷವಾಗಿ ಮಕ್ಕಳನ್ನು ಕೊಲೆ ಮಾಡಲಾಗಿದೆ. ಯಾರೇ ತಪ್ಪಿತಸ್ಥರಿದ್ದರೂ ಶಿಕ್ಷೆಯಾಗಬೇಕು. ನನ್ನ ಮಗನೇ ಕೊಲೆ ಮಾಡಿದ್ದರೂ ಆತನಿಗೆ ಶಿಕ್ಷೆ ವಿಧಿಸಬೇಕು. ರೀನಾ ಜೊತೆ ಪ್ರವೀಣ ಮಾತನಾಡಿದ್ದನ್ನು ನಾವು ಎಂದಿಗೂ ನೋಡಿಲ್ಲ.  ಪ್ರಕರಣದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸುಬ್ರಹ್ಮಣ್ಯ ಭಟ್‌, ‘ಪ್ರಜಾವಾಣಿ’ಗೆ ಪ್ರತಿಕ್ರಿಯಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT