ADVERTISEMENT

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಆತಂಕ

ವೈದ್ಯಕೀಯ ಸೀಟು: ಒಂದೇ ದಿನ ಕಾಮೆಡ್‌ ಕೆ– ಕೆಆರ್​ಎಲ್​ಎಂಪಿಸಿಎ ಕೌನ್ಸೆಲಿಂಗ್‌

ರವಿ ಎಸ್.ಬಳೂಟಗಿ
Published 27 ಆಗಸ್ಟ್ 2016, 19:35 IST
Last Updated 27 ಆಗಸ್ಟ್ 2016, 19:35 IST

ಕಲಬುರ್ಗಿ: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆ ಕೌನ್ಸೆಲಿಂಗ್‌ಗೆ ಕಾಮೆಡ್–ಕೆ ಹಾಗೂ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳ ಒಕ್ಕೂಟ (ಕೆಆರ್​ಎಲ್​ಎಂಪಿಸಿಎ) ನಿಗದಿಪಡಿಸಿದ ದಿನಾಂಕ ಒಂದೇ ಆಗಿದ್ದು, ಅಲ್ಪಸಂಖ್ಯಾತರ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿದೆ.

ಈ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಯನ್ನು ಕಾಮೆಡ್‌–ಕೆ ಆಗಸ್ಟ್‌ 18ರಿಂದ ಆರಂಭಿಸಿದೆ. ಸೆ.8ರಿಂದ 10ರ ವರೆಗೆ ಮೊದಲ ಹಂತದ ಕೌನ್ಸೆಲಿಂಗ್‌ ನಡೆಸಲಿದೆ. ಸೆ.9ರಂದೇ ಕೆಆರ್​ಎಲ್​ಎಂಪಿಸಿಎ ಕೂಡ ಕಲಬುರ್ಗಿಯ ಖಾಜಾ ಬಂದೇ ನವಾಜ್‌(ಕೆಬಿಎನ್‌) ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮೊದಲ ಹಂತದ ಸೀಟು ಹಂಚಿಕೆ ಕೌನ್ಸೆಲಿಂಗ್‌ ನಡೆಸಲಿದೆ. ಏಕಕಾಲದಲ್ಲಿ ಎರಡು ಕಡೆ ಕೌನ್ಸೆಲಿಂಗ್‌ ನಡೆಯುತ್ತಿರುವುದು ವಿದ್ಯಾರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಕೋಟಾದಲ್ಲಿ ಆಯ್ಕೆ ಬಯಸುವವರು ಗೊಂದಲಕ್ಕೆ ಒಳಗಾಗಿದ್ದಾರೆ.

ಕಲಬುರ್ಗಿಯ ಕೆಬಿಎನ್‌ ಕಾಲೇಜು, ವಿಜಯಪುರದ ಅಲ್‌–ಅಮೀನ್‌ ವೈದ್ಯಕೀಯ ಕಾಲೇಜು ಹಾಗೂ ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವೈದ್ಯಕೀಯ ಕಾಲೇಜುಗಳಾಗಿವೆ. ರಾಜ್ಯದ ವಿವಿಧೆಡೆ ಐದು ದಂತ ವೈದ್ಯಕೀಯ ಕಾಲೇಜುಗಳಿವೆ. ಅವುಗಳಲ್ಲಿ 192 ವೈದ್ಯಕೀಯ, 209 ದಂತ ವೈದ್ಯ ಸೀಟುಗಳು ಲಭ್ಯ.

ಕಾಮೆಡ್‌–ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಕೌನ್ಸೆಲಿಂಗ್‌ ನಡೆಸಲಿದೆ. ಕೆಆರ್​ಎಲ್​ಎಂಪಿಸಿಎ ಕಲಬುರ್ಗಿಯಲ್ಲಿಯೂ ಕೌನ್ಸೆಲಿಂಗ್‌ ನಡೆಸಲಿದೆ. ಎರಡೂ ಸ್ಥಳದಲ್ಲಿ ವಿದ್ಯಾರ್ಥಿಗಳ ಖುದ್ದು ಹಾಜರಿ ಕಡ್ಡಾಯ. ಎಲ್ಲಿ ಹಾಜರಾಗಬೇಕೆಂಬುದು ಆಕಾಂಕ್ಷಿಗಳ ಗೊಂದಲ .

‘ಎನ್‌ಇಇಟಿಯಲ್ಲಿ 1,98,144 ಸಾಮಾನ್ಯ ರ್‍ಯಾಂಕ್‌ ಹಾಗೂ ಅಲ್ಪಸಂಖ್ಯಾತರ ವಿಭಾಗದಲ್ಲಿ 78,055 ರ್‍ಯಾಂಕ್‌ ಬಂದಿದೆ. ಕಾಮೆಡ್‌–ಕೆ ಸೀಟು ಗಿಟ್ಟಿಸುವುದು ಕಷ್ಟ.ಕೆಆರ್​ಎಲ್​ಎಂಪಿಸಿಎಯಲ್ಲಿ ಸೀಟು ಲಭಿಸುವ ವಿಶ್ವಾಸವಿದೆ. ಆದರೆ, ಸೆ.9ರಂದೇ ಎರಡೂ ಕಡೆ ಕೌನ್ಸೆಲಿಂಗ್‌ ನಿಗದಿ ಆಗಿರುವುದರಿಂದ ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ’ ಎನ್ನುತ್ತಾರೆ ವೈದ್ಯಕೀಯ ಸೀಟು ಆಕಾಂಕ್ಷಿ ಸಾಧಿಯಾ ಜೈಬ್‌.

‘ಕಾಮೆಡ್‌–ಕೆ ಮೊದಲು ವೇಳಾಪಟ್ಟಿ ಪ್ರಕಟಿಸಿದೆ. ಕೆಆರ್​ಎಲ್​ಎಂಪಿಸಿಎ ಪ್ರತಿಭಾವಂತರಿಗೆ ಸೀಟು ತಪ್ಪಿಸುವ ಹುನ್ನಾರ ನಡೆಸಿದೆ. ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್‌ನಿಂದ ದೂರವಿಟ್ಟು ಹಣವುಳ್ಳವರಿಗೆ ಸೀಟು ನೀಡುವ ದುರುದ್ದೇಶ ಹೊಂದಿದೆ’ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.

‘ಕೌನ್ಸೆಲಿಂಗ್‌ಗೆ ಕೆಲವೇ ದಿನ ಉಳಿದಿವೆ. ಕೆಆರ್​ಎಲ್​ಎಂಪಿಸಿಎ ಸೂಕ್ತ ತೀರ್ಮಾನ ಕೈಗೊಂಡು ಕೌನ್ಸೆಲಿಂಗ್‌ ದಿನಾಂಕ ಬದಲಾಯಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

2ನೇ ಹಂತದಲ್ಲೂ ಸಮಸ್ಯೆ: ಇನ್ನೊಂದೆಡೆ ಕಾಮೆಡ್‌–ಕೆ 2ನೇ ಹಂತದ ಕೌನ್ಸೆಲಿಂಗ್‌ ಸೆ.20ರಿಂದ 22ರ ವರೆಗೆ ನಡೆಯಲಿದೆ. ಸೆ.20ರಂದೇ ಕೆಆರ್​ಎಲ್​ಎಂಪಿಸಿಎ ಸಹ ಎರಡನೇ ಹಂತದ ಸೀಟು ಹಂಚಿಕೆಯ ಕೌನ್ಸೆಲಿಂಗ್‌ ನಿಗದಿಪಡಿಸಿದೆ. ಇದೂ ಸಹ ವಿದ್ಯಾರ್ಥಿಗಳನ್ನು ಸಮಸ್ಯೆಗೆ ಸಿಲುಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.