ADVERTISEMENT

ಆಂಧ್ರ ಉದ್ಯಮಿಗೆ ಗುಂಡಿಕ್ಕಿ ಕೊಲೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2014, 19:44 IST
Last Updated 30 ಆಗಸ್ಟ್ 2014, 19:44 IST

ಬೆಂಗಳೂರು: ಆಂಧ್ರಪ್ರದೇಶ ಮೂಲದ ಉದ್ಯಮಿಯೊಬ್ಬರನ್ನು ಗುಂಡಿಕ್ಕಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ನ ಸುಭಾಷ್‌ (35) ಬಂಧಿತ ಆರೋಪಿ. ಗ್ರಾನೈಟ್‌ ಉದ್ಯಮಿಯಾದ ಆತ, ತನ್ನ ಸ್ನೇಹಿತ ವೆಂಕಟರಾಮ್‌ (51) ಎಂಬುವರನ್ನು ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಡದ ವೆಂಕಟರಾಮ್‌ ಅವರು ನಗರದ ವೈಟ್‌ಫೀಲ್ಡ್‌ನಲ್ಲಿನ ಬಿಎಂಟಿಸಿ ವಾಣಿಜ್ಯ ಸಂಕೀರ್ಣದ ಒಂದು ಭಾಗವನ್ನು ಭೋಗ್ಯಕ್ಕೆ ಪಡೆದು, ಶುಭ ಸಮಾರಂಭಗಳಿಗೆ ಬಾಡಿಗೆಗೆ ಕೊಡುತ್ತಿದ್ದರು. ಆ ವಾಣಿಜ್ಯ ಸಂಕೀರ್ಣದ ಕೊಠಡಿಯೊಂದರಲ್ಲಿ ವಾಸವಾಗಿದ್ದ ಅವರು ಬಾಡಿಗೆಯ ವಹಿವಾಟು ನೋಡಿಕೊಳ್ಳಲು ಚೆನ್ನೈ ಮೂಲದ ನಿರಂಜಿನಿ ಎಂಬ ಯುವತಿಯನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದರು.

ಸುಮಾರು ಎರಡು ತಿಂಗಳ ಹಿಂದೆ ಹೈದರಾಬಾದ್‌ನಿಂದ ನಗರಕ್ಕೆ ಬಂದು ಸ್ನೇಹಿತ ವೆಂಕಟರಾಮ್‌ ಅವರನ್ನು ಭೇಟಿಯಾಗಿದ್ದ ಸುಭಾಷ್‌, ನಿರಂಜಿನಿಯನ್ನು ಪರಿಚಯ ಮಾಡಿಕೊಂಡಿದ್ದ. ನಂತರ ಆತ ಆಕೆಯನ್ನು ಮದುವೆಯಾಗಲು ನಿರ್ಧರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ವೆಂಕಟರಾಮ್‌ ಅವರು ನಿರಂಜಿನಿ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಸುಭಾಷ್‌, ಇತ್ತೀಚೆಗೆ ಈ ವಿಷಯ ತಿಳಿದು ಕೋಪಗೊಂಡಿದ್ದ. ಸೋಮವಾರ (ಆ.25) ನಗರಕ್ಕೆ ಬಂದಿದ್ದ ಆತ ವೆಂಕಟರಾಮ್‌ ಅವರೊಂದಿಗೆ ಕೊಠಡಿಯಲ್ಲಿ ತಂಗಿದ್ದ. ಆಗ ನಿರಂಜಿನಿಯೂ ಕೊಠಡಿಯಲ್ಲಿದ್ದಳು. ಈ ವೇಳೆ ವೆಂಕಟರಾಮ್‌ ಮತ್ತು ಸುಭಾಷ್‌ ನಡುವೆ ನಿರಂಜಿನಿ ವಿಷಯವಾಗಿ ವಾಗ್ವಾದ ನಡೆದಿದೆ.

ನಂತರ ಜಗಳ ವಿಕೋಪಕ್ಕೆ ತಿರುಗಿ ಆತ ತನ್ನ ರಿವಾಲ್ವರ್‌ನಿಂದ ಅವರ ಮೇಲೆ ಗುಂಡು ಹಾರಿಸಿ, ನಿರಂಜಿನಿಯನ್ನು ಕರೆದುಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂಕೀರ್ಣದ ಮತ್ತೊಂದು ಕೊಠಡಿಯಲ್ಲಿ ತಂಗಿದ್ದ ವೆಂಕಟರಾಮ್‌ ಅವರ ಕಾರು ಚಾಲಕ ರಾಜು ಎಂಬಾತ ಮಂಗಳವಾರ (ಆ.26) ನಸುಕಿನಲ್ಲಿ ತನ್ನ ಮಾಲೀಕನ ಕೊಠಡಿಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ ವೆಂಕಟರಾಮ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದ. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಬುಧವಾರ ರಾತ್ರಿ ಮೃತಪಟ್ಟರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ನಂತರ ಸುಭಾಷ್‌, ನೆಲ್ಲೂರಿಗೆ ಹೋಗಿ ತಲೆಮರೆಸಿಕೊಂಡಿದ್ದ. ಆತನ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಶನಿವಾರ ಬಂಧಿಸಲಾಗಿದೆ.

ಆತನಿಂದ ಕೃತ್ಯಕ್ಕೆ ಬಳಸಿದ್ದ ಪರವಾನಗಿಯುಳ್ಳ ರಿವಾಲ್ವರ್‌ ಜಪ್ತಿ ಮಾಡಲಾಗಿದೆ. ಮತ್ತೊಬ್ಬ ಆರೋಪಿ ನಿರಂಜಿನಿಯ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.