ADVERTISEMENT

ಆದರೂ ತಾತನ ಏಕಾಂಗಿ ಪ್ರಚಾರ!

ಮನೆ ತುಂಬ ಮಕ್ಕಳು, ಮೊಮ್ಮಕ್ಕಳು

ಕೆ.ನರಸಿಂಹ ಮೂರ್ತಿ
Published 27 ಮೇ 2015, 19:30 IST
Last Updated 27 ಮೇ 2015, 19:30 IST
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಯ 2ನೇ ವಾರ್ಡಿಗೆ ಸ್ಪರ್ಧಿಸಿರುವ 91 ವಯಸ್ಸಿನ ತಿಮ್ಮಯ್ಯ ಬುಧವಾರ ಏಕಾಂಗಿಯಾಗಿ ಪ್ರಚಾರದಲ್ಲಿ ತೊಡಗಿದ್ದರು.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಯ 2ನೇ ವಾರ್ಡಿಗೆ ಸ್ಪರ್ಧಿಸಿರುವ 91 ವಯಸ್ಸಿನ ತಿಮ್ಮಯ್ಯ ಬುಧವಾರ ಏಕಾಂಗಿಯಾಗಿ ಪ್ರಚಾರದಲ್ಲಿ ತೊಡಗಿದ್ದರು.   

ಬಳ್ಳಾರಿ: ತೊಂಬತ್ತೊಂದನೇ ಇಳಿ ವಯಸ್ಸಿನಲ್ಲಿ ಗ್ರಾಮ ಪಂಚಾಯ್ತಿ ಚುನಾವಣಾ ಅಖಾಡಕ್ಕೆ ಧುಕುಕಿರುವ ತಿಮ್ಮಯ್ಯ ಅವರದು ಏಕಾಂಗಿ ಹೋರಾಟ. ಪ್ರಚಾರದಲ್ಲಿ ಊರು ಗೋಲು ಮತ್ತು ಕುಂದದ ಉತ್ಸಾಹ ಮಾತ್ರ ಅವರ ಜತೆಗಿದೆ.

ಅವರಿಗೆ ಏಳು ಮಕ್ಕಳು, 20 ಮೊಮ್ಮಕ್ಕಳು ಮತ್ತು 10 ಮರಿ ಮಕ್ಕಳು ಇದ್ದರೂ ಯಾರೂ ಈ ಅಜ್ಜನ ಪರವಾಗಿ ಮತಯಾಚಿಸುತ್ತಿಲ್ಲ!

ಅವರ ಕೈಯಲ್ಲಿ ನೂರಾರು ಕರಪತ್ರಗಳಿಲ್ಲ. ಡಿಟಿಪಿ ಸೆಂಟರಿನಲ್ಲಿ ತಯಾರಿಸಿದ ಒಂದು ಬಿಳಿಯ ಕರಪತ್ರ ವನ್ನೇ ಅಗತ್ಯಕ್ಕೆ ತಕ್ಕಷ್ಟು ಜೆರಾಕ್ಸ್ ಮಾಡಿಸಿಕೊಂಡು ಅವರು ಪ್ರಚಾರ ನಡೆಸುತ್ತಿದ್ದಾರೆ. ಕೈ ಮುಗಿದು ಮತ ಕೇಳುವುದೇ ಅವರ ಪ್ರಚಾರದ ವೈಖರಿ.

ಪತ್ನಿ ಮೃತಪಟ್ಟ ಬಳಿಕ ಮಕ್ಕಳ ಮೇಲೆ ಅವಲಂಬಿತರಾಗದೆ, ವಿಧವೆ ಮಗಳು ಬೋರಮ್ಮನವರ ಆರೈಕೆಯಲ್ಲಿ ಜೀವನ ಸಾಗಿಸುತ್ತಿರುವ ಈ ವಯೋವೃದ್ಧರು ತಮ್ಮ ಐದು ಎಕರೆ ಜಮೀನಿನಲ್ಲಿ ಕೂಲಿ ಯವರನ್ನೂ ಹೆಚ್ಚಾಗಿ ನೆಚ್ಚಿಕೊಳ್ಳದೇ ಅವರೇ ಶೇಂಗಾ ಬೆಳೆಯುತ್ತಾರೆ.

ಪಂಚಾಯಿತಿ ವ್ಯಾಪ್ತಿಯ ನಡು ವನಹಳ್ಳಿ ನಿವಾಸಿಯಾದ ತಿಮ್ಮಯ್ಯ 2010ರಲ್ಲಿ ನಡೆದಿದ್ದ ಗ್ರಾಮ ಪಂಚಾ ಯಿತಿ ಚುನಾವಣೆಯಲ್ಲೂ ಸ್ಪರ್ಧಿಸಿ ಸೋತಿದ್ದರು. ಈ ಬಾರಿಯೂ ಅವರು ಕಣಕ್ಕೆ ಇಳಿದಿರುವುದು ಗ್ರಾಮಸ್ಥರಲ್ಲಿ ಸೋಜಿಗ ಮೂಡಿಸಿದೆ.

ಅವರನ್ನು ಭೇಟಿ ಮಾಡಲು ‘ಪ್ರಜಾವಾಣಿ’ ಪ್ರತಿನಿಧಿ ಬುಧವಾರ ನಡುವನಹಳ್ಳಿಗೆ ಭೇಟಿ ನೀಡಿದ ವೇಳೆ ಅವರು ಅಲ್ಲಿಂದ ಸುಮಾರು ಒಂದೂವರೆ ಕಿ.ಮೀ ದೂರದ ತಿಮ್ಮನಹಳ್ಳಿಗೆ ಪ್ರಚಾ ರಕ್ಕೆಂದು ನಡೆದುಕೊಂಡೇ ಹೋಗಿದ್ದರು. ಅಲ್ಲಿಗೆ ತೆರಳಿದಾಗ ಅವರು ಅಲ್ಲಿರಲಿಲ್ಲ. ಮತ್ತೆ ಹುಡುಕಾಡಿದಾಗ ನಡುವನ ಹಳ್ಳಿಯಿಂದ ಸುಮಾರು ಒಂದೂವರೆ ಕಿ.ಮೀ ದೂರದ ಕೆ.ದಿಬ್ಬನಹಳ್ಳಿಯ ಅಂಗಡಿಯಲ್ಲಿ ಪ್ರಚಾರ ಕರಪತ್ರವನ್ನು ಜೆರಾಕ್ಸ್ ಮಾಡಿಸುತ್ತಿದ್ದರು! ಉರಿಬಿ ಸಿಲಲ್ಲಿ ಅಲ್ಲಿಗೂ ಅವರು ನಡೆದೇ ಬಂದಿದ್ದರು.

ಇದೇಕೆ ಹೀಗೆ? ಎಂದು ಕೇಳಿದರೆ, ತಲೆ ಮೇಲಿದ್ದ ಬಟ್ಟೆಯಿಂದ ಬೆವರು ಒರೆಸಿಕೊಳ್ಳುತ್ತಾ 'ನಾನು ಬಡವ. ಎಲ್ಲಿಂದ ದುಡ್‌ ತರ್ಲಿ’ ಎಂದು ಪ್ರಶ್ನಿಸಿದರು. ’ಒಂದೆರಡು ಕರಪತ್ರವನ್ನು ಕೊಡಿ’ ಎಂದು ಕೇಳಿದಾಗ, ‘ಒಂದು ತಗೊಳ್ಳಿ ಸಾಕು. ಬೇರೆಯವ್ರಿಗ್ ಕೊಡ್ಬೇಕ್. ಕಡಿಮೆ ಐತೆ’ ಎಂದು ಒಂದೇ ಕರಪತ್ರ ಕೊಟ್ಟರು. 

ಈ ವಯಸ್ಸಿನಲ್ಲಿ ಸ್ಪರ್ಧಿಸಿದ್ದು ಯಾಕೆ? ಎಂಬ ಪ್ರಶ್ನೆಗೆ ಥಟ್ಟನೆ ಉತ್ತರಿಸಿದ ಅವರು, ‘ಕಳೆದ್ ಬಾರಿ ಮಾಡಿದ್ ಸಾಲಾನಾ ಇನ್ನೂ ತೀರ್ಸಿಲ್ಲ. ಬಡ್ವರ್ಗೆ ಮನೆ ಕಟ್ಕೊಡೋ ಆಸೆನೂ ಈಡೇರ್ಲಿಲ್ಲ’ ಎಂದು ಮೌನವಾದರು. ‘ಇನ್ನೂ ಜಾಸ್ತಿ ಕೆಲ್ಸ ಐತೆ’ ಎನ್ನುತ್ತಾ ಬಿಸಿಲಲ್ಲೇ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.