ADVERTISEMENT

ಆದೇಶ ಜಾರಿಗೆ ಆತುರ ಇಲ್ಲ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 27 ಮೇ 2017, 19:30 IST
Last Updated 27 ಮೇ 2017, 19:30 IST
ಆದೇಶ ಜಾರಿಗೆ ಆತುರ ಇಲ್ಲ: ಸಿ.ಎಂ
ಆದೇಶ ಜಾರಿಗೆ ಆತುರ ಇಲ್ಲ: ಸಿ.ಎಂ   
ಬೆಂಗಳೂರು: ‘ಕೊಲ್ಲುವ ಉದ್ದೇಶಕ್ಕಾಗಿ ಜಾನುವಾರುಗಳ ಮಾರಾಟಕ್ಕೆ ನಿಷೇಧ ಹೇರಿರುವ ಕೇಂದ್ರ ಸರ್ಕಾರದ ಆದೇಶ ಜಾರಿಗೆ ಆತುರವಿಲ್ಲ. ಇದು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯ  ವಿಷಯವಾಗಿದ್ದು, ಪರಿಶೀಲಿಸಿ ತೀರ್ಮಾನಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
 
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಆದೇಶ ಸಾಮಾಜಿಕ ಸಂಘರ್ಷಕ್ಕೆ ಎಡೆ ಮಾಡಿಕೊಡಲಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
 
ಬಿಜೆಪಿ ರಾಜ್ಯ ನಾಯಕರು ಈ ಆದೇಶವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆದರೆ, ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಸಚಿವರು ಕೇಂದ್ರದ ಆದೇಶದ ಸಾಧಕ–ಬಾಧಕ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.
 
‘ಕೇಂದ್ರದ ಈ ಆದೇಶ ಜಾರಿಗೊಳಿಸುವುದು ರಾಜ್ಯಕ್ಕೆ ಅನಿವಾರ್ಯವೇ’ ಎಂಬ ಪ್ರಶ್ನೆಗೆ ಕಲಬುರ್ಗಿಯಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,  ‘ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಈಗಾಗಲೇ ಜಾರಿಯಲ್ಲಿದೆ. ಕೇಂದ್ರ ಸರ್ಕಾರದ ಈ ಆದೇಶ ಸಂವಿಧಾನಬದ್ಧವಾಗಿದೆಯೇ ಎಂಬುದನ್ನೂ ಪರಿಶೀಲಿಸಬೇಕಾಗುತ್ತದೆ’ ಎಂದರು.
 
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ‘ಈ ಆದೇಶ ಯಾವುದೇ ಧರ್ಮ, ಜನಾಂಗದ ವಿರುದ್ಧ ಇರಕೂಡದು. ಸಂಘರ್ಷಕ್ಕೆ ಎಡೆ ಮಾಡಿಕೊಡದಂತೆ ಇರಬೇಕು’  ಎಂದು ಅಭಿಪ್ರಾಯಪಟ್ಟರು.
 
‘ಗೆಜೆಟ್‌ ಅಧಿಸೂಚನೆಯ ಪ್ರತಿ ಇನ್ನೂ ನನಗೆ ಸಿಕ್ಕಿಲ್ಲ. ಅದರ ಬಗ್ಗೆ ಸಂಪೂರ್ಣ ವಿವರ ಪಡೆಯುತ್ತೇನೆ. ಗೋವುಗಳ ರಕ್ಷಣೆ ಹಾಗೂ ಜನರ ಭಾವನೆಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಇಲ್ಲಿ ಆಹಾರ ಹಕ್ಕಿನ ಪ್ರಶ್ನೆಯೂ ಉದ್ಭವಿಸಲಿದೆ’ ಎಂದರು.  
 
ಕೊರಟಗರೆಯಲ್ಲಿ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್‌, ‘ಗೋಹತ್ಯೆ ನಿಷೇಧ ಕಾಯ್ದೆ ಈಗಾಗಲೇ ರಾಜ್ಯದಲ್ಲಿ ಇದೆ. ಆದರೂ ಬಿಜೆಪಿಯವರು ಅದನ್ನು ಹೊಸದಾಗಿ ಜಾರಿಗೆ ತರುತ್ತಿರುವಂತೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ’  ಎಂದು ಟೀಕಿಸಿದರು. 
****
ಈ ಆದೇಶದ ಮೂಲಕ ದೇಶದ ಅಸಂಖ್ಯಾತ ಹಿಂದೂಗಳ ಭಾವನೆಗಳನ್ನು ಗೌರವಿಸಿದಂತಾಗಿದೆ. ಇದು ಮೋದಿ ಸರ್ಕಾರದ ದೊಡ್ಡ ಸಾಧನೆ
ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ
****

ವೃದ್ಧ ತಂದೆ, ತಾಯಿಯರನ್ನೇ ಮಕ್ಕಳು ಸಾಕುವುದು ಕಷ್ಟವಾಗಿರುವ ಈ ಕಾಲದಲ್ಲಿ, ನಿರರ್ಥಕ ಗೋವುಗಳನ್ನು ಸಾಕುವುದು ಕಷ್ಟದ ಕೆಲಸ 
ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.