ADVERTISEMENT

ಆನ್‌ಲೈನ್‌ ಕಳ್ಳರಿಗೆ ವರದಾನ ‘ನಗದುರಹಿತ ವ್ಯವಹಾರ’

ಸಂತೋಷ ಜಿಗಳಿಕೊಪ್ಪ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ಆನ್‌ಲೈನ್‌ ಕಳ್ಳರಿಗೆ ವರದಾನ ‘ನಗದುರಹಿತ ವ್ಯವಹಾರ’
ಆನ್‌ಲೈನ್‌ ಕಳ್ಳರಿಗೆ ವರದಾನ ‘ನಗದುರಹಿತ ವ್ಯವಹಾರ’   

ಬೆಂಗಳೂರು: ಗರಿಷ್ಠ ಮುಖಬೆಲೆಯ ನೋಟು ರದ್ದಾದ ಬಳಿಕ ನಗದುರಹಿತ ವ್ಯವಹಾರ ಹೆಚ್ಚು ಚಾಲ್ತಿಗೆ ಬಂದಿದೆ. ಆದರೆ, ಇದು ಆನ್‌ಲೈನ್‌ ಕಳ್ಳರಿಗೆ ವರದಾನವಾಗಿದೆ.

ರಾಜ್ಯದ ಹಲವು ಉದ್ಯಮಿಗಳ, ವ್ಯಾಪಾರಸ್ಥರ, ಸರ್ಕಾರಿ ನೌಕರರ  ಹಾಗೂ ಖಾಸಗಿ ಉದ್ಯೋಗಿಗಳ ಬ್ಯಾಂಕ್‌ ಖಾತೆಗೆ  ಕನ್ನ ಹಾಕುತ್ತಿರುವ ಕಳ್ಳರು, ಕೋಟ್ಯಂತರ ರೂಪಾಯಿ ದೋಚಿದ್ದಾರೆ. ಈ ವಂಚನೆ ಕುರಿತು ರಾಜ್ಯದ ಹಲವು ಪೊಲೀಸ್‌ ಠಾಣೆ ಹಾಗೂ ಸಿಐಡಿಯ ಸೈಬರ್‌ ವಿಭಾಗಕ್ಕೆ ಪ್ರತಿದಿನ 10ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.

‘ಬ್ಯಾಂಕ್‌, ಜಿಎಸ್‌ಟಿ, ಆರ್‌ಬಿಐ ಹಾಗೂ ತೆರಿಗೆ ಇಲಾಖೆ ಅಧಿಕಾರಿಗಳ ಹೆಸರಿನಲ್ಲಿ ಗ್ರಾಹಕರ ಮೊಬೈಲ್‌ಗಳಿಗೆ  ಕರೆ ಮಾಡುತ್ತಿರುವ ಕಳ್ಳರು, ಬ್ಯಾಂಕ್‌ ಖಾತೆ ವಿವರ ಪಡೆದುಕೊಳ್ಳುತ್ತಿದ್ದಾರೆ. ನೈಜ ಅಧಿಕಾರಿಗಳೇ ಕರೆ ಮಾಡಿರಬಹುದು ಎಂದು ನಂಬಿ ಗ್ರಾಹಕರು ಸಹ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಅದರಿಂದ ಕ್ಷಣಾರ್ಧದಲ್ಲಿ ಲಕ್ಷಾಂತರ ರೂಪಾಯಿ ಅಪರಿಚಿತ ಖಾತೆಗೆ ವರ್ಗಾವಣೆ ಆಗುತ್ತಿದೆ’ ಎಂದು ಸಿಐಡಿಯ ಸೈಬರ್‌ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷದಲ್ಲಿ ಇಂಥ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.  ಸೈಬರ್‌ ವಿಭಾಗಕ್ಕೆ ದಿನಕ್ಕೆ 2ರಿಂದ 3 ಪ್ರಕರಣ ಬರುತ್ತವೆ. ಆದರೆ, ದಿನಪ್ರತಿ  ರಾಜ್ಯದ 10ಕ್ಕೂ ಹೆಚ್ಚು ಠಾಣೆ ಅಧಿಕಾರಿಗಳಿಂದ ಇಂಥ ಪ್ರಕರಣಗಳ ತನಿಖೆಗೆ ಸಹಕಾರ ನೀಡುವಂತೆ ಪತ್ರ ಬರುತ್ತಿವೆ’ ಎಂದು ಅವರು ವಿವರಿಸಿದರು.

‘ಬಿಹಾರ ಹಾಗೂ ಜಾರ್ಖಂಡ್‌ನಲ್ಲಿರುವ ಖದೀಮರು ಇಂಥ ಕೃತ್ಯ ಎಸಗುತ್ತಿರುವ ಬಗ್ಗೆ ಮಾಹಿತಿ ಇದೆ.  ಅವರು ದಿನಕ್ಕೊಂದು ಸಿಮ್‌ ಬಳಸುತ್ತಿದ್ದು, ಹೀಗಾಗಿ ಅವರ ಜಾಗ ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ. ಈ ಜಾಲವನ್ನು ಭೇದಿಸಲು ವಿಶೇಷ ತಂಡವೇ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದರು.

ಕಳ್ಳರ ಜಾಲದ ಕಾರ್ಯನಿರ್ವಹಣೆ: ಇಂದು ಹಲವರ ಬ್ಯಾಂಕ್‌ ಖಾತೆಯಲ್ಲಿ ಹಣ ಜಮಾವಣೆ ಹೆಚ್ಚಿದೆ. ಅದನ್ನು ದೋಚಲು ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ. ಖಾತೆಯಲ್ಲಿ ಹೆಚ್ಚು ಹಣ ಉಳ್ಳ ಗ್ರಾಹಕರ ಮೊಬೈಲ್‌ ನಂಬರ್‌, ಖಾತೆ ವಿವರ ಸಂಗ್ರಹಿಸಲು ಜಾಲದ ಕೆಲ ಸದಸ್ಯರು ಕೆಲಸ ಮಾಡುತ್ತಿದ್ದಾರೆ.

ಗ್ರಾಹಕರ ಮೊಬೈಲ್‌ಗೆ ಕರೆ ಮಾಡುವ ಖದೀಮರು ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಮಾತನಾಡಿ ಅಧಿಕಾರಿಗಳೆಂದು ಪರಿಚಯ ಮಾಡಿಕೊಳ್ಳುತ್ತಾರೆ. ನಂತರ, ‘ನಿಮ್ಮ ಖಾತೆ ಬ್ಲಾಕ್‌ ಆಗಿದೆ. ಖಾತೆಯ ಮಾಹಿತಿಯನ್ನು ಖಾತ್ರಿಪಡಿಸಬೇಕಿದ್ದು, ಸಹಕರಿಸಿ’ ಎಂದು ವಿನಂತಿ ಮಾಡುತ್ತಾರೆ.

ಇಂಥ ಕರೆ ಬಂದರೆ ಏನು ಮಾಡಬೇಕು?

ಯಾವುದೇ ಬ್ಯಾಂಕ್‌, ತೆರಿಗೆ ಹಾಗೂ ಜಿಎಸ್‌ಟಿ ಅಧಿಕಾರಿಗಳು ಮೊಬೈಲ್‌ಗೆ ಕರೆ ಮಾಡಿ ಮಾಹಿತಿ ಕೇಳುವುದಿಲ್ಲ. ಇಂಥ ಕರೆಗಳು ಬಂದರೆ ಕಡಿತಗೊಳಿಸುವುದು ಒಳ್ಳೆಯದು.

ಮಾಹಿತಿ ಕೊಟ್ಟರೆ ಏನು ಮಾಡಬೇಕು?: ಕೆಲಸದ ಒತ್ತಡ ಹಾಗೂ ಯಾವುದೇ ಸಂದರ್ಭದಲ್ಲಿ ಇಂಥ ಕರೆಗಳಿಗೆ ಸ್ಪಂದಿಸಿ ಮಾಹಿತಿ ಕೊಟ್ಟರೆ, ಕೂಡಲೇ ಬ್ಯಾಂಕ್‌ ಗ್ರಾಹಕರ ಸೇವಾ ಕೇಂದ್ರ ಅಥವಾ ಸಂಬಂಧಿತ ಬ್ಯಾಂಕ್‌ ಅಧಿಕಾರಿಗಳಿಗೆ (ಅವರ ಮೊಬೈಲ್‌ ನಂಬರ್‌ ತಮ್ಮ ಬಳಿ ಇಟ್ಟುಕೊಳ್ಳಬೇಕು) ತಿಳಿಸಬೇಕು. ಕಾರ್ಡ್‌ ಬ್ಲಾಕ್‌ ಮಾಡುವಂತೆ ಹೇಳಬೇಕು.

ಬಳಿಕ ‘ಎಟಿಎಂ ಕಾರ್ಡ್‌ ಮೇಲಿನ 14  ಅಂಕಿಗಳು ಹಾಗೂ 3 ಸಂಖ್ಯೆಗಳ ಸಿ.ವಿ.ಸಿ ನಂಬರ್‌ ಕೊಡಿ’ ಎಂದು ಕೇಳುತ್ತಾರೆ.

ಅದಾದ ನಂತರ, ‘ನಿಮ್ಮ  ಮೊಬೈಲ್‌ ನಂಬರ್‌ಗೆ ಕೋಡ್‌ (ಒನ್‌ ಟೈಂ ಪಾಸ್‌ವರ್ಡ್‌) ಬಂದಿದೆ. ಅದನ್ನು ಹೇಳಿದರೆ, ನಿಮ್ಮ ಖಾತೆ ಮಾಹಿತಿ ಖಾತ್ರಿಯಾಗಲಿದ್ದು, ಯಾವುದೇ ಸಮಸ್ಯೆ ಇರುವುದಿಲ್ಲ’ ಎಂದು ಕೊನೆಯದಾಗಿ ಹೇಳುತ್ತಾರೆ.

ಆ ಕೋಡ್‌ ಅನ್ನು ಗ್ರಾಹಕರು ಕೊಡುತ್ತಿದ್ದಂತೆ ಅವರ ಖಾತೆಯಿಂದ ತಲಾ ₹10 ಸಾವಿರದಂತೆ ಹಣವನ್ನು ಖದೀಮರು, ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ. ಆ ಮೇಲೆ ಏಕಾಏಕಿ ಕರೆ ಕಡಿತಗೊಳಿಸುತ್ತಾರೆ. ಅವಾಗಲೇ ಗ್ರಾಹಕರ ಮೊಬೈಲ್‌ಗೆ ಹಣ ಡ್ರಾ ಮಾಡಿದ ಮಾಹಿತಿ  ಬರುತ್ತಿರುತ್ತದೆ ಎಂದು ಸೈಬರ್‌ ವಿಭಾಗದ ಅಧಿಕಾರಿ ಹೇಳಿದರು.

ಉದ್ಯಮಿಗಳು, ಸರ್ಕಾರಿ ನೌಕರರು ಟಾರ್ಗೆಟ್‌: ‘ಇಂಥ ಜಾಲದಿಂದಾಗಿ ಹಣ ಕಳೆದುಕೊಂಡವರಲ್ಲಿ ಉದ್ಯಮಿಗಳು, ಸರ್ಕಾರಿ ನೌಕರರೇ ಹೆಚ್ಚಾಗಿದ್ದಾರೆ’ ಎಂದು ಸಿಐಡಿ ಅಧಿಕಾರಿ ಹೇಳಿದರು.

‘ಸದ್ಯ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಶೇ 60ರಷ್ಟು ಇಂಥ ವ್ಯಕ್ತಿಗಳಿದ್ದಾರೆ. ಅವರು ₹50 ಸಾವಿರದಿಂದ ₹4 ಲಕ್ಷದವರೆಗೂ ಹಣ  ಕಳೆದುಕೊಂಡಿದ್ದಾರೆ. ಕೆಲವರು ಮಾತ್ರ ದೂರು ಕೊಟ್ಟಿದ್ದು, ಉಳಿದವರು ಮೌಖಿಕವಾಗಿಯೇ ವಿಷಯ ತಿಳಿಸಿದ್ದಾರೆ’ ಎಂದು ವಿವರಿಸಿದರು.

ವಾಲೆಟ್‌ ಆ್ಯಪ್‌ಗಳ ದುರ್ಬಳಕೆ: ಬಹುಪಾಲು ಪ್ರಕರಣಗಳಲ್ಲಿ ವಾಲೆಟ್‌ ಆ್ಯಪ್‌ಗಳನ್ನು ದುರ್ಬಳಕೆ ಮಾಡಿಕೊಂಡು, ಅದರಿಂದಲೇ ಹಣ  ಹಣ ವರ್ಗಾವಣೆ ಮಾಡಿರುವುದು ಸೈಬರ್‌ ವಿಭಾಗದ ಅಧಿಕಾರಿಗಳ ತನಿಖೆಯಿಂದ ಗೊತ್ತಾಗಿದೆ.

‘ಈ ಜಾಲದಲ್ಲಿ 30ರಿಂದ 50ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿರುತ್ತಾರೆ.  ಎಲ್ಲರೂ ವಾಲೆಟ್‌ ಆ್ಯಪ್‌ಗಳಲ್ಲಿ ಖಾತೆ ಹೊಂದಿರುತ್ತಾರೆ. ಗ್ರಾಹಕರು ತಮ್ಮ ಬ್ಯಾಂಕ್‌ ಖಾತೆ ಮಾಹಿತಿ ಹೇಳುತ್ತಿದ್ದಂತೆ ಖದೀಮರು, ತಮ್ಮ ಜಾಲದ ಸದಸ್ಯರ ಆ್ಯಪ್‌ ಖಾತೆಗೆ ಹಣ ವರ್ಗಾವಣೆ ಮಾಡುತ್ತಾರೆ’.‘ಬಳಿಕ ಸದಸ್ಯರು, ಆ್ಯಪ್‌ ಖಾತೆಯ ಹಣವನ್ನು ತಮ್ಮ ವೈಯಕ್ತಿಕ ಬ್ಯಾಂಕ್‌  ಖಾತೆಗೆ ವರ್ಗಾಯಿಸಿಕೊಂಡು, ಕೆಲ ನಿಮಿಷದಲ್ಲೇ ಎಟಿಎಂ, ಆನ್‌ಲೈನ್‌  ವ್ಯಾಪಾರದ ಮೂಲಕ  ಆ ಹಣವನ್ನು ಡ್ರಾ ತಮ್ಮದಾಗಿಸಿಕೊಳ್ಳುತ್ತಾರೆ.’

ವ್ಯವಸ್ಥಾಪಕರಿಗೂ ಬಂದಿತ್ತು ಕರೆ: ಬ್ಯಾಂಕ್‌ ವ್ಯವಸ್ಥಾಪಕರಿಗೂ ಇಂಥ ವಂಚನೆ ಕರೆಗಳು ಬರುತ್ತಿದೆ. ‘ಬ್ಯಾಂಕ್‌ ಖಾತೆ ಬ್ಲಾಕ್‌ ಆಗಿದೆ ಎಂದು ಆರ್‌ಬಿಐ ಹೆಸರಿನಲ್ಲಿ ಕರೆ ಬಂದಿತ್ತು. ಹೆಚ್ಚು ವಿಚಾರಣೆ ಮಾಡಿದಾಗ, ತಪ್ಪು ಮಾಹಿತಿ ನೀಡುತ್ತಿದ್ದರು. ಬಳಿಕ ಪೊಲೀಸರಿಗೆ ದೂರು ಕೊಡುತ್ತೇನೆ ಎಂದ ಕೂಡಲೇ ಕರೆ ಕಡಿತಗೊಳಿಸಿದರು. ಇಂಥ  ಕರೆಗಳು ಹಲವರಿಗೆ ಬರುತ್ತಿವೆ’ ಎಂದು ನಗರದ ಬ್ಯಾಂಕ್‌ ವ್ಯವಸ್ಥಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

******

ಬ್ಯಾಂಕ್‌, ಆರ್‌ಬಿಐ ಸೇರಿದಂತೆ ಯಾವುದೇ ಸಂಸ್ಥೆಯು ಗ್ರಾಹಕರ ಬ್ಯಾಂಕ್‌ ಖಾತೆ ವಿವರ ಕೇಳುವುದಿಲ್ಲ. ಅದು ಅಪರಾಧವೂ ಹೌದು. ಹೀಗಾಗಿ ಗ್ರಾಹಕರು, ಇಂಥ ಕರೆಗಳಿಗೆ ಸ್ಪಂದಿಸಬಾರದು. ಈ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ 

ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಪ್ರಧಾನ ಕಚೇರಿ ಅಧಿಕಾರಿ

2,000ಕ್ಕೂ ಹೆಚ್ಚು  ಖಾತೆಗಳ ಬ್ಲಾಕ್‌

‘2015–16ರಲ್ಲಿ ವರದಿಯಾಗಿದ್ದ ಇಂಥ ಪ್ರಕರಣಗಳಲ್ಲಿ ಹಣ ವರ್ಗಾವಣೆಯಾಗಿದ್ದ 2,000ಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ಬ್ಲಾಕ್‌ ಮಾಡಿಸಲಾಗಿದೆ. ಈ ವರ್ಷವೂ ಅದಕ್ಕಿಂತ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ಬ್ಲಾಕ್‌ ಮಾಡಿಸುವ ಸಾಧ್ಯತೆ ಇದೆ’ ಎಂದು ಸೈಬರ್‌ ಅಧಿಕಾರಿ ತಿಳಿಸಿದರು.

‘ಬ್ಲಾಕ್‌ ಆದ ಖಾತೆಗಳ ಬಗ್ಗೆ ಯಾರೊಬ್ಬರು ತಕರಾರು ಸಲ್ಲಿಸಿಲ್ಲ. ಕೆಲ ಖಾತೆಗಳನ್ನು ಖೊಟ್ಟಿ ದಾಖಲೆ ಕೊಟ್ಟು ತೆರೆದಿದ್ದು ಸಹ ಕಂಡುಬಂದಿದೆ. ಈ ಜಾಲದಲ್ಲಿ ಬ್ಯಾಂಕ್‌ ಸಿಬ್ಬಂದಿಯ ಕೈವಾಡವಿರುವ ಅನುಮಾನವಿದ್ದು, ಅದನ್ನು ಖಾತ್ರಿಪಡಿಸಿಕೊಳ್ಳಲಾಗುತ್ತಿದೆ’ ಎಂದು ವಿವರಿಸಿದರು.

ನೋಟು ರದ್ದು ಬಳಿಕ 163 ಪ್ರಕರಣ

2016ರ ನವೆಂಬರ್‌ 8ರಂದು ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಲಾಗಿತ್ತು. ಅಂದಿನಿಂದ ಪ್ರಸಕ್ತ ವರ್ಷದ ಜನವರಿ 15ರವರೆಗೆ ರಾಜ್ಯದ ವಿವಿಧೆಡೆ ಆನ್‌ಲೈನ್‌ ವಂಚನೆ ಸಂಬಂಧ 163 ಪ್ರಕರಣಗಳು (2016 ನವೆಂಬರ್‌–31, ಡಿಸೆಂಬರ್‌–56, 2017ರ ಜ.15ರವರೆಗೆ– 76) ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.