ADVERTISEMENT

ಆಸ್ತಿ ವಿವಾದ: ದೂರು ದಾಖಲಿಸಲು ಆದೇಶ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ರಿಚರ್ಡ್‌ ವಿನ್ಸಂಟ್‌
ರಿಚರ್ಡ್‌ ವಿನ್ಸಂಟ್‌   

ಬೆಂಗಳೂರು: ಸ್ಥಿರಾಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ದಿನ ಅರ್ಜಿದಾರ ಹಾಗೂ ಪ್ರತಿವಾದಿಗೆ ಅನುಕೂಲವಾಗುವಂತಹ ವ್ಯತಿರಿಕ್ತ ಆದೇಶ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸಂಟ್‌ ಡಿಸೋಜಾ ವಿರುದ್ಧ ದೂರು ದಾಖಲಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಬಿ.ಆರ್.ಮಹಮದ್‌ ಶೋಯೆಬ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ ಜಿಲ್ಲಾಧಿಕಾರಿ ಕ್ರಮವನ್ನು ತರಾಟೆಗೆ ತೆಗೆದುಕೊಂಡಿತು.

‘ಬಹುಶಃ ಜಿಲ್ಲಾಧಿಕಾರಿಯನ್ನು ಇಬ್ಬರೂ ಓಲೈಸಿರಬೇಕು. ಅದಕ್ಕೇ ಈ ರೀತಿ ಇಬ್ಬರಿಗೂ ಅನುಕೂಲವಾಗುವಂತಹ ಆದೇಶ ನೀಡಿದ್ದಾರೆ’ ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಕಟಕಿದರು.

ADVERTISEMENT

‘ರಿಜಿಸ್ಟ್ರಾರ್‌ ವಿಜಿ ಲೆನ್ಸ್‌ ಅಥವಾ ನ್ಯಾಯಾಂಗ ಅಧಿಕಾರಿಯು ಜಿಲ್ಲಾಧಿಕಾರಿ ವಿರುದ್ಧ ದೂರು ದಾಖಲಿಸಬೇಕು. ಈ ಕುರಿತಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಇಲಾಖಾ ವಿಚಾರಣೆ ನಡೆಸಬೇಕು. ಈ ಕುರಿತಂತೆ ಮುಂದಿನ ವಿಚಾರಣೆ ವೇಳೆಗೆ ವರದಿ ಒಪ್ಪಿಸಬೇಕು’ ಎಂದು ಆದೇಶಿಸಲಾಗಿದೆ.

ಪ್ರತಿವಾದಿಗಳಾದ ಕೊಡಗು ಜಿಲ್ಲಾಧಿಕಾರಿ, ವಿರಾಜಪೇಟೆ ಪಟ್ಟಣ ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಬಿ.ಆರ್.ಖಲೀಲ್‌ ಅಹ
ಮದ್‌ ಅವರಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ಡಿಸೆಂಬರ್ 14ಕ್ಕೆ ವಿಚಾರಣೆ ಮುಂದೂಡಲಾಗಿದೆ. ಅರ್ಜಿದಾರರ ಪರ ಶುಕೂರ್ ಕಮಲ್‌ ವಾದಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.