ADVERTISEMENT

ಆಸ್ಪತ್ರೆಯಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿನಿ!

ರಾಜೇಶ್ ರೈ ಚಟ್ಲ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ಹುಬ್ಬಳ್ಳಿ: ‘ನಾನು ಇನ್ನಷ್ಟು ಓದಬೇಕು. ಪರೀಕ್ಷೆ ಇಲ್ಲೇ ಬರೆಯುತ್ತೇನೆ. ಅಮ್ಮಾ... ನೀನು ಅಳಬೇಡ... ನಾನು ಆರಾಮ ವಾಗಿದ್ದೇನೆ....’  ನಗರದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದ ಹಾಸಿಗೆಯ ಮೇಲೆ ಮಲಗಿಕೊಂಡೇ ಶುಕ್ರವಾರ 5ನೇ ತರಗತಿಯ ಸಮಾಜ ವಿಜ್ಞಾನ ಪರೀಕ್ಷೆ ಬರೆಯುತ್ತಿದ್ದ ಬಾಲಕಿ ಯಶಸ್ವಿ ಹೀಗೆ ಹೇಳಿ ಅಮ್ಮನಿಗೆ ಧೈರ್ಯ ತುಂಬುತ್ತಿದ್ದಳು.

ಆಕೆ ಕಲಿಯುತ್ತಿರುವ ಹಳೇ ಹುಬ್ಬಳ್ಳಿಯ ಸುಭಾಷ್‌ನಗರದ ಸಾಂಬ್ರೆ ಶಾಲೆಯ ಸಹಶಿಕ್ಷರಿಬ್ಬರು ಬಳಿಯಲ್ಲೇ ನಿಂತುಕೊಂಡು ಪರೀಕ್ಷೆ ಬರೆಯಲು ಆಕೆಗೆ ನೆರವಾಗಿದ್ದರು.  ‘ಶಾಲೆಯಲ್ಲಿ ಇದೇ 25 ರಂದು (ಬುಧವಾರ) ವಾರ್ಷಿಕ ಪರೀಕ್ಷೆ ಬರೆದು, ಅಮ್ಮನ ಜೊತೆಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಕಾರವಾರ ರಸ್ತೆಯ ಟೋಲ್‌ನಾಕಾ ಬಳಿ ಅನಿಲ ಸಾಗಣೆ ಟ್ಯಾಂಕರ್‌ ಡಿಕ್ಕಿ ಹೊಡೆದ ಪರಿಣಾಮ ಯಶಸ್ವಿಯ ಎಡ ಮೊಣ ಕಾಲಿನ ಕೆಳಗಡೆಯ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಅದೃಷ್ಟವಶಾತ್‌ ಆಕೆಯ ಅಮ್ಮ ಮತ್ತು ಪುಟ್ಟ ಸಹೋದರ ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದರು.

ಗಂಭೀರವಾಗಿ ಗಾಯಗೊಂಡಿದ್ದ ಯಶಸ್ವಿಯನ್ನು ತಕ್ಷಣ ಪೊಲೀಸ್‌ ವಾಹನದಲ್ಲಿ ಕಿಮ್ಸ್‌ಗೆ ಕರೆದೊಯ್ಯಲಾಯಿ ಯಾದರೂ ಅಲ್ಲಿ ವೈದ್ಯರು ಲಭ್ಯರಿಲ್ಲ ಮತ್ತು ತುರ್ತು ಶಸ್ತ್ರಚಿಕಿತ್ಸೆ ವ್ಯವಸ್ಥೆ ಇಲ್ಲ ಎಂಬ ಕಾರಣ ನೀಡಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಲಾಯಿತು. ಈಗಾಗಲೇ ಆಕೆಗೆ ಎರಡು ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

‘ಕಲಿಯುವುದರಲ್ಲಿ ಈಕೆ ಪ್ರತಿಭಾವಂತೆ. ನೃತ್ಯದಲ್ಲೂ ಪ್ರವೀಣೆ. ಗಂಭೀರ ಗಾಯದ ಮಧ್ಯೆಯೂ ಪರೀಕ್ಷೆ ಬರೆಯಲೇ ಬೇಕೆಂಬ ಆಕೆಯ ಆಸೆಯಂತೆ ಆಸ್ಪತ್ರೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಪ್ರಶ್ನೆಪತ್ರಿಕೆ ಸಹಿತ ನಾವು ಬಂದಿದ್ದೇವೆ. ಗುರುವಾರ ವಿಜ್ಞಾನ ಮತ್ತು ಶುಕ್ರವಾರ ಸಮಾಜ ವಿಜ್ಞಾನ ಪರೀಕ್ಷೆ ಬರೆದಿದ್ದಾಳೆ’ ಎಂದು ಶಾಲೆಯ ಸಹಶಿಕ್ಷಕರಾದ ಮಾರುತಿ ಕರಡಿಗುಡ್ಡ ಮತ್ತು ಶೇಖಪ್ಪ ಮಾದಾರ ಭಾವುಕರಾದರು.

‘ನಮ್ಮದು ಬಡಕುಟುಂಬ. ಪತ್ನಿ ಮನೆ ಕೆಲಸಕ್ಕೆ ಹೋಗುತ್ತಾರೆ. ನಾನು ಆಟೊ ಓಡಿಸುತ್ತೇನೆ. ಮಗಳ ಎಡಗಾಲಿನ ಮಾಂಸಖಂಡಗಳು ಮತ್ತೆ ಸೇರಿಕೊಳ್ಳದಷ್ಟು ಹಾನಿಗೊಂಡಿ ರುವುದರಿಂದ ಇನ್ನೂ 2–3 ಬಾರಿ ಶಸ್ತ್ರಚಿಕಿತ್ಸೆ ಮಾಡಬೇಕು. ಚಿಕಿತ್ಸೆಗೆ ₨ 4 ಲಕ್ಷಕ್ಕೂ ಹೆಚ್ಚು ವೆಚ್ಚ ತಗುಲಬಹುದು. ಗಾಯ ವಾಸಿಯಾಗದೇ ಇದ್ದಲ್ಲಿ ಆ ಭಾಗವನ್ನು ತೆಗೆಯಬೇಕಾದೀತು ಎಂದು ವೈದ್ಯರು ಹೇಳಿದ್ದಾರೆ’ ಎಂದು ಯಶಸ್ವಿಯ ಅಪ್ಪ ಚಂದ್ರಕಾಂತ ಧಾರವಾಡ ಕಣ್ಣೀರು ಹಾಕಿದರು.

‘ಅಪಘಾತ ಕುರಿತು ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಕ್ಕಿ ಹೊಡೆದ ಟ್ಯಾಂಕರ್‌ಗೆ ಸಂಬಂಧಿಸಿದವರು ಯಾರೂ ಮಗಳ ಆರೋಗ್ಯ ವಿಚಾರಿಸಲು ಬಂದಿಲ್ಲ. ಯಾರಾದರೂ ಆರ್ಥಿಕವಾಗಿ ನೆರವು ನೀಡಿದರೆ ಮಾತ್ರ ಮಗಳ ಚಿಕಿತ್ಸೆ ಮುಂದುವರಿಸಲು ಸಾಧ್ಯ’ ಎಂದು ಅವರು ವಿನಂತಿಸಿದರು

(ಮೊ: 9686993794/ಬ್ಯಾಂಕ್‌ ಖಾತೆ ಸಂಖ್ಯೆ ಎಸ್‌ಬಿಐ– 339495 40400).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.