ADVERTISEMENT

ಇಂದು ರಾಜ್ಯ ಬಂದ್

ಮಹಾದಾಯಿ: ನವಲಗುಂದ ಪಟ್ಟಣಕ್ಕೆ ಕ್ಷಿಪ್ರ ಕಾರ್ಯಪಡೆ ಕಾವಲು

​ಪ್ರಜಾವಾಣಿ ವಾರ್ತೆ
Published 30 ಜುಲೈ 2016, 0:00 IST
Last Updated 30 ಜುಲೈ 2016, 0:00 IST
ಗುರುವಾರ ತೀವ್ರ ಪ್ರತಿಭಟನೆಯಿಂದ ನಲುಗಿದ್ದ ನವಲಗುಂದ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಬಸ್‌ ನಿಲ್ದಾಣದ ಬಳಿ ಶುಕ್ರವಾರ ಪೊಲೀಸರು ಗಸ್ತು ತಿರುಗಿದರು   ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಗುರುವಾರ ತೀವ್ರ ಪ್ರತಿಭಟನೆಯಿಂದ ನಲುಗಿದ್ದ ನವಲಗುಂದ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಬಸ್‌ ನಿಲ್ದಾಣದ ಬಳಿ ಶುಕ್ರವಾರ ಪೊಲೀಸರು ಗಸ್ತು ತಿರುಗಿದರು ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌   

ಬೆಂಗಳೂರು: ಮಹಾದಾಯಿ ನ್ಯಾಯಮಂಡಳಿ ಮಧ್ಯಂತರ ಆದೇಶ ವಿರೋಧಿಸಿ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಗಳು ಶನಿವಾರ ಕರ್ನಾಟಕ ಬಂದ್‌ಗೆ ಕರೆನೀಡಿದ್ದು, ದೈನಂದಿನ ಚಟುವಟಿಕೆಗಳು ಅಸ್ತವ್ಯಸ್ತಗೊಳ್ಳುವ ಸಾಧ್ಯತೆಯಿದೆ.

ಬೆಂಗಳೂರು, ಹುಬ್ಬಳ್ಳಿ– ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ ಸೇರಿ ಕೆಲವು ಜಿಲ್ಲೆಗಳಿಗೆ ಬಂದ್‌ ಬಿಸಿ ತಟ್ಟುವ ಸಂಭವವಿದೆ.
ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ಬಂದ್‌ಗೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌, ತಾತ್ವಿಕ ಬೆಂಬಲ ನೀಡುವುದಾಗಿ ಪ್ರಕಟಿಸಿದ್ದಾರೆ.

ಹೋಟೆಲ್‌, ಪೆಟ್ರೋಲ್‌ ಬಂಕ್‌ ಮಾಲೀಕರ ಸಂಘ, ಸರ್ಕಾರಿ ನೌಕರರ ಸಂಘ, ಆಟೋ–ಟ್ಯಾಕ್ಸಿ ಚಾಲಕರ ಸಂಘಗಳು ಬಂದ್‌ಗೆ ಬೆಂಬಲ ನೀಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಧಾರವಾಡ, ಹುಬ್ಬಳ್ಳಿ ನಗರ,  ಗದಗ, ನರಗುಂದ ಮತ್ತು  ನವಲಗುಂದಗಳಲ್ಲಿ  ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಗಡಿ ರಕ್ಷಣಾ ಪಡೆ ಯೋಧರು ಪಥ ಸಂಚಲನ ನಡೆಸಿದ್ದಾರೆ.

ಕೆಲವು ಜಿಲ್ಲೆಗಳಲ್ಲಿ ಶಾಲೆಗೆ ರಜೆ: ಬಂದ್‌ನಿಂದಾಗಿ  ಶಾಲೆ–ಕಾಲೇಜು ವಿದ್ಯಾರ್ಥಿಗಳು ಪರದಾಡಬಾರದು ಎಂಬ ಉದ್ದೇಶದಿಂದ ಕೆಲ ಜಿಲ್ಲೆಗಳಲ್ಲಿ ಶಾಲಾ–ಕಾಲೇಜುಗಳಿಗೆ ಶನಿವಾರ ರಜೆ ನೀಡಲಾಗಿದೆ. 

ಬೆಂಗಳೂರಿನ ಖಾಸಗಿ ಹಾಗೂ ಅನುದಾನಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಿಸಿವೆ. ಆದರೆ, ಸರ್ಕಾರಿ ಶಾಲೆ–ಕಾಲೇಜುಗಳಿಗೆ ರಜೆ ಘೋಷಿಸಿಲ್ಲ ಎಂದು ಬೆಂಗಳೂರು ಜಿಲ್ಲಾಧಿಕಾರಿ ವಿ. ಶಂಕರ್‌  ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಸ್ಥಳೀಯ ಪರಿಸ್ಥಿತಿ ಆಧರಿಸಿ  ಶಾಲಾಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಕಚೇರಿ ತಿಳಿಸಿದೆ.

ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲಾಧಿಕಾರಿಗಳು ಅಧಿಕೃತವಾಗಿ ರಜೆ ಘೋಷಿಸಿದ್ದಾರೆ.

ದಾಖಲೆ ಪರಿಶೀಲನೆ ಮುಂದಕ್ಕೆ
ದ್ವಿತೀಯ ಪಿಯು ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೃತ್ತಿಶಿಕ್ಷಣ ಕೋರ್ಸ್‌ಗೆ ಅರ್ಹತೆ ಪಡೆದ ವಿದ್ಯಾರ್ಥಿಗಳ ಮೂಲ ದಾಖಲೆ ಪರಿಶೀಲನೆ ಮುಂದೂಡಲಾಗಿದೆ.

ಜುಲೈ 30ರಂದು ನಡೆಯಬೇಕಿದ್ದ ಪರಿಶೀಲನೆಯನ್ನು ಆಗಸ್ಟ್‌ 1ರಂದು ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ತಿಳಿಸಿದೆ.

* ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದ ಎಲ್ಲ ಸೇವೆಗಳು ಸ್ಥಗಿತಗೊಳ್ಳಲಿವೆ. ಕನ್ನಡ ಚಿತ್ರರಂಗವೂ ಬಂದ್‌ಗೆ ಸಾಥ್‌ ನೀಡಿರುವುದರಿಂದ ಶನಿವಾರ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಸ್ಧಗಿತವಾಗಲಿವೆ.

ಬಂದ್ ಹಿನ್ನೆಲೆಯಲ್ಲಿ ಸಂಜೆ 6ಗಂಟೆವರೆಗೆ ವಹಿವಾಟು ನಿಲ್ಲಿಸಲು ಬಂಕ್‌ಗಳ ಮಾಲೀಕರು ನಿರ್ಧರಿಸಿದ್ದಾರೆ.

ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಬುಕಿಂಗ್‌ ಸೇವೆ ಸೇರಿದಂತೆ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ  ಸಂಘ, ಬಿಡಿಎ ನೌಕರರ ಸಂಘ, ಚಾಲಕರು, ನಿರ್ವಾಹಕರು, ಖಾಸಗಿ ವಾಹನಗಳು, ಲಾರಿ ಮಾಲೀಕರ ಸಂಘ, ಆಟೋ ಚಾಲಕರು, ಕರ್ನಾಟಕ ವಾಣಿಜ್ಯೋದಮ್ಯ ಸಂಸ್ಥೆ ಬಂದ್‌ಗೆ ಸಾಥ್‌ ನೀಡಿವೆ.

‘ಬಂದ್‌ಗೆ ಬಿಗಿ ಬಂದೋಬಸ್ತ್’:  ‘ಬಂದ್ ಹಿನ್ನೆಲೆಯಲ್ಲಿ ನಾಲ್ವರು ಹೆಚ್ಚುವರಿ ಪೊಲೀಸ್ ಕಮಿಷನರ್‌ಗಳ ನೇತೃತ್ವದಲ್ಲಿ, ಎಂಟು ಡಿಸಿಪಿ, 21 ಎಸಿಪಿ, 106 ಇನ್‌ಸ್ಪೆಕ್ಟರ್, 174 ಎಸ್‌ಐ, 368 ಎಎಸ್‌ಐ, 956 ಹೆಡ್‌ ಕಾನ್‌ಸ್ಟೆಬಲ್, 1,950 ಕಾನ್‌ಸ್ಟೆಬಲ್, 140 ಮಹಿಳಾ ಕಾನ್‌ಸ್ಟೆಬಲ್‌ ಹಾಗೂ ಸಾವಿರ ಗೃಹರಕ್ಷಕರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್.ಎಸ್.ಮೇಘರಿಕ್ ತಿಳಿಸಿದರು.

‘ಅಲ್ಲದೆ, ಕ್ಷಿಪ್ರ ಕಾರ್ಯ ಪಡೆಯ (ಕ್ಯೂಆರ್‌ಟಿ) ಒಂದು ತುಕಡಿ ಹಾಗೂ ಕೆಎಸ್‌ಆರ್‌ಪಿ ಹಾಗೂ ಸಿಎಆರ್‌ನ 66 ತುಕಡಿಗಳು ಭದ್ರತೆ ಒದಗಿಸಲಿವೆ.
ಸೂಕ್ಷ್ಮ ಪ್ರದೇಶಗಳಲ್ಲಿ ಡಿಸಿಪಿಗಳ ನೇತೃತ್ವದಲ್ಲಿ ಶುಕ್ರವಾರ ಸಂಜೆಯಿಂದಲೇ ಸಿಬ್ಬಂದಿ ಪರೇಡ್ ಮಾಡುತ್ತಿದ್ದಾರೆ’ ಎಂದು ಕಮಿಷನರ್ ಹೇಳಿದರು.

ಸೇವೆಗಳು ಇರುವುದಿಲ್ಲ
1. ಸರ್ಕಾರಿ ಬಸ್‌ಗಳು
2. ಆಟೊಗಳು
3. ಹೋಟೆಲ್‌ಗಳು
4. ಖಾಸಗಿ ಶಾಲೆಗಳು
5. ಕೈಗಾರಿಕೆಗಳು
6. ಅಂಗಡಿ ಮುಂಗಟ್ಟುಗಳು
7. ಕ್ಯಾಬ್‌ ಸೇವೆ
8. ಚಿತ್ರಮಂದಿರಗಳು
9. ಪೆಟ್ರೋಲ್‌ ಬಂಕ್‌

ನಿರ್ಧಾರವಿಲ್ಲ
* ಸರ್ಕಾರಿ ಕಚೇರಿಗಳು
* ಬ್ಯಾಂಕ್‌ಗಳು
* ಅಂಚೆ ಕಚೇರಿ
* ಎಪಿಎಂಸಿ

*** ಶನಿವಾರ ಮುಂಜಾನೆ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ವಿವಿಧ ನಿಗಮಗಳ ಬಸ್‌ಗಳು ಓಡಾಡಿದರೂ ಹೊತ್ತೇರಿದಂತೆ ವಾಹನ ಸಂಚಾರಕ್ಕೆ ಅಡಚಣೆಯಾಗಬಹುದು.

* ಬೆಂಗಳೂರಿನಲ್ಲಿ ಆಟೋ, ಟ್ಯಾಕ್ಸಿ ಚಾಲಕರ ಸಂಘಗಳು ಬಂದ್‌ಗೆ ಬೆಂಬಲ ನೀಡಿರುವುದರಿಂದ ಈ ಎರಡು ವಾಹನಗಳ ಸೇವೆ ವಿರಳ.
* ಹೋಟೆಲ್‌ ಮಾಲೀಕರ ಸಂಘ ಬೆಂಬಲ ನೀಡಿರುವುದರಿಂದ ಪ್ರಮುಖ ಹೋಟೆಲ್‌ಗಳು ಬಾಗಿಲು ತೆಗೆಯುವ ಸಾಧ್ಯತೆ ಕಡಿಮೆ.
* ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಬಲ ಸೂಚಿಸಿದ್ದು, ಸರ್ಕಾರಿ ಕಚೇರಿ ಕೆಲಸ ಸ್ಥಗಿತ ಸಂಭವವಿದೆ.
* ಕ್ಯಾಬ್‌ ಮಾಲೀಕರು, ಚಾಲಕರ ಸಂಘ ಬೆಂಬಲ ನೀಡಿದ್ದು, ಐಟಿ,ಬಿಟಿ, ಗಾರ್ಮೆಂಟ್ಸ್‌ ಕಂಪನಿಗಳ ನೌಕರರ ಓಡಾಟ ಕಷ್ಟ.
* ಬೆಳಿಗ್ಗೆ 6ರಿಂದ ಸಂಜೆ 5ಗಂಟೆಯವರೆಗೆ ಪೆಟ್ರೋಲ್, ಡೀಸೆಲ್‌ ತೊಂದರೆ ಖಚಿತ.
* ಚಿತ್ರೋದ್ಯಮ, ಚಿತ್ರ ಮಂದಿರಗಳಲ್ಲಿ ಚಟುವಟಿಕೆ ಸ್ಥಗಿತ.
* ಬಸ್‌ ಅಥವಾ ರೈಲಿನಲ್ಲಿ ದೂರದ ಪ್ರಯಾಣ ಹೊರಟವರಿಗೆ ಮಾರ್ಗಮಧ್ಯೆ ಪ್ರತಿಭಟನೆ, ರಸ್ತೆ ತಡೆಯ ಬಿಸಿ ತಟ್ಟುವ ಸಾಧ್ಯತೆ.

ಎಂದಿನಂತೆ ಚಲಿಸಲಿದೆ ಮೆಟ್ರೊ
ಮಹಾದಾಯಿ ಜಲ ವಿವಾದ ಸಂಬಂಧ ನ್ಯಾಯಮಂಡಳಿ ನೀಡಿರುವ ಮಧ್ಯಂತರ ತೀರ್ಪನ್ನು ಖಂಡಿಸಿ ವಿವಿಧ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರೂ, ಮೆಟ್ರೊ ರೈಲುಗಳು ಎಂದಿನಂತೆ  ಚಲಿಸಲಿವೆ.

ADVERTISEMENT

‘ಬಂದ್‌  ವೇಳೆ ಸಾರ್ವಜನಿಕರಿಗೆ ನೆರವಾಗುವ ಸಲುವಾಗಿ  ಮೆಟ್ರೊ ರೈಲಿನ ಟ್ರಿಪ್‌ಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ.  ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬಂದರೆ ಮಾತ್ರ ಟ್ರಿಪ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವಕ್ತಾರ ವಸಂತ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.