ADVERTISEMENT

ಇನ್ನು ಮುಂದೆ ಗ್ರಾಮಕ್ಕೆ ಒಂದೇ ಸರ್ಕಾರಿ ಸ್ಮಶಾನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST

ಬೆಂಗಳೂರು: ‘ರಾಜ್ಯದ 13 ಜಿಲ್ಲೆಗಳಲ್ಲಿ ಸ್ಮಶಾನ ಭೂಮಿ ಒತ್ತುವರಿ ಆಗಿದೆ. ಈ ಸಂಬಂಧ ಮಾರ್ಗಸೂಚಿ ರೂಪಿಸಿ ಒತ್ತುವರಿ ತೆರವುಗೊಳಿಸಿ ಪ್ರಗತಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಕೆ.ಗೋವಿಂದರಾಜ್‌ ಪರವಾಗಿ ಆರ್.ವಿ.ವೆಂಕಟೇಶ್‌ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೋಲಾರ ಜಿಲ್ಲೆಯಲ್ಲಿ 377 ಎಕರೆ, ಚಿಕ್ಕಬಳ್ಳಾಪುರದಲ್ಲಿ 155 ಎಕರೆ, ಮಂಡ್ಯದಲ್ಲಿ 76 ಎಕರೆ, ಮೈಸೂರಿನಲ್ಲಿ 67 ಎಕರೆ, ಬೆಂಗಳೂರು ನಗರದಲ್ಲಿ 32 ಎಕರೆ ಸ್ಮಶಾನ ಭೂಮಿ ಒತ್ತುವರಿ ಆಗಿದೆ ಎಂದರು.

ಗ್ರಾಮಗಳಲ್ಲಿ ಈಗ ಜಾತಿಗೊಂದು ಸ್ಮಶಾನಗಳು ಇವೆ. ಒಂದೇ ಸ್ಮಶಾನ ಬಳ­ಸುವ ಸಾಮಾಜಿಕ ಸಾಮರಸ್ಯ ಮನೋ­ಭಾವ ನಮ್ಮಲ್ಲಿ ಇನ್ನೂ ಮೂಡಿಲ್ಲ. ಇನ್ನು ಮುಂದೆ ಗ್ರಾಮಕ್ಕೊಂದೇ ಸರ್ಕಾರಿ ಸ್ಮಶಾನ  ನಿರ್ಮಿಸಲು ಆದೇಶ ನೀಡಲಾಗುವುದು. ಜಾತಿವಾರು ಸ್ಮಶಾನ ನಿರ್ಮಾಣಕ್ಕೆ ಅನುಮತಿ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಬಹುತೇಕ ಸ್ಮಶಾನ­ಗಳು ಒತ್ತುವರಿಯಾಗಿವೆ. ದೊಡ್ಡ 2–3 ಸ್ಮಶಾನಗಳು ಉಳಿದಿವೆ. ಸ್ಮಶಾನಗಳ ಒತ್ತು­ವರಿ ತೆರವಿಗೆ ತ್ವರಿತ ಕ್ರಮ ಕೈಗೊಳ್ಳ­ಬೇಕು ಎಂದು ಆರ್.ವಿ. ವೆಂಕಟೇಶ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.