ADVERTISEMENT

ಇ–ವ್ಯಾಪಾರ, ಡಿಜಿಟಲ್‌ ಆಡಳಿತಕ್ಕೆ ಒತ್ತು

ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2014, 19:30 IST
Last Updated 26 ಆಗಸ್ಟ್ 2014, 19:30 IST

ಬೆಂಗಳೂರು: ಮೂರು ತಿಂಗಳ ನಂತರ ನಡೆದ ಕಾಂಗ್ರೆಸ್‌ನ ಸಮನ್ವಯ ಸಮಿತಿ ಸಭೆಯಲ್ಲಿ ಪಕ್ಷ ಸಂಘಟನೆ ವಿಷಯ ಮಾತ್ರವಲ್ಲದೆ, ಇ– ವ್ಯಾಪಾರ, 4ಜಿ ತರಂಗಾಂತರ, ಡಿಜಿಟಲ್‌ ಆಡಳಿತದ ಬಗ್ಗೆಯೂ ಚರ್ಚಿಸಲಾಗಿದೆ.

ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ದಿಗ್ವಿಜಯ್‌ ಸಿಂಗ್‌ ಅಧ್ಯಕ್ಷತೆಯಲ್ಲಿ  ಪಕ್ಷದ ಕಚೇರಿಯಲ್ಲಿ ಎರಡು ಗಂಟೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಸಚಿವರಾದ ಕೆ.­ಜೆ.­ಜಾರ್ಜ್‌, ಡಿ.ಕೆ.ಶಿವಕುಮಾರ್, ಎಐಸಿಸಿ ಕಾರ್ಯದರ್ಶಿಗಳಾದ ಎ.ಚೆಲ್ಲ­ಕುಮಾರ್‌ ಮತ್ತು ಶಾಂತರಾಂ ನಾಯ್ಕ್‌  ಹಾಜರಿದ್ದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತ­ನಾಡಿದ ದಿಗ್ವಿಜಯ್‌ ಸಿಂಗ್‌ ಅವರು, ‘ಇ–ವ್ಯಾಪಾರಕ್ಕೆ ಉತ್ತಮ ಭವಿಷ್ಯ ಇದ್ದು, ಅದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು’ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

‘ಅಮೆರಿಕ ಮೂಲದ ಅಮೆಜಾನ್‌ ಮತ್ತು ಬೆಂಗಳೂರು ಮೂಲದ ಫ್ಲಿಪ್‌­ಕಾರ್ಟ್‌ ಸಂಸ್ಥೆಗಳು ಇ–ವ್ಯಾಪಾರ ಕ್ಷೇತ್ರ­ದಲ್ಲಿ ಮುಂಚೂಣಿಯಲ್ಲಿವೆ. ಈ ಸಂಸ್ಥೆ­ಗಳು ನಡೆಸುವ ವಹಿವಾಟಿನ ಮೇಲೆ ತೆರಿಗೆ ವಿಧಿಸುವ ವಿಷಯದಲ್ಲಿ ಗೊಂದಲ ಇದ್ದು, ಅದನ್ನು ಆದಷ್ಟು ಬೇಗ ಬಗೆಹರಿ­ಸಬೇಕು. ಆ ಮೂಲಕ ಇ–ವ್ಯಾಪಾರಕ್ಕೆ ಉತ್ತೇಜನ ನೀಡಬೇಕು. ಇದರಿಂದ ರಾಜ್ಯಕ್ಕೆ ಒಳ್ಳೆಯ ತೆರಿಗೆ ಕೂಡ ಬರಲಿದೆ’ ಎಂದು ಹೇಳಿದರು.

ಮೋದಿಗೆ ಟಾಂಗ್‌: ‘ಗುಜರಾತ್‌ನಲ್ಲಿ ಅಧಿಕಾರದಲ್ಲಿದ್ದಾಗ ಡಿಜಿಟಲ್‌ ಆಡಳಿ­ತದ ವಿಷಯದಲ್ಲಿ ಏನೂ ಮಾಡದ ಪ್ರಧಾನಿ ನರೇಂದ್ರ ಮೋದಿ ಈಗ ಡಿಜಿಟಲ್‌ ಇಂಡಿಯಾ ಬಗ್ಗೆ ಮಾತನಾ­ಡು­ತ್ತಿದ್ದಾರೆ. ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಈ ವಿಷಯದಲ್ಲಿ ಎಲ್ಲ ರಾಜ್ಯ­ಗಳಿಗಿಂತ ಮುಂದೆ ಇದೆ. ರಾಜ್ಯದ ಮಾಹಿತಿ ತಂತ್ರಜ್ಞಾನ ಇಲಾಖೆ ಸ್ಮಾರ್ಟ್‌ ಫೋನ್‌ ಮೂಲಕ ಡಿಜಿಟಲ್‌ ಆಡಳಿತ ಸೇವೆ ನೀಡಲು ಸಿದ್ಧತೆ ನಡೆಸಿದ್ದು, ಆದಷ್ಟು ಬೇಗ ಅದು ಕಾರ್ಯರೂಪಕ್ಕೆ ಬರಬೇಕು. ಇಡೀ ದೇಶದಲ್ಲಿ ಅಂತಹ ಸೇವೆ ಕೊಟ್ಟ ಮೊದಲ ರಾಜ್ಯ ಕರ್ನಾಟಕ ಆಗಬೇಕು’ ಎಂದು ದಿಗ್ವಿಜಯ್‌ ಸಿಂಗ್‌  ಹೇಳಿದರು.

ಬಿಬಿಎಂಪಿ ವಿಭಜನೆ: ತಜ್ಞರ ಸಮಿತಿ ನೇಮಕ
ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ಮಾಡುವು­ದಾಗಿ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಈಗ ಅದನ್ನು ಹೇಗೆ ವಿಭಜಿಸ­ಬೇಕು ಎಂಬ ಬಗ್ಗೆ ತೀರ್ಮಾನಿಸಲು ತಜ್ಞರ ಸಮಿತಿ ರಚಿಸುವುದಾಗಿ ಮುಖ್ಯಮಂತ್ರಿ ಭರವಸೆ­ ನೀಡಿದ್ದಾರೆ. ಅದರ ಬಳಿಕ ಆ ಕುರಿತು ತೀರ್ಮಾನ ಆಗ­ಲಿದೆ. ಏಳೆಂಟು ತಿಂಗಳಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು ಈ ಕುರಿತು ನಿರ್ಧಾರ ಆಗಲಿದೆ’ ಎಂದು ದಿಗ್ವಿಜಯ್‌ಸಿಂಗ್‌ ಹೇಳಿದರು.

ಇಂಟರ್‌ನೆಟ್‌ನ ವೇಗ ಹೆಚ್ಚಿಸುವುದು ಸೇರಿದಂತೆ ಇತರ ಸೇವೆಗಳನ್ನು ಪಡೆ­ಯಲು 4ಜಿ ತರಂಗಾಂತರ ಸಂಪರ್ಕ ಹೆಚ್ಚಿಸಬೇಕು. ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು. ಆದಷ್ಟು ಬೇಗ ಎಲ್ಲೆಡೆ 4ಜಿ ತರಂಗಾಂತರ ಸೇವೆ ಸಿಗುವಂತೆ
ಮಾಡ­ಬೇಕು ಎಂದು ಅವರು ಸೂಚಿಸಿದರು.

ಪಂಚಾಯತಿ ಚುನಾವಣೆ: ಗ್ರಾಮ ಪಂಚಾಯಿತಿಗಳಿಗೆ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಅದಕ್ಕೆ ಈಗಿನಿಂದಲೇ ತಯಾರಿ ನಡೆಸಬೇಕು. ಡಿಸೆಂಬರ್‌ 31ರೊಳಗೆ ಸದಸ್ಯತ್ವ ನೋಂದಣಿ ಮುಗಿಸಬೇಕು. ಅದರ ನಂತರ ಬೂತ್‌ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಜನಸಂಪರ್ಕ ಸಭೆಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆಯೂ ಚರ್ಚಿಸ­ಲಾಯಿತು ಎಂದು ಅವರು ವಿವರಿಸಿದರು.

ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿ­ರುವ ಭರವಸೆಗಳನ್ನು ಈಡೇರಿಸುವ ಕಡೆಗೆ ಹೆಚ್ಚು ಗಮನ ನೀಡಬೇಕೆನ್ನುವ ವಿಷಯದ ಬಗ್ಗೆಯೂ ಮಾತುಕತೆ ನಡೆಯಿತು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT