ADVERTISEMENT

ಉತ್ತರಾಖಂಡ: ಮೇಘಸ್ಫೋಟಕ್ಕೆ 6 ಬಲಿ

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:41 IST
Last Updated 29 ಮೇ 2016, 19:41 IST

ಡೆಹ್ರಾಡೂನ್‌ (ಪಿಟಿಐ): ಉತ್ತರಾಖಂಡದಲ್ಲಿ ಮೇಘಸ್ಫೋಟ ಸಂಭವಿಸಿದ್ದರಿಂದ ಉಂಟಾದ ಭಾರಿ ಮಳೆ ಮತ್ತು ಪ್ರವಾಹದಿಂದ ಕಳೆದ 24 ಗಂಟೆಗಳಲ್ಲಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ.

ಉತ್ತರಾಖಂಡದ ತೆಹ್ರಿ ಮತ್ತು ಉತ್ತರಕಾಶಿ ಜಿಲ್ಲೆಗಳಲ್ಲಿ ಶನಿವಾರ ಮೇಘಸ್ಫೋಟ ಸಂಭವಿಸಿತ್ತು. ತೆಹ್ರಿ ಜಿಲ್ಲೆಯ ಘನ್ಸಾಲಿ ಎಂಬಲ್ಲಿ ಶನಿವಾರ ಒಬ್ಬ ವ್ಯಕ್ತಿ ಬಲಿಯಾಗಿದ್ದರು.
ಭಾನುವಾರ ಮತ್ತೆ ಐದು ಮೃತದೇಹಗಳು ಪತ್ತೆಯಾಗಿವೆ. ಉತ್ತರಕಾಶಿ ಜಿಲ್ಲೆಯ ಚಿನ್ಯಾಲಿಸೌರ್‌ ಎಂಬಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ಶನಿವಾರ ಹಠಾತ್‌ ಪ್ರವಾಹದಿಂದ ಹಲವು ರಸ್ತೆಗಳು ಕೊಚ್ಚಿಕೊಂಡು ಹೋಗಿತ್ತಲ್ಲದೆ, ಜನಜೀವನ ಅಸ್ತವ್ಯಸ್ತಗೊಂಡಿತ್ತು. ಚಾರ್ ಧಾಮ್ ಯಾತ್ರೆಗೆ ತೆರಳುತ್ತಿರುವ ಯಾತ್ರಾರ್ಥಿಗಳು ತೊಂದರೆ ಅನುಭವಿಸಿದ್ದರು.

‘ಕೊಥಿಯಾರ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಗೆ ಮೇಘಸ್ಫೋಟ ಸಂಭವಿಸಿದೆ. ಭಾರಿ ಪ್ರವಾಹಕ್ಕೆ 50 ಮನೆಗಳು ಕೊಚ್ಚಿಕೊಂಡು ಹೋಗಿವೆ. ನೂರಾರು ಪ್ರಾಣಿಗಳು ಅವಶೇಷಗಳಡಿ ಸಿಲುಕಿ ಸತ್ತಿವೆ’ ಎಂದು ಜಿಲ್ಲಾಧಿಕಾರಿ ಅಹ್ಮದ್‌ ಇಕ್ಬಾಲ್‌ ತಿಳಿಸಿದ್ದಾರೆ.

‘ಮೇಘಸ್ಫೋಟ ಹಗಲು ಹೊತ್ತು ಸಂಭವಿಸಿದ್ದರಿಂದ ಜನರಿಗೆ ಸುರಕ್ಷಿತ ತಾಣಗಳಿಗೆ ತೆರಳಲು ಅನುಕೂಲ ವಾಯಿತು. ರಾತ್ರಿಯ ವೇಳೆ ಆಗಿದ್ದಲ್ಲಿ ಪ್ರಾಣಹಾನಿ ಹೆಚ್ಚುವ ಸಂಭವ ಇತ್ತು’ ಎಂದು ಹೇಳಿದ್ದಾರೆ.

ಕೆಮ್ರಾ ಮತ್ತು ಸಿಲಿಯಾರ ಗ್ರಾಮಗಳಲ್ಲಿ ಹಲವು ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಮಣ್ಣಿನಡಿ ಸಿಲುಕಿವೆ. ಇಲ್ಲಿ ಎರಡು ಅಂತಸ್ತಿನ ಅಂಬೇಡ್ಕರ್‌ ಹಾಸ್ಟೆಲ್‌ ಕೂಡಾ ಕುಸಿದುಬಿದ್ದಿದೆ.

ಬಾಗಲಕೋಟೆಯ ಐವರು ಯಾತ್ರಾರ್ಥಿಗಳು ಸುರಕ್ಷಿತ
ಬಾಗಲಕೋಟೆ:
ನಗರದಿಂದ ಉತ್ತರಾಖಂಡ ರಾಜ್ಯದ ‘ಚಾರ್‌ ಧಾಮ್‌’ ಯಾತ್ರೆಗೆ ತೆರಳಿರುವ ಐವರು ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. ಭಾನುವಾರ ರಾತ್ರಿ ದೂರವಾಣಿ ಮೂಲಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ವಿದ್ಯಾಗಿರಿಯ ಯಾತ್ರಾರ್ಥಿ ಉಮೇಶ ಪೂಜಾರ, ‘ಇದೇ 26ರಂದು ಚಾರ್‌ಧಾಮ್‌ ಯಾತ್ರೆ ಆರಂಭಿಸಿರುವ ನಾವು ಸದ್ಯ ಉತ್ತರಕಾಶಿಯಲ್ಲಿ ಸುರಕ್ಷಿತವಾಗಿದ್ದೇವೆ. ಯಾವುದೇ ತೊಂದರೆಯಾಗಿಲ್ಲ’ ಎಂದರು.

‘30ರಂದು ಕೇದಾರಕ್ಕೆ ತೆರಳಬೇಕಾಗಿತ್ತು. ಆದರೆ, ಅಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಹೋಗುವುದು ಅನುಮಾನ’ ಎಂದು ಹೇಳಿದರು. ‘ಬಾಗಲಕೋಟೆಯ ಕೇಶವ ಭಜಂತ್ರಿ, ಮಹಾದೇವ ದಂಧರಿಗಿ, ಬಸವರಾಜ ಸಾಸನೂರ ಮತ್ತು ಬಸವರಾಜ ಪರ್ವತಿಮಠ ಯಾತ್ರೆಗೆ ತೆರಳಿರುವ ತಂಡದಲ್ಲಿ ಇದ್ದೇವೆ’ ಎಂದು ತಿಳಿಸಿದರು.

‘ಮಾಹಿತಿ ಲಭ್ಯವಾಗಿಲ್ಲ’ಧಾರವಾಡ: ಉತ್ತರಾಖಂಡದಲ್ಲಿ ಈ ಹಿಂದೆ ಸಂಭವಿಸಿದಂತೆ ಭಾನುವಾರವೂ ಭಾರಿ ಮಳೆ ಸುರಿಯುತ್ತಿದ್ದು ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ.

ಇದರಿಂದಾಗಿ ಕರ್ನಾಟಕದ ವಿವಿಧ ಜಿಲ್ಲೆಯ ಜನತೆ ಉತ್ತರಾಖಂಡದಲ್ಲಿ ಸಿಲುಕಿಕೊಂಡಿರುವ ಬಗ್ಗೆ ವರದಿಯಾಗಿದ್ದು, ಧಾರವಾಡ ಜಿಲ್ಲೆಯಿಂದ ಅಲ್ಲಿಗೆ ತೆರಳಿರುವವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ಕುರಿತಂತೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್‌, ‘ನಾನು ತುರ್ತು ನಿರ್ವಹಣಾ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ.

ಧಾರವಾಡ ಜಿಲ್ಲೆಯ ಯಾವೊಬ್ಬ ವ್ಯಕ್ತಿಯೂ ಉತ್ತರಾಖಂಡದ ಮಳೆಯಲ್ಲಿ ಸಿಲುಕಿಕೊಂಡಿರುವ    ಬಗ್ಗೆ ಮಾಹಿತಿ ದೊರೆತಿಲ್ಲ. ಬಹುಶಃ ಸೋಮವಾರದೊಳಗೆ ಮಾಹಿತಿ ಸಿಗಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT