ADVERTISEMENT

ಎಚ್‌1ಎನ್‌1: ಮುಂಜಾಗ್ರತಾ ಕ್ರಮಗಳು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2015, 20:25 IST
Last Updated 9 ಫೆಬ್ರುವರಿ 2015, 20:25 IST

ಬೆಂಗಳೂರು: ರಾಜ್ಯದಲ್ಲಿ ಎಚ್‌1ಎನ್‌1 ಸೋಂಕಿನ ಪ್ರಮಾಣ ಉಲ್ಬಣವಾಗಿದ್ದು, ನಿಯಂತ್ರ­ಣಕ್ಕಾಗಿ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.

‘ಎಚ್‌1ಎನ್‌1ನ ಯಾವುದೇ ಲಕ್ಷಣ ಕಾಣಿಸಿ ಕೊಂಡಾಗ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಈ ಕಾಯಿಲೆಗೆ ಟಮಿಫ್ಲು ಎಂಬ ಮಾತ್ರೆಯನ್ನು ಹಾಗೂ ಇನ್ನಿತರ ರೋಗ ನಿರೋಧಕ ಔಷಧಿಯನ್ನು ನೀಡಿ ಕಾಯಿಲೆಯನ್ನು ನಿಯಂತ್ರಣಕ್ಕೆ ತರಬಹುದು’ ಎಂದು ವೈದ್ಯರು ತಿಳಿಸಿದ್ದಾರೆ.

‘ತಕ್ಷಣಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬಂದರೆ ಚಿಕಿತ್ಸೆ ನೀಡಬಹುದು. ರೋಗ ಉಲ್ಬಣಿಸಿದ ಮೇಲೆ ಬಂದರೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗುವ ಸಾಧ್ಯತೆ ಕಡಿಮೆಯಿದೆ’ ಎಂದು ಹೇಳಿದರು.

ಎಚ್1ಎನ್1 ಲಕ್ಷಣಗಳು
*ಸತತ ವಾಂತಿ, ಭೇದಿ, ಕೆಮ್ಮು, ಗಂಟಲಿನಲ್ಲಿ ಕಫ
*ಅತಿಯಾದ ಜ್ವರ
*ಮೈ–ಕೈ ನೋವು, ಸುಸ್ತು, ವಿಪರೀತ ತಲೆನೋವು.

ಎಚ್‌1ಎನ್‌1 ಹರಡುವ ಬಗೆ
*ಈ ವೈರಸ್ ಪೀಡಿತ ಹಂದಿಯ ಮಾಂಸವನ್ನು ಸರಿಯಾಗಿ ಸ್ವಚ್ಛಗೊಳಿ­ಸದೇ ಅಥವಾ ಬೇಯಿಸದೇ ತಿನ್ನುವುದು

ADVERTISEMENT


*ರೋಗಾಣು ಬೆರೆತ ನೀರು ಸೇವನೆ
*ಎಚ್‌1ಎನ್‌1 ಪೀಡಿತ ವ್ಯಕ್ತಿಯ ಜೊಲ್ಲು, ಸೀನಿನ ಮೂಲಕ ಸಿಡಿದ ದ್ರವ ತಗುಲಿದರೆ ರೋಗ ಹರಡುವ ಸಾಧ್ಯತೆ ಇದೆ.
*ಈ ದ್ರವವನ್ನು ಒರೆಸಿಕೊಂಡ ಕೈಯನ್ನು ಮುಟ್ಟಿದ ಜಾಗವನ್ನು ಬೇರೆ­ಯವರು ಮುಟ್ಟಿ ಆಹಾರ­ವಸ್ತುಗಳನ್ನು ಮುಟ್ಟಿದಾಗ ಹರಡಬಹುದು
*ಜನನಿಬಿಡ ಸ್ಥಳಗಳಲ್ಲಿ ಸೀನುವುದು ಅಥವಾ ಕೆಮ್ಮುವುದರಿಂದ ಅಲ್ಲಿ ಉಪಸ್ಥಿತರಿದ್ದವರಿಗೆ ಹರಡಲಿದೆ.

ಮುಂಜಾಗ್ರತಾ ಕ್ರಮಗಳು
*ಆಗಾಗ್ಗೆ ಕೈ ತೊಳೆಯುವುದು
*ಕೈ ತೊಳೆಯದೆ ಯಾವುದೇ ಆಹಾರ ಸೇವನೆ ಮಾಡಬಾರದು.
*ಮೂಗು, ಬಾಯಿ, ಕಣ್ಣುಗಳನ್ನು ಸಹ ಸ್ಪರ್ಶಿಸಿಕೊಳ್ಳ ಬಾರದು
*ಕೆಮ್ಮು ಬಂದಾಗ ಮಾಸ್ಕ್‌ ಧರಿಸಬೇಕು
*ಔಷಧಿ ಅಂಗಡಿಗಳಲ್ಲಿ ದೊರಕುವ ಮಾಸ್ಕ್ ಗಳನ್ನು ಬಳಸಬಹುದು.
*ಜ್ವರ ಕಾಣಿಸಿಕೊಂಡ ತಕ್ಷಣ ಸಮೀಪದ ಆಸ್ಪತ್ರೆಯಲ್ಲಿ ತಪಾಸಣೆ
*ರೋಗ ಪೀಡಿತರಿಗೆ ಮನೆಯಲ್ಲಿ ಪ್ರತ್ಯೇಕ ವ್ಯವಸ್ಥೆ
*ಅವರಿಗೆಂದೇ ಪ್ರತ್ಯೇಕವಾದ ಕೈ ವಸ್ತ್ರ, ಟವೆಲ್‌ ಬಳಕೆ
*ಮನೆ ವಾತಾವರಣದಲ್ಲಿ ಶುಚಿತ್ವ ಕಾಪಾಡಬೇಕು.
*ಎಚ್1ಎನ್1 ಪೀಡಿತರ ಸಾಂಗತ್ಯದಿಂದ ದೂರವಿರಬೇಕು.

ಪ್ರಯೋಗಾಲಯಗಳು
ರಾಜ್ಯದಲ್ಲಿ ಎಚ್‌1ಎನ್‌1 ಪರೀಕ್ಷೆಗೆ ಒಟ್ಟು ಐದು ಪ್ರಯೋಗಾಲಯಗಳಿದ್ದು, ಇಲ್ಲಿ ಕಫ ಪರೀಕ್ಷೆ ನಡೆಸಲಾಗುತ್ತದೆ. ಬೆಂಗಳೂರಿನ ನಿಮ್ಹಾನ್ಸ್‌, ಮಣಿಪಾಲ್‌ ಆಸ್ಪತ್ರೆ, ನಾರಾಯಣ ಹೃದಯಾಲಯ, ಕಮಾಂಡ್‌ ಆಸ್ಪತ್ರೆ ಹಾಗೂ ಉಡುಪಿಯ ಮಣಿಪಾಲ ಆಸ್ಪತ್ರೆ.

ಅಸುಂಡಿ ಗ್ರಾಮದ ವೀರಯ್ಯ ಬಲಿ
ಬೆಂಗಳೂರು:  ಎಚ್‌1ಎನ್‌1 ಸೋಂಕಿನಿಂದ ಬಳಲು­ತ್ತಿದ್ದ  ಗದಗ ತಾಲ್ಲೂಕಿನ ಅಸುಂಡಿ ಗ್ರಾಮದ ಗಂಗಾ­ಧರಯ್ಯ ವೀರಯ್ಯ ಹಿರೇಮಠ (41) ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮಹಿಳೆ ಆಸ್ಪತ್ರೆಗೆ: ಹುಬ್ಬಳ್ಳಿಯ ಮಹಿಳೆ­ಯೊಬ್ಬರು (23) ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಎಚ್‌1ಎನ್‌1 ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ.  ದಾವಣಗೆರೆ ಮತ್ತು ಚಿತ್ರದುರ್ಗ ದಲ್ಲಿ ತಲಾ ಒಂದು ಪ್ರಕರಣಗಳು ಸೋಮವಾರ ಬೆಳಕಿಗೆ ಬಂದಿವೆ.

ಎಚ್1ಎನ್1 ಪತ್ತೆ: ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲ್ಲೂಕಿನ ಎಲ್ಲೋಡು ಗ್ರಾಮದ ಮಹಿಳೆಯೊಬ್ಬ ರಿಗೆ ಎಚ್1 ಎನ್1 ಇರು­ವುದು ದೃಢಪಟ್ಟಿದ್ದು, ಬೆಂಗ­ಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಮೀಳಮ್ಮ (60) ಎಂಬುವವರು ಬಾಗೇಪಲ್ಲಿಯ ಮಗನ ಮನೆಗೆ ಹೋಗಿ ದ್ದಾಗ ಜ್ವರ ಕಾಣಿಸಿಕೊಂಡಿದ್ದು, ರಕ್ತ ಪರೀಕ್ಷೆ ಮಾಡಿಸಿದಾಗ ಎಚ್1ಎನ್1 ಇರುವುದು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.