ADVERTISEMENT

ಎತ್ತಿನಹೊಳೆಗೂ ತೆಲುಗು ಗಂಗಾ ಸ್ಥಿತಿ

ಐಐಎಸ್‌ಸಿ ಅಧ್ಯಯನ ವರದಿಯಲ್ಲಿ ಸರ್ಕಾರಕ್ಕೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ಮೇ 2015, 19:30 IST
Last Updated 9 ಮೇ 2015, 19:30 IST

ಉಪ್ಪಿನಂಗಡಿ: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪರಿಸರ ಅಧ್ಯಯನ ಕೇಂದ್ರದ ಶಕ್ತಿ ಮತ್ತು ಜೌಗು ಭೂಮಿ ಸಂಶೋಧನಾ ತಂಡವು ಎತ್ತಿನಹೊಳೆಯ ನೀರಿನ ಲಭ್ಯತೆ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದು, ಆಂಧ್ರದ ನೆಲ್ಲೂರು ಜಿಲ್ಲೆಯ ತೆಲುಗುಗಂಗಾ ಯೋಜನೆಯಂತೆ ಎತ್ತಿನಹೊಳೆ ಯೋಜನೆಯೂ ನೀರಿಲ್ಲದೆ ವಿಫಲವಾಗಲಿದೆ ಎಂದು ಎಚ್ಚರಿಸಿದೆ.

ಶನಿವಾರ ಇಲ್ಲಿಗೆ ಸಮೀಪದ ಕುಟ್ರುಪ್ಪಾಡಿ ಗ್ರಾಮದ ಉರುಂಬಿ- ದೋಳ್ಪಾಡಿಯಲ್ಲಿ ಕುಮಾರಧಾರಾ ನದಿ ದಡದಲ್ಲಿ ಹಮ್ಮಿಕೊಳ್ಳಲಾದ ಪಶ್ಚಿಮಘಟ್ಟ ಪರಿಸರ ರಕ್ಷಣಾ ಜಾಗೃತಿ ಶಿಬಿರದಲ್ಲಿ ಈ ಅಧ್ಯಯನ ವರದಿಯನ್ನು ಬಿಡುಗಡೆಗೊಳಿಸಲಾಯಿತು.ಕರ್ನಾಟಕ ನೀರಾವರಿ ನಿಗಮ ಹೇಳಿಕೊಂಡಂತೆ ಇಲ್ಲಿ 24 ಟಿಎಂಸಿ ಅಡಿ ನೀರು ಲಭ್ಯವಾಗುವುದಿಲ್ಲ, ಕೇವಲ 9.55 ಟಿಎಂಸಿ ಅಡಿ ನೀರು ಮಾತ್ರ ದೊರಕುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ಅವರ ನೇತೃತ್ವದ ಅಧ್ಯಯನ ತಂಡದಲ್ಲಿ ವಿನಯ್ ಎಸ್., ಭರತ್ ಐತಾಳ್ ಇತರರು ಈ ವರದಿ ಸಿದ್ಧಪಡಿಸಿದ್ದರು. ಕಳೆದ ತಿಂಗಳು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

ನಿರ್ಣಯಗಳು: ಈ ಶಿಬಿರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸಿ 6 ನಿರ್ಣಯವನ್ನು ಅಂಗೀಕರಿಸಲಾಯಿತು. ನಿರ್ಣಯದ ಪ್ರತಿಯನ್ನು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ವಾಮನ ಆಚಾರ್ಯ ಮತ್ತು ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಕೇಂದ್ರ ಸರ್ಕಾರಕ್ಕೆ ಸುಬ್ರಹ್ಮಣ್ಯನ್ ಸಮಿತಿ ನೀಡಿರುವ ಅರಣ್ಯ ಕಾಯ್ದೆ ತಿದ್ದುಪಡಿ ಶಿಫಾರಸುಗಳ ಬಗ್ಗೆ ಚರ್ಚೆ ನಡೆಯಬೇಕು, ಅರಣ್ಯ ಕಾಯ್ದೆ ಬಲಹೀನಗೊಳಿಸುವ ತಿದ್ದುಪಡಿ ಪ್ರಸ್ತಾವಗಳನ್ನು ಕೈಬಿಡಬೇಕು, ಕುಮಾರಧಾರಾ ನದಿಗೆ ಉರುಂಬಿ ಎಂಬಲ್ಲಿ ಕಟ್ಟಲು ಉದ್ದೇಶಿಸಿರುವ ಮಿನಿ ಜಲ ವಿದ್ಯುತ್ ಯೋಜನೆ ಕೈಬಿಡಬೇಕು, ಈ ಜಲಾನಯನದಲ್ಲಿ 9.5 ಟಿಎಂಸಿ ನೀರು ಲಭ್ಯ. ಆದರೆ ಸರ್ಕಾರ 24 ಟಿಎಂಸಿ ನೀರು ಲಭ್ಯವಾಗಲಿದೆ ಎಂದು ತಪ್ಪಾಗಿ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.