ADVERTISEMENT

ಎಸ್‌ಐಟಿಗೆ ಆಸ್ತಿ ಜಪ್ತಿ ಅಧಿಕಾರ: ಕೇಂದ್ರದ ಅಂಕಿತವೂ ಬೇಕು

ಸಚಿವ ಸಂಪುಟ ಉಪ ಸಮಿತಿಗೆ ಅಧಿಕಾರಿಗಳಿಂದ ಮನವರಿಕೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2015, 20:29 IST
Last Updated 26 ಜನವರಿ 2015, 20:29 IST

ಬೆಂಗಳೂರು: ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ವಸೂಲಿ ಮಾಡುವ ಅಧಿಕಾರವನ್ನು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ನೀಡುವ ಕುರಿತು ಸಚಿವ ಸಂಪುಟ ಉಪ ಸಮಿತಿಯಲ್ಲಿ ಚರ್ಚೆ ಆರಂಭವಾಗಿದೆ.

ಈ ಸಂಬಂಧ ಮಸೂದೆಯೊಂದಕ್ಕೆ ವಿಧಾನಮಂಡಲದ ಒಪ್ಪಿಗೆ ಪಡೆದು, ಕೇಂದ್ರಕ್ಕೆ ಕಳುಹಿಸುವ ಚಿಂತನೆ ನಡೆದಿದೆ.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಲೋಕಾಯುಕ್ತ ವಿಚಾರಣಾ ವರದಿ ಆಧರಿಸಿ ತನಿಖೆ ನಡೆಸುವ ಹೊಣೆಯನ್ನು ಎಸ್‌ಐಟಿಗೆ ಒಪ್ಪಿಸಲಾಗಿದೆ. ಗ್ರಾಮೀಣಾ­ಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ ನೇತೃತ್ವದ ಸಂಪುಟ ಉಪ ಸಮಿತಿ ಎಸ್‌ಐಟಿ ಕಾರ್ಯನಿರ್ವಹಣೆ ಮೇಲ್ವಿಚಾರಣೆ ನಡೆಸುತ್ತಿದೆ. ನಷ್ಟ ವಸೂಲಿಗೆ ಅಧಿಕಾರ ನೀಡುವ ಕುರಿತು ಸಮಿತಿ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ.

ADVERTISEMENT

2006ರಿಂದ 2010ರ ಅವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ₨ 16,058 ಕೋಟಿ ನಷ್ಟ ಉಂಟಾಗಿದೆ ಎಂದು ಆಗಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಅವರು 2011ರಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಅಂದಾಜು ಮಾಡಿದ್ದರು. 787 ಅಧಿಕಾರಿಗಳು ಮತ್ತು 100 ಕಂಪೆನಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಉಲ್ಲೇಖಿಸಿದ್ದರು.

ರಾಜ್ಯ ಸರ್ಕಾರ ನೇಮಕ ಮಾಡಿರುವ ಎಸ್‌ಐಟಿ ಈವರೆಗೆ 39 ಪ್ರಥಮ ವರ್ತಮಾನ ವರದಿಗಳನ್ನು (ಎಫ್‌ಐಆರ್‌) ದಾಖಲು ಮಾಡಿ, ತನಿಖೆ ನಡೆಸುತ್ತಿದೆ. ಸುಪ್ರೀಂಕೋರ್ಟ್‌ ನಿರ್ದೇಶನದಂತೆ 31 ಎಫ್‌ಐಆರ್‌ ದಾಖಲು ಮಾಡಲಾಗಿದೆ. ಅಕ್ರಮ ಗಣಿಗಾರಿಕೆ ಕುರಿತು ತನಿಖೆಗೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಅನುಸಾರ ಎಂಟು ಎಫ್‌ಐಆರ್‌ ದಾಖಲಿಸಲಾಗಿದೆ.

‘ಎಸ್‌ಐಟಿ ತನಿಖೆ ಇನ್ನೂ ಆರಂಭಿಕ ಹಂತದಲ್ಲಿದೆ. ಸಿಬಿಐ ಕೂಡ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸುತ್ತಿದೆ. ಸಿಬಿಐ ಪ್ರಕರಣಗಳಲ್ಲಿ ನಷ್ಟ ವಸೂಲಿಗಾಗಿ ಆಸ್ತಿಗಳನ್ನು ಜಪ್ತಿ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯ ಮಾಡುತ್ತಿದೆ. ಅದೇ ಮಾದರಿಯಲ್ಲಿ ಎಸ್‌ಐಟಿಗೂ ಅಧಿಕಾರ ನೀಡುವ ಕುರಿತು ಚರ್ಚೆ ನಡೆಸಿದ್ದೇವೆ. ತನಿಖೆಯ ಜೊತೆಯಲ್ಲೇ ಆಸ್ತಿ ಜಪ್ತಿಯ ಅಧಿಕಾರವನ್ನೂ ನೀಡಿದರೆ ಎಸ್‌ಐಟಿ ಬಲವರ್ಧನೆ ಆಗುತ್ತದೆ ಎಂಬ ಅಭಿಪ್ರಾಯವಿದೆ’ ಎಂದು ಸಚಿವ ಸಂಪುಟ ಉಪ ಸಮಿತಿಯ ಸದಸ್ಯರೊಬ್ಬರು ತಿಳಿಸಿದರು.

‘ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಶಾಮೀಲಾಗಿರುವ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಕೆಲವು ಇಲಾಖೆಗಳಲ್ಲಿ ಇಲಾಖಾ ವಿಚಾರಣೆ ನಡೆಯುತ್ತಿರುವ ಕುರಿತು ಸಮಿತಿಗೆ ಮಾಹಿತಿ ಒದಗಿಸಿದ್ದಾರೆ. ಆದರೆ, ನಷ್ಟ ವಸೂಲಿ ಕುರಿತು ಸಮಿತಿ ಹೆಚ್ಚು ಗಮನ ಹರಿಸುತ್ತಿದೆ. ಇದಕ್ಕಾಗಿ ಕಾನೂನಿಗೆ ತಿದ್ದುಪಡಿ ತರುವ ಪ್ರಸ್ತಾವವಿದೆ. ಎಸ್‌ಐಟಿಗೆ ಹೆಚ್ಚಿನ ಅಧಿಕಾರ ನೀಡುವ ಕುರಿತು ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು.

ಕೇಂದ್ರದ ಒಪ್ಪಿಗೆ ಅಗತ್ಯ: ಆಸ್ತಿಗಳನ್ನು ಜಪ್ತಿ ಮಾಡುವ ಅಧಿಕಾರ ನೀಡುವುದಕ್ಕೆ ಸಂಬಂಧಿಸಿದ ಕಾನೂನುಗಳು ಸಮವರ್ತಿ ಪಟ್ಟಿಯಲ್ಲಿವೆ. ಈ ಕಾನೂನುಗಳ ತಿದ್ದುಪಡಿಗೆ ರಾಜ್ಯ ಸರ್ಕಾರ ವಿಧಾನಮಂಡಲದಲ್ಲಿ ಮಸೂದೆ ಮಂಡಿಸಿ, ಒಪ್ಪಿಗೆ ಪಡೆದರೂ ಪ್ರಕ್ರಿಯೆ ಪೂರ್ಣ ಆಗುವುದಿಲ್ಲ. ಕೇಂದ್ರ ಸರ್ಕಾರಕ್ಕೆ ಕಳುಹಿಸಿ, ರಾಷ್ಟ್ರಪತಿಯವರ ಒಪ್ಪಿಗೆ ಪಡೆದರೆ ಮಾತ್ರ ತಿದ್ದುಪಡಿ ಊರ್ಜಿತ ಆಗುತ್ತದೆ.
ಈ ವಿಷಯವನ್ನು ಸಚಿವ ಸಂಪುಟ ಉಪ ಸಮಿತಿಗೆ ಮನವರಿಕೆ ಮಾಡಲಾಗಿದೆ ಎಂದು ಎಸ್‌ಐಟಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಆದರೆ, ಸಾರ್ವಜನಿಕ ನೌಕರರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಸಾಬೀತಾದ ಪ್ರಕರಣಗಳಲ್ಲಿ ಲೋಕಾಯುಕ್ತ ಪೊಲೀಸರೇ ನೇರವಾಗಿ ಆಸ್ತಿ ಜಪ್ತಿ ಮಾಡಬಹುದು. ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಖಾಸಗಿ ವ್ಯಕ್ತಿಗಳ ಆಸ್ತಿ ಜಪ್ತಿಗೆ ಮಾತ್ರ ಕಾನೂನು ತಿದ್ದುಪಡಿ ಅಗತ್ಯ ಎನ್ನುತ್ತಾರೆ ಕಾನೂನು ತಜ್ಞರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಸುಪ್ರೀಂಕೋರ್ಟ್‌ ವಕೀಲ ಕೆ.ವಿ.ಧನಂಜಯ, ‘ಸಾರ್ವಜನಿಕ ನೌಕರರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ದೃಢಪಟ್ಟರೆ ಅಂತಹವರ ಆಸ್ತಿಯನ್ನು ಜಪ್ತಿ ಮಾಡಲು ಇತ್ತೀಚಿನ ಒಂದು ಸುಗ್ರೀವಾಜ್ಞೆ ಪೊಲೀಸರಿಗೆ ಅಧಿಕಾರ ನೀಡಿದೆ. ಆದರೆ, ಖಾಸಗಿ ವ್ಯಕ್ತಿಗಳ ವಿಚಾರದಲ್ಲಿ ಅದು ಅನ್ವಯ ಆಗುವುದಿಲ್ಲ. ಕಾನೂನು ತಿದ್ದುಪಡಿ ಪ್ರಕ್ರಿಯೆ ವಿಳಂಬ ಆಗಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.