ADVERTISEMENT

ಏನು ಮಾಡಿದರೂ ಒಟ್ಟಿಗೆ, ಜೀವವೂ ಒಟ್ಟಿಗೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 30 ಏಪ್ರಿಲ್ 2016, 19:36 IST
Last Updated 30 ಏಪ್ರಿಲ್ 2016, 19:36 IST
ಸಹಪಾಠಿಗಳನ್ನು ನೆನೆದು ಕಣ್ಣೀರಿಟ್ಟ ಐಶ್ವರ್ಯಾ
ಸಹಪಾಠಿಗಳನ್ನು ನೆನೆದು ಕಣ್ಣೀರಿಟ್ಟ ಐಶ್ವರ್ಯಾ   

ಬಳ್ಳಾರಿ: ‘ಅವರೆಲ್ಲರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಜೊತೆಗೆ ಒಂದೇ ತರಗತಿ, ಒಂದೇ ಬೆಂಚಿನ ಮೇಲೆ ಕುಳಿತು ಪಾಠ ಕೇಳುತ್ತಿದ್ದರು. ಹಾಸ್ಟೆಲ್‌ನಲ್ಲಿ ಕೂಡ ಒಂದೇ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ನಿತ್ಯ ಒಂದೇ ತಟ್ಟೆಯಲ್ಲಿಯೇ ಊಟ ಮಾಡುತ್ತಿದ್ದರು. ಪರಸ್ಪರ ಅಷ್ಟೊಂದು ಹಚ್ಚಿಕೊಂಡಿದ್ದ ಅವರೆಲ್ಲ ಈಗ ಇಲ್ಲ ಎಂದರೆ ನಂಬಲು ಆಗುತ್ತಿಲ್ಲ’

ನಗರದ ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್‌ ಪೂರ್ವ ಹಾಗೂ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿ ಗೌಸಿಯಾ ಬಾನು ಶನಿವಾರ ದುಃಖಿಸುತ್ತಲೇ ಹೇಳಿದ ಈ ಮಾತುಗಳು ಅಲ್ಲಿದ್ದ ಎಲ್ಲರ ಮಾತೂ ಆಗಿದ್ದವು.

ಚಿತ್ರದುರ್ಗದ ಚಳ್ಳಕೆರೆ ಸಮೀಪ ಶುಕ್ರವಾರ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿ ನಿಲಯದ ಆರು ಜನ ವಿದ್ಯಾರ್ಥಿನಿಯರು ದುರ್ಮರಣಕ್ಕೆ ಈಡಾಗಿದ್ದಾರೆ. ಆರು ವಿದ್ಯಾರ್ಥಿನಿಯರ ಪೈಕಿ ಐವರ ಒಡನಾಟವನ್ನು ಕಣ್ಣಾರೆ ಕಂಡಿದ್ದ ಗೌಸಿಯಾ ಅದನ್ನೆಲ್ಲ ಹೇಳುವಾಗ ದುಃಖ ಉಮ್ಮಳಿಸಿ, ಕಣ್ಣೀರಾದರು.

‘ಏನೇ ಮಾಡಿದರೂ, ಎಲ್ಲಿಗೇ ಹೋದರೂ ಒಟ್ಟಿಗೆ ಹೋಗುತ್ತಿದ್ದರು. ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ. ಸದಾ ಎಲ್ಲರನ್ನೂ ನಗಿಸುತ್ತ, ರೇಗಿಸುತ್ತ ಇರುತ್ತಿದ್ದರು. ಅವರಿದ್ದರೇನೇ ಹಾಸ್ಟೆಲ್‌ನಲ್ಲಿ ಲವಲವಿಕೆ ವಾತಾವರಣ ಇರುತ್ತಿತ್ತು. ಈಗ ಒಟ್ಟಿಗೆ ಜೀವ ಬಿಟ್ಟಿದ್ದಾರೆ...’ ಎಂದು ಹೇಳಿ ಮೌನಕ್ಕೆ ಜಾರಿದರು.

ಹೀಗೆ ಸದಾ ಒಟ್ಟಿಗೆ ಇರುತ್ತಿದ್ದ ಆ ಐವರು ವಿದ್ಯಾರ್ಥಿನಿಯರೆಲ್ಲರೂ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನವರು. ಇವರಲ್ಲಿ ಶಾಂತಿ (22) ಹಾಗೂ ಕಾವ್ಯ (21) ಗಜಿಗಿನಹಾಳ್‌ ಗ್ರಾಮದವರು. ಇಬ್ರಾಹಿಂಪುರದ ಡಿ. ಸುಧಾ (19), ಕರೂರಿನ  ಕೆ. ಜಯಶ್ರೀ (20) ಹಾಗೂ ಸಿರಿಗೇರಿಯ ಭಾರತಿ (22) ಎಲ್ಲರೂ ನಗರದ ಶ್ರೀ ಗುರು ತಿಪ್ಪೇರುದ್ರ ಮಹಾವಿದ್ಯಾಲಯದಲ್ಲಿ (ಎಸ್‌ಜಿಟಿ) ಬಿ.ಕಾಂ ಮೊದಲ ವರ್ಷದಲ್ಲಿ ಓದುತ್ತಿದ್ದರೆ, ತಾಳೂರಿನ ಪಿ. ಸರಿತಾ (22)  ವಿ.ವಿ ಕಾಲೇಜಿನಲ್ಲಿ  ಬಿ.ಕಾಂ ಅಂತಿಮ ವರ್ಷದಲ್ಲಿದ್ದರು.

ನಗರದ ಖಾಸಗಿ ಕಂಪ್ಯೂಟರ್‌ ತರಬೇತಿ ಕೇಂದ್ರವು ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಹಾಜರಾಗಲು ವ್ಯವಸ್ಥೆ ಮಾಡಿತ್ತು. ಅವರೊಂದಿಗೆ ವಿದ್ಯಾರ್ಥಿ ನಿಲಯದ ಈ ವಿದ್ಯಾರ್ಥಿನಿಯರು ಕ್ರೂಸರ್‌ನಲ್ಲಿ ಹೋಗಿದ್ದರು. ಉದ್ಯೋಗದ ನಿರೀಕ್ಷೆಯಲ್ಲಿದ್ದ ಅವರು ಹೋಗುವಾಗ ಬಹಳ ಸಂಭ್ರಮದಿಂದ ತೆರಳಿದ್ದರು. ಅವಸರದಲ್ಲಿ ತಮಗೆ ಬೇಕಾದ ವಸ್ತುಗಳನ್ನು ಜೊತೆಗೆ ಕೊಂಡೊಯ್ದು ಉಳಿದುದ್ದನ್ನು ಚೆಲ್ಲಾಪಿಲ್ಲಿಯಾಗಿ ಬಿಟ್ಟು ಹೋಗಿದ್ದರು. ಹಾಗೆ ಬಿಟ್ಟು ಹೋಗಿದ್ದ ವಸ್ತುಗಳು ಅವರು ವಾಸವಾಗಿದ್ದ ಕೊಠಡಿ ಸಂಖ್ಯೆ ಒಂದರಲ್ಲಿ ಈಗಲೂ ಹಾಗೆಯೇ ಬಿದ್ದಿವೆ. ವಿದ್ಯಾರ್ಥಿನಿಯರ ಸಾವಿನ ನಂತರ ಇಡೀ ಹಾಸ್ಟೆಲ್‌ನಲ್ಲಿ ಸೂತಕದ ಛಾಯೆ ಆವರಿಸಿದೆ. ವಿದ್ಯಾರ್ಥಿನಿಯರು, ಸಿಬ್ಬಂದಿ ದುಃಖದಲ್ಲಿ ಮುಳುಗಿದ್ದಾರೆ. ಹಾಸ್ಟೆಲ್‌ನಲ್ಲಿಯೇ ಉಳಿದುಕೊಂಡರೆ ಅವರು ನೆನಪು ಕಾಡುತ್ತದೆ ಎಂದು ಕೆಲವು ವಿದ್ಯಾರ್ಥಿನಿಯರು ತಮ್ಮ ಗ್ರಾಮಗಳಿಗೆ ತೆರಳಿದ್ದಾರೆ.

‘ಸಾವಿನ ಸುದ್ದಿ ಕೇಳಿದ ನಂತರ ಏನು ಮಾಡುವುದಕ್ಕೂ ಮನಸ್ಸಿಲ್ಲ. ಹಾಸ್ಟೆಲ್‌ನಲ್ಲಿ ಇರಲು ಭಯ ಆಗುತ್ತಿದೆ’ ಎಂದರು ಐಶ್ವರ್ಯಾ, ‘ಎಲ್ಲ ವಿದ್ಯಾರ್ಥಿನಿಯರೂ ಓದುವುದರಲ್ಲಿ ಬಹಳ ಮುಂದೆ ಇದ್ದರು. ಅವರ ಪ್ರತಿಭೆ ನೋಡಿಯೇ ಅವರನ್ನು ಸಂದರ್ಶನಕ್ಕೆ ಕರೆದುಕೊಂಡು ಹೋಗಿದ್ದರು. ಏಪ್ರಿಲ್‌ 28ರ ರಾತ್ರಿ ಬಳ್ಳಾರಿಯಿಂದ ಹೋಗಿದ್ದರು. ಅವರ ಪೋಷಕರಿಗೂ ತಿಳಿಸಿದ್ದರು.’ ಎಂದು ನಿಲಯದ ಹಿರಿಯ ಮೇಲ್ವಿಚಾರಕಿ ಶಾಂತಮ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.