ADVERTISEMENT

ಒಬಿಸಿಗೂ ಬ್ಯಾಕ್‌ಲಾಗ್‌

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 19:34 IST
Last Updated 5 ಅಕ್ಟೋಬರ್ 2015, 19:34 IST

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಇರುವ ‘ಬ್ಯಾಕ್‌ಲಾಗ್‌’ ಸೌಲಭ್ಯ ಇನ್ನು ಮುಂದೆ ಇತರೆ ಹಿಂದುಳಿದ ವರ್ಗಗಳಿಗೂ(ಒಬಿಸಿ) ಅನ್ವಯಿಸಲಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.

ಸರ್ಕಾರದ ಎಲ್ಲ ಹಂತದ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳುವಾಗ ಒಬಿಸಿ ಅಭ್ಯರ್ಥಿಗಳಿಗೆ ಮೀಸಲಿಟ್ಟ ಹುದ್ದೆಗಳಿಗೆ ಅದೇ ಪ್ರವರ್ಗಗಳ ಅರ್ಹರು ಲಭ್ಯ ಇಲ್ಲದ ಸಂದರ್ಭಗಳಲ್ಲಿ ಅಂತಹ ಹುದ್ದೆಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಅದರ ನಂತರದ ನೇಮಕಾತಿ ಸಂದರ್ಭದಲ್ಲಿ ಅವುಗಳನ್ನು ಸಂಬಂಧಪಟ್ಟ ಪ್ರವರ್ಗದ ಅಭ್ಯರ್ಥಿಗಳಿಗೇ ಮೀಸಲಿಡಬೇಕು ಎಂಬುದನ್ನು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಬ್ಯಾಕ್‌ಲಾಗ್‌: ಇದುವರೆಗೂ  ಏನಾಗುತ್ತಿತ್ತು?
ಇದುವರೆಗೂ ಬ್ಯಾಕ್‌ ಲಾಗ್‌ ವ್ಯವಸ್ಥೆ ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಮಾತ್ರ ಇತ್ತು. ಹಿಂದುಳಿದ ವರ್ಗದವರಿಗೆ ಮೀಸಲಿಟ್ಟ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯ ಇಲ್ಲದ ಸಂದರ್ಭದಲ್ಲಿ ಅಂತಹ ಹುದ್ದೆಗಳಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಅವಕಾಶ ಇತ್ತು. ಇನ್ನು ಮುಂದೆ ಅದಕ್ಕೆ ಅವಕಾಶ ಇರುವುದಿಲ್ಲ ಎಂದು ಹೇಳಲಾಗಿದೆ.

ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಶಿಫಾರಸಿನ ಪ್ರಕಾರ ಈ ತೀರ್ಮಾನ ಮಾಡಲಾಗಿದೆ.

ಆದೇಶದಲ್ಲಿ ಏನಿದೆ?: ಪ್ರತಿಬಾರಿಯ ನೇರ ನೇಮಕಾತಿ ಸಂದರ್ಭದಲ್ಲಿ ಹೊಸ ಹುದ್ದೆ ಮತ್ತು ಬ್ಯಾಕ್‌ಲಾಗ್‌ ಹುದ್ದೆಗಳ ಪ್ರತ್ಯೇಕ ಪಟ್ಟಿಯನ್ನು ಪ್ರಕಟಿಸಬೇಕು. ಹೊಸ ಹುದ್ದೆಗಳನ್ನು ಮೀಸಲಾತಿ ನಿಯಮಗಳನ್ವಯ ವರ್ಗೀಕರಣ ಮಾಡಿ ಪ್ರಕಟಿಸಬೇಕು. ಬ್ಯಾಕ್‌ಲಾಗ್‌ ಹುದ್ದೆಗಳನ್ನು ಮತ್ತೊಮ್ಮೆ ವರ್ಗೀಕರಣ ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT