ADVERTISEMENT

ಕನ್ನಡಿಗರಿಗೆ ಕಳಂಕ ತರಲಾರೆ

ಸಿಜೆಐ ದತ್ತು ಭಾವುಕ ಭಾಷಣ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST
ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯ­ಮೂರ್ತಿ ಎಚ್‌.ಎಲ್‌. ದತ್ತು ಅವರನ್ನು ಬೆಂಗಳೂರು ವಕೀಲರ ಸಂಘದ ವತಿ­ಯಿಂದ ವಿಧಾನ­ಸೌಧದಲ್ಲಿ ಸೋಮವಾರ ಸನ್ಮಾನಿಸಲಾಯಿತು. ರಾಜ್ಯದ ಅಡ್ವೊಕೇಟ್‌ ಜನರಲ್‌ ಪ್ರೊ. ರವಿವರ್ಮ ಕುಮಾರ್‌, ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ, ದತ್ತು ಅವರ ಪತ್ನಿ ಗಾಯತ್ರಿ ದತ್ತು, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ವಿ. ಗೋಪಾಲ ಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ವಕೀಲರ ಸಂಘದ ಅಧ್ಯಕ್ಷ ಕೆ.ಎನ್‌. ಸುಬ್ಬಾರೆಡ್ಡಿ ಮತ್ತಿತರರು ಚಿತ್ರದಲ್ಲಿದ್ದಾರೆ
ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯ­ಮೂರ್ತಿ ಎಚ್‌.ಎಲ್‌. ದತ್ತು ಅವರನ್ನು ಬೆಂಗಳೂರು ವಕೀಲರ ಸಂಘದ ವತಿ­ಯಿಂದ ವಿಧಾನ­ಸೌಧದಲ್ಲಿ ಸೋಮವಾರ ಸನ್ಮಾನಿಸಲಾಯಿತು. ರಾಜ್ಯದ ಅಡ್ವೊಕೇಟ್‌ ಜನರಲ್‌ ಪ್ರೊ. ರವಿವರ್ಮ ಕುಮಾರ್‌, ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ, ದತ್ತು ಅವರ ಪತ್ನಿ ಗಾಯತ್ರಿ ದತ್ತು, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ವಿ. ಗೋಪಾಲ ಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ವಕೀಲರ ಸಂಘದ ಅಧ್ಯಕ್ಷ ಕೆ.ಎನ್‌. ಸುಬ್ಬಾರೆಡ್ಡಿ ಮತ್ತಿತರರು ಚಿತ್ರದಲ್ಲಿದ್ದಾರೆ   

ಬೆಂಗಳೂರು: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ­ಯಾಗಿ ಅಧಿಕಾರ ಸ್ವೀಕರಿಸಿದ ನಂತರ ಬೆಂಗಳೂರಿಗೆ ಮೊದಲ ಬಾರಿ ಭೇಟಿ ನೀಡಿದ ನ್ಯಾಯಮೂರ್ತಿ ಎಚ್‌.ಎಲ್‌. ದತ್ತು ಅವರು, ‘ಕನ್ನಡಿಗರಿಗೆ ನಾನು ಒಳ್ಳೆಯ ಹೆಸರು ತರುತ್ತೇನೋ, ಇಲ್ಲವೋ ಗೊತ್ತಿಲ್ಲ. ಆದರೆ ಕೆಟ್ಟ ಹೆಸರನ್ನು ಖಂಡಿತ ತರುವು­ದಿಲ್ಲ’ ಎಂದು ಹೇಳಿದರು.

ಬೆಂಗಳೂರು ವಕೀಲರ ಸಂಘ ವಿಧಾನಸೌಧದಲ್ಲಿ ಸೋಮ­ವಾರ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವನದಲ್ಲಿ ಈ ಹಂತಕ್ಕೆ ಏರಿರುವುದಕ್ಕೆ ನಾನು ಹೆಮ್ಮೆಪಡುವು­ದಿಲ್ಲ. ನಾನು ಸಾಮಾನ್ಯ ವ್ಯಕ್ತಿಯಾಗಿಯೇ ಇರುವೆ’ ಎಂದು ಹೇಳಿದರು.

‘ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಅವರು ಹಿಂದೆ ರಾಜ್ಯದ ಅಡ್ವೊಕೇಟ್‌ ಜನ­ರಲ್‌ ಆಗಿ ಅಧಿಕಾರ ಸ್ವೀಕರಿಸುವ ಮುನ್ನ ಅವರ ತಂದೆ, ನ್ಯಾಯ­ಮೂರ್ತಿ ಕೆ.ಎಸ್‌. ಹೆಗ್ಡೆ ಅವರು ‘ಸಂತೋಷ್‌, ನೀನು ಕೂರುವ ಕುರ್ಚಿಯ ಪ್ರಭಾವ ತಲೆಗೆ ಏರದಂತೆ ನೋಡಿಕೊ’ ಎಂದು ಕಿವಿಮಾತು ಹೇಳಿದ್ದರು. ಈ ಮಾತನ್ನು ನಾನು ನೆನೆಯುತ್ತೇನೆ’ ಎಂದು ನ್ಯಾ. ದತ್ತು ಅವರು ಭಾವುಕರಾಗಿ ನುಡಿದರು.

‘ನ್ಯಾ. ಎನ್‌. ಸಂತೋಷ್‌ ಹೆಗ್ಡೆ, ರಾಜೇಂದ್ರ ಬಾಬು ಮತ್ತು ಆರ್‌.ಎನ್‌. ನರಸಿಂಹಮೂರ್ತಿ ಅವರು ನನ್ನನ್ನು ರೂಪಿಸಿದ ವ್ಯಕ್ತಿಗಳು’ ಎಂದು ನೆನೆದರು.

‘ದತ್ತು ಅವರು ನ್ಯಾಯಮೂರ್ತಿಗಳ ಅಥವಾ ವಕೀಲರ ಕುಟುಂಬದಿಂದ ಬಂದವರಲ್ಲ. ಅವರು ಶಿಕ್ಷಕರೊಬ್ಬರ ಮಗ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿವೆ ಎಂಬುದಕ್ಕೆ ಅವರು ಸಾಕ್ಷಿ’ ಎಂದು ರಾಜ್ಯದ ಅಡ್ವೊಕೇಟ್‌ ಜನರಲ್‌ ಪ್ರೊ. ರವಿವರ್ಮ ಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್‌ನ ಮೇಲ್ಮನವಿ ನ್ಯಾಯಾಲಯವನ್ನು ದಕ್ಷಿಣ ಭಾರತದಲ್ಲಿ ಆರಂಭಿಸಬೇಕು. ಅದು ಬೆಂಗಳೂರಿನಲ್ಲಿ ಇರುವಂತೆ ಆಗಬೇಕು ಎಂದು ಪ್ರೊ. ಕುಮಾರ್‌ ಒತ್ತಾಯಿಸಿದರು.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್‌. ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎ.ಪಿ. ರಂಗನಾಥ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

‘ಪ್ರಕರಣ ಬಾಕಿಗೆ ಕಾರ್ಯಾಂಗ ಕಾರಣ’
ಬೆಂಗಳೂರು:
ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿ ತ್ವರಿತವಾಗಿ ಆಗಬೇಕು’ ಎಂದು ಹೇಳಿದರು.

ಮುಖ್ಯಮಂತ್ರಿಯವರ ಮಾತಿಗೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯೆ ನೀಡಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ವಿ. ಗೋಪಾಲ ಗೌಡ, ‘ಪ್ರಕರಣಗಳ ವಿಲೇವಾರಿ ವಿಳಂಬ­ವಾ­ಗಲು ನ್ಯಾಯಾಂಗ ಕಾರಣವಲ್ಲ. ನ್ಯಾಯಾಧೀಶರ ನೇಮಕ­ಗಳಲ್ಲಿ ವಿಳಂಬಕ್ಕೆ ಕಾರ್ಯಾಂಗ ಕಾರಣ’ ಎಂದರು.

ಒಂದು ಕಾಲು ಅಲ್ಲಿ, ಇಲ್ಲಿ: ‘ನಾನು ಒಂದು ಕಾಲನ್ನು ವಕೀಲಿ ವೃತ್ತಿಯಲ್ಲಿ, ಇನ್ನೊಂದು ಕಾಲನ್ನು ರಾಜಕೀಯ­ದಲ್ಲಿ ಇಟ್ಟಿದ್ದೆ. ಹಾಗಾಗಿ ಒಂಬತ್ತು ವರ್ಷ ವಕೀಲನಾಗಿ­ದ್ದರೂ ಆ ವೃತ್ತಿಯಲ್ಲಿ ಯಶಸ್ಸು ಕಾಣಲು ಆಗಲಿಲ್ಲ’ ಎಂದು ಸಿದ್ದರಾಮಯ್ಯ ಚಟಾಕಿ ಹಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT