ADVERTISEMENT

ಕನ್ನಡ ಚಿತ್ರ ಪ್ರದರ್ಶಕರಿಗೂ ಪ್ರಶಸ್ತಿ: ಸಿ.ಎಂ ಸಿದ್ದರಾಮಯ್ಯ ಘೋಷಣೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಕನ್ನಡ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ‘ಪುಟ್ಟಣ ಕಣಗಾಲ್‌ ಪ್ರಶಸ್ತಿ’ ಪಡೆದ ಕೆ.ವಿ. ರಾಜು, ‘ಡಾ. ರಾಜ್‌ಕುಮಾರ್‌ ಪ್ರಶಸ್ತಿ’ ಪಡೆದ ಆದವಾನಿ ಲಕ್ಷ್ಮೀದೇವಿ, ‘ಡಾ. ವಿಷ್ಣುವರ್ಧನ್‌’ ಪ್ರಶಸ್ತಿ ಪಡೆದ ಕೆ. ಚಿನ್ನಪ್ಪ, 2016ನೇ ಸಾಲಿನ ‘ಅತ್ಯುತ್ತಮ ನಟಿ’ ಶೃತಿ ಹರಿಹರನ್‌ ‘ಅತ್ಯುತ್ತಮ ನಟ’ ಅಚ್ಯುತ್‌ ಕುಮಾರ್‌ – ಪ್ರಜಾವಾಣಿ ಚಿತ್ರ
ಕನ್ನಡ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ‘ಪುಟ್ಟಣ ಕಣಗಾಲ್‌ ಪ್ರಶಸ್ತಿ’ ಪಡೆದ ಕೆ.ವಿ. ರಾಜು, ‘ಡಾ. ರಾಜ್‌ಕುಮಾರ್‌ ಪ್ರಶಸ್ತಿ’ ಪಡೆದ ಆದವಾನಿ ಲಕ್ಷ್ಮೀದೇವಿ, ‘ಡಾ. ವಿಷ್ಣುವರ್ಧನ್‌’ ಪ್ರಶಸ್ತಿ ಪಡೆದ ಕೆ. ಚಿನ್ನಪ್ಪ, 2016ನೇ ಸಾಲಿನ ‘ಅತ್ಯುತ್ತಮ ನಟಿ’ ಶೃತಿ ಹರಿಹರನ್‌ ‘ಅತ್ಯುತ್ತಮ ನಟ’ ಅಚ್ಯುತ್‌ ಕುಮಾರ್‌ – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯದಲ್ಲಿ ಹೆಚ್ಚು ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಪ್ರದರ್ಶಕರಿಗೂ ಮುಂದಿನ ವರ್ಷದಿಂದ ಪ್ರಶಸ್ತಿ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

2016ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳನ್ನು ಸೋಮವಾರ ಪ್ರದಾನ ಮಾಡಿ ಮಾತನಾಡಿದ ಅವರು, ‘ಮುಂದಿನ ಸಾಲಿನಿಂದ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ವತಿಯಿಂದ ಏಕಕಾಲಕ್ಕೆ ಡಾ. ರಾಜ್‌ಕುಮಾರ್‌ ಜನ್ಮದಿನ ಆಚರಿಸಲಾಗುವುದು’ ಎಂದರು.

‘ರಾಜ್‌ಕುಮಾರ್‌ ಉದ್ಘಾಟಿಸಿದ್ದ ಎಲ್ಲ ಕನ್ನಡ ಸಂಘ–ಸಂಸ್ಥೆಗಳಲ್ಲಿ  ರಾಜ್‌ಕುಮಾರ್‌ ಪ್ರತಿಮೆ ಸ್ಥಾಪಿಸಲಾಗುವುದು’ ಎಂದೂ ಮುಖ್ಯಮಂತ್ರಿ ಹೇಳಿದರು.

ADVERTISEMENT

‘ಕನ್ನಡ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿವೆ. ಆದರೆ, ಗುಣಮಟ್ಟದ ಚಿತ್ರಗಳು ಬರುತ್ತಿಲ್ಲ. ಅಶ್ಲೀಲ, ದ್ವಂದ್ವಾರ್ಥ ಸಂಭಾಷಣೆ ಕಡಿಮೆ ಮಾಡಿ, ಸಾಮಾಜಿಕ ಸಂದೇಶ, ಕಳಕಳಿ ಇರುವ ಚಿತ್ರಗಳ ನಿರ್ಮಾಣಕ್ಕೆ ನಿರ್ದೇಶಕರು, ನಿರ್ಮಾಪಕರು ಮುಂದಾಗಬೇಕು. ಭಾಷೆಯಲ್ಲಿ ಗಾಂಭೀರ್ಯ, ಘನತೆ, ಸಂಸ್ಕೃತಿ ಇರಬೇಕು’ ಎಂದೂ ಅವರು ಸಲಹೆ ನೀಡಿದರು.

‘ವಿದ್ಯಾರ್ಥಿಯಾಗಿದ್ದಾಗ ನಾನೂ ವಾರದಲ್ಲಿ ನಾಲ್ಕು ಸಿನಿಮಾ ನೋಡುತ್ತಿದ್ದೆ. ಅದರಲ್ಲಿ ಕನ್ನಡ ಸಿನಿಮಾಗಳೇ ಹೆಚ್ಚು. ಅಪರೂಪಕ್ಕೊಮ್ಮೆ ಹಿಂದಿ, ಯಾರಾದರೂ ಚೆನ್ನಾಗಿದೆ ಅಂದ್ರೆ ಇಂಗ್ಲಿಷ್‌ ಸಿನಿಮಾ ನೋಡುತ್ತಿದ್ದೆ. ಡಾ. ರಾಜ್‌ಕುಮಾರ್‌್ ಅವರಂಥ ಅದ್ಭುತ ನಟ ಮತ್ತೆ ಹುಟ್ಟಲು ಸಾಧ್ಯವೇ ಇಲ್ಲ’ ಎಂದು ನೆನಪಿಸಿಕೊಂಡರು.­

ಪ್ರಶಸ್ತಿ ಪ್ರಕ್ರಿಯೆಗೆ ತಡೆ ನೀಡಲು ಹೈಕೋರ್ಟ್‌  ನಕಾರ
2016ನೇ ಸಾಲಿನ ರಾಜ್ಯ ಚಲನಚಿತ್ರ ವಾರ್ಷಿಕ ಪ್ರಶಸ್ತಿಯ ಎಲ್ಲ ಪ್ರಕ್ರಿಯೆಗಳಿಗೆ ತಡೆ ನೀಡಲು ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತು ಮೈಸೂರಿನ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್‌ ಅವರಿದ್ದ ಏಕಸದಸ್ಯ ಪೀಠ ಸೋಮವಾರ ವಿಚಾರಣೆ ನಡೆಸಿತು.

ಅರ್ಜಿದಾರರ ವಕೀಲ ಅರುಣ್ ಶ್ಯಾಮ್‌, ‘2016ರ ಕನ್ನಡ ಚಲನಚಿತ್ರದ ಪ್ರಶಸ್ತಿ ಪ್ರದಾನ ಸಮಾರಂಭವೂ ಸೇರಿದಂತೆ ಎಲ್ಲ ಪ್ರಕ್ರಿಯೆಗಳಿಗೆ ತಡೆ ನೀಡಬೇಕು’ ಎಂದು ಕೋರಿದರು.

ಇದಕ್ಕೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಜಿ.ಶಿವಣ್ಣ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ, ಪ್ರಕ್ರಿಯೆಗೆ ತಡೆ ನೀಡಲು ನಿರಾಕರಿಸಿದರು.

ಆಕ್ಷೇಪ ಏನು ?: ‘ನಾನು ‘‘ಶವದ ಮುಂದೆ’’ ಹೆಸರಿನ ಚಿತ್ರ ನಿರ್ಮಿಸಿದ್ದೇನೆ. ಇದು ಸಾಮಾಜಿಕ ಕಳಕಳಿಯುಳ್ಳ ಚಿತ್ರ.
ಆದರೆ ಇದನ್ನು ಪ್ರಶಸ್ತಿಗೆ ಕಡೆಗಣಿಸಲಾಗಿದೆ’ಎಂಬುದು ಅರ್ಜಿದಾರರ ಆಕ್ಷೇಪ.

‘ಮಲ್ಟಿಪ್ಲೆಕ್ಸ್: ಶೀಘ್ರದಲ್ಲೇ  ಆದೇಶ’
‘ಕನ್ನಡ ಚಿತ್ರಗಳು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಂಜೆ 4.30 ಮತ್ತು 7.30ಕ್ಕೆ ಪ್ರದರ್ಶನಗೊಳ್ಳಬೇಕು.  ಚಿತ್ರಗಳಿಗೆ ಗರಿಷ್ಠ ಟಿಕೆಟ್‌ ದರ ₹ 200 ಇರಬೇಕು ಎಂದು ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಘೋಷಿಸಿದ್ದೇನೆ. ಈ ಕುರಿತು ಒಂದೆರಡು ದಿನಗಳಲ್ಲಿ ಆದೇಶ ಹೊರಡಿಸಲಾಗುವುದು’ ಎಂದೂ ಮುಖ್ಯಮಂತ್ರಿ ತಿಳಿಸಿದರು.

* ಕರ್ನಾಟಕದಲ್ಲಿ ಕನ್ನಡದಲ್ಲೇ ಮಾತನಾಡಿ. ನಾವು ಉದಾರಿಗಳಾಗಬೇಕು, ಆದರೆ, ನಮ್ಮ ಭಾಷೆ ಮರೆತುಬಿಡುವಷ್ಟು ಉದಾರಿಗಳಾಗಬಾರದು.
-ಸಿದ್ದರಾಮಯ್ಯ
ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.