ADVERTISEMENT

ಕನ್ನಡ ಮಾಧ್ಯಮ ಮಸೂದೆಗೆ ಅಸ್ತು

ಸಂವಿಧಾನ ತಿದ್ದುಪಡಿಯೊಂದೇ ಪರಿಹಾರ: ಜಗದೀಶ್‌ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2015, 20:23 IST
Last Updated 31 ಮಾರ್ಚ್ 2015, 20:23 IST

ಬೆಂಗಳೂರು: ರಾಜ್ಯದಲ್ಲಿ ಒಂದರಿಂದ ಐದನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುವ ಹಾಗೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಹತ್ತನೇ ತರಗತಿವರೆಗೆ ಪ್ರಥಮ ಇಲ್ಲವೆ ದ್ವಿತೀಯ ಭಾಷೆಯಾಗಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸುವ ಎರಡು ಮಸೂದೆಗಳನ್ನು ವಿಧಾನಸಭೆ ಮಂಗಳವಾರ ‌ಅಂಗೀಕರಿಸಿದೆ.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಂಡಿಸಿದ ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು (ಕರ್ನಾಟಕ ತಿದ್ದುಪಡಿ) ಮಸೂದೆ–2015’ ಹಾಗೂ ಕನ್ನಡ ಭಾಷಾ ಕಲಿಕೆ ಮಸೂದೆ–2015’ಗೆ  ಸದಸ್ಯರು ಪಕ್ಷಭೇದ ಮರೆತು ಒಪ್ಪಿಗೆ  ನೀಡಿದರು. ಮೊದಲ ಮಸೂದೆ ಮೂಲಕ ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು ಕಾಯ್ದೆ–2009’ರಲ್ಲಿ 29ನೇ ನಿಯಮದ ‘ಎಫ್‌’ ಉಪನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ.

‘ಶಿಕ್ಷಣ ಮಾಧ್ಯಮ ಸಾಧ್ಯವಾಗಬಹುದಾದಷ್ಟು ಮಟ್ಟಿಗೆ ಮಕ್ಕಳ ಮಾತೃಭಾಷೆಯಲ್ಲಿ ಇರಬೇಕು’ ಎಂದಿದ್ದ ಉಪನಿಯಮದಲ್ಲಿ ‘ಸಾಧ್ಯವಾಗಬಹುದಾದಷ್ಟು’

ಪ್ರಧಾನಿ ಬಳಿ ನಿಯೋಗ
‘ಮಾತೃ ಭಾಷೆಯಲ್ಲೇ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಲು ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ಮಾಡುವಂತೆ ಒತ್ತಾಯಿಸಿ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯುವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

‘ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡ ರಾಷ್ಟ್ರೀಯ ಅಭಿವೃದ್ಧಿ ಸಮಿತಿ (ಎನ್‌ಡಿಸಿ) ಸಭೆಯಲ್ಲೂ ನಾನು ಈ ವಿಷಯವನ್ನು ಪ್ರಸ್ತಾಪಿಸಲಿದ್ದೇನೆ. ಉಳಿದ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೂ ಚರ್ಚಿಸಲಿದ್ದೇನೆ’ ಎಂದು ಹೇಳಿದರು.

ಎಂಬ ಪದ ಕೈಬಿಡಲಾಗಿದೆ. ಹೀಗಾಗಿ ಮಾತೃಭಾಷೆ ಕಡ್ಡಾಯವಾಗಲಿದೆ. ರಾಜ್ಯದಲ್ಲಿನ ಎಲ್ಲಾ ಶಾಲೆಗಳಲ್ಲಿ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ (ಸಿಬಿಎಸ್‌ಸಿ ಹಾಗೂ ಐಸಿಎಸ್‌ಸಿ ಶಾಲೆಗಳನ್ನು ಹೊರತುಪಡಿಸಿ) ಎಲ್ಲಾ ವಿದ್ಯಾರ್ಥಿಗಳಿಗೆ 2015–16ನೇ ಶೈಕ್ಷಣಿಕ ವರ್ಷದಿಂದ ಹಂತಹಂತವಾಗಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಡ್ಡಾಯವಾಗಿ ಕಲಿಸಲು ಎರಡನೇ ಮಸೂದೆ ಅವಕಾಶ ಕಲ್ಪಿಸುತ್ತದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯಲ್ಲಿ ಕನ್ನಡ ಕಲಿಕೆ ಆರಂಭವಾಗಲಿದ್ದು, ಪ್ರತಿವರ್ಷ ಒಂದೊಂದು ತರಗತಿಯಂತೆ ಮುಂದಿನ ಒಂಬತ್ತು ವರ್ಷಗಳಲ್ಲಿ ಹತ್ತನೇ ತರಗತಿವರೆಗೆ ಕನ್ನಡದ ಕಡ್ಡಾಯ ಕಲಿಕೆ ಅನುಷ್ಠಾನಕ್ಕೆ ಬರಲಿದೆ. ‘ಸದನ ಅಂಗೀಕರಿಸಿದ ಎರಡೂ ಮಸೂದೆಗಳಿಗೆ ರಾಷ್ಟ್ರಪತಿಗಳ ಅಂಕಿತ ಬಿದ್ದರೆ ಈಗ ಸರ್ಕಾರದ ನಿಲುವಿಗೆ ವಿರುದ್ಧವಿರುವ 1,700ಕ್ಕೂ ಅಧಿಕ ಖಾಸಗಿ ಶಾಲೆಗಳು ಶಿಕ್ಷಣ ಮಾಧ್ಯಮದ ನಿಯಮವನ್ನು ಪಾಲನೆ ಮಾಡುವುದು ಅನಿವಾರ್ಯ ಆಗುತ್ತದೆ’ ಎಂದು ಕಿಮ್ಮನೆ ತಿಳಿಸಿದರು.

ಮಾನ್ಯತೆ ಕಷ್ಟ: ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ‘ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವೇ ಮಾತೃಭಾಷಾ ಮಾಧ್ಯಮವನ್ನು ಕಡ್ಡಾಯಗೊಳಿಸುವ ವಿರುದ್ಧ ತೀರ್ಪು ನೀಡಿರುವುದರಿಂದ ನಾವು ಸ್ವೀಕರಿಸಿದ ಮಸೂದೆಗಳಿಗೂ ಮಾನ್ಯತೆ ಸಿಗುವುದು ಕಷ್ಟ. ಇದಕ್ಕೆ ಸಂವಿಧಾನ ತಿದ್ದುಪಡಿಯೊಂದೆ ಶಾಶ್ವತ ಪರಿಹಾರ’ ಎಂದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.