ADVERTISEMENT

ಕಲಬುರ್ಗಿ ಹಂತಕರ ರೇಖಾಚಿತ್ರ ಬಿಡುಗಡೆ

ವಿವಿಧೆಡೆ ಪರಿಶೀಲನೆ, ವಿಜಯಪುರ ಜಿಲ್ಲೆಗೆ ಸಿಐಡಿ ತಂಡ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2015, 19:28 IST
Last Updated 2 ಸೆಪ್ಟೆಂಬರ್ 2015, 19:28 IST

ಧಾರವಾಡ/ವಿಜಯಪುರ: ಹಿರಿಯ ಸಂಶೋಧಕ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಎಂ. ಕಲಬುರ್ಗಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ ಇಬ್ಬರು ಆರೋಪಿಗಳ ರೇಖಾ ಚಿತ್ರಗಳನ್ನು ಹುಬ್ಬಳ್ಳಿ– ಧಾರವಾಡ ಮಹಾನಗರ ಪೊಲೀಸ್‌ ಆಯುಕ್ತರು ಬುಧವಾರ ಬಿಡುಗಡೆ ಮಾಡಿದ್ದಾರೆ.

ಹಂತಕರನ್ನು ಕಂಡಿದ್ದಾರೆ ಎನ್ನಲಾದ ಸಾಕ್ಷಿಗಳ ಹೇಳಿಕೆ ಆಧರಿಸಿ, ಇಬ್ಬರು ಆರೋಪಿಗಳ ರೇಖಾ ಚಿತ್ರಗಳನ್ನು ಹುಬ್ಬಳ್ಳಿ– ಧಾರವಾಡ ಮಹಾನಗರ ಪೊಲೀಸರು ಬಿಡುಗಡೆ ಮಾಡಿದ್ದು, ಅದರಲ್ಲಿ ಒಬ್ಬ ಕನ್ನಡಕ ಹಾಕಿದ್ದಾನೆ. ಅವರ ಸುಳಿವು ಸಿಕ್ಕಲ್ಲಿ ಧಾರವಾಡ ವಿದ್ಯಾಗಿರಿ ಪೊಲೀಸ್‌ ಠಾಣೆ (0836–2233513), ಹುಬ್ಬಳ್ಳಿ ಶಹರ ನಿಯಂತ್ರಣ ಕೊಠಡಿಗೆ (0836–2233555, 2233521) ಮಾಹಿತಿ ನೀಡುವಂತೆ ಆಯುಕ್ತರು ತಿಳಿಸಿದ್ದಾರೆ.

ಹತ್ಯೆ ನಡೆದು ನಾಲ್ಕು ದಿನಗಳಾದರೂ ಆರೋಪಿಗಳು ಪತ್ತೆಯಾಗಿಲ್ಲ. ಈ ಕುರಿತು ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಬುಧವಾರವೂ ಕಲಬುರ್ಗಿ ಅವರ ನಿವಾಸಕ್ಕೆ ತೆರಳಿ, ಹತ್ಯೆ ನಡೆದ ಸ್ಥಳದ ಮಹಜರು ಮಾಡಿದರು. ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಸಿ.ರಾಜಪ್ಪ ನೇತೃತ್ವದ ತಂಡವು ಸ್ಥಳೀಯ ವಿದ್ಯಾಗಿರಿ ಪೊಲೀಸ್‌ ಠಾಣೆ ಪೊಲೀಸರ ನೆರವಿನೊಂದಿಗೆ ಮಹಜರು ನಡೆಸಿ, ಕುಟುಂಬದವರ ಹೇಳಿಕೆ ದಾಖಲಿಸಿಕೊಂಡರು. ಕಲಬುರ್ಗಿ ಅವರ ಮನೆಯ ಪಕ್ಕದಲ್ಲಿರುವ ನಿವೇಶನದಲ್ಲಿ ಶೋಧ ಕಾರ್ಯ ನಡೆಸಿದರು. ನಂತರ ಅದರ ಪಕ್ಕದಲ್ಲಿರುವ ಹಿರಿಯ ಕವಿ ಡಾ.ಚೆನ್ನವೀರ ಕಣವಿ ಅವರ ಮನೆಗೂ ಭೇಟಿ ನೀಡಿ ಮಾಹಿತಿ ಪಡೆದರು.

ವಿಜಯಪುರ ಜಿಲ್ಲೆಗೆ ಸಿಐಡಿ ತಂಡ: ಸಿಐಡಿ ಅಧಿಕಾರಿಗಳ ತಂಡ, ಬುಧವಾರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ ಬಿ.ಕೆ, ಗುಬ್ಬೇವಾಡ, ಇಂಡಿ ತಾಲ್ಲೂಕಿನ ತಾಂಬಾ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ಯರಗಲ್ ಬಿ.ಕೆ. ಗ್ರಾಮಕ್ಕೆ ಮಧ್ಯಾಹ್ನ ಭೇಟಿ ನೀಡಿ, ಕಲಬುರ್ಗಿ ಅವರ ಸಹೋದರರ ಮನೆಗೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿತು ಎಂದು ಖಚಿತ ಮೂಲಗಳಿಂದ ‘ಪ್ರಜಾವಾಣಿ’ಗೆ ತಿಳಿದು ಬಂದಿದೆ.

ಈ ಸಂದರ್ಭದಲ್ಲಿ, ಕಲಬುರ್ಗಿ ಅವರ ಹಿರಿಯ ಸಹೋದರ ಭೋಗಪ್ಪ ಕಲಬುರ್ಗಿಯವರ ಮಗ ಗುಂಡಣ್ಣ ಕಲಬುರ್ಗಿ ಜತೆ 15 ನಿಮಿಷಕ್ಕೂ ಹೆಚ್ಚು ಹೊತ್ತು ಮಾತನಾಡಿ, ವಿವರಗಳನ್ನು ಕಲೆ ಹಾಕಿದೆ. ಯರಗಲ್ ಬಿ.ಕೆ. ಗ್ರಾಮದಲ್ಲಿ ಮಾಹಿತಿ ಸಂಗ್ರಹಿಸಿದ ಸಿಐಡಿ ತಂಡ, ಅಲ್ಲಿಂದ ಕಲಬುರ್ಗಿ ಅವರ ಹುಟ್ಟೂರು ಗುಬ್ಬೇವಾಡಕ್ಕೂ (ತಾಯಿಯ ತವರು) ಸಂಜೆ 4.30ರ ವೇಳೆಗೆ ಭೇಟಿ ನೀಡಿ ಸಂಬಂಧಿಕರಿಂದ ಪ್ರಾಥಮಿಕ ಮಾಹಿತಿ ಸಂಗ್ರಹಿಸಿತು ಎಂದು ತಿಳಿದು ಬಂದಿದೆ.

ಇಂಡಿ ತಾಲ್ಲೂಕಿನ ತಾಂಬಾ ಗ್ರಾಮಕ್ಕೂ ತಂಡ ಬುಧವಾರ ಸಂಜೆ  ಭೇಟಿ ನೀಡಿದೆ. ಕಲಬುರ್ಗಿ ಅವರ ಅಳಿಯ ಅಂಬರೀಷ ಅಳ್ಳಗುಂಡಗಿ ಅವರ ಸಹೋದರ ಸುಭಾಷ ಅಳ್ಳಗುಂಡಗಿ ನಿವಾಸಕ್ಕೆ ತೆರಳಿ 15 ನಿಮಿಷಕ್ಕೂ ಹೆಚ್ಚಿನ ಅವಧಿ ವಿಚಾರಣೆ ನಡೆಸಿ, ಕುಟುಂಬದ ಮಾಹಿತಿ ಪಡೆದು ತೆರಳಿತು ಎಂದು ಮೂಲಗಳು ತಿಳಿಸಿವೆ.

ತಾಂಬಾಕ್ಕೆ ಭೇಟಿ: ಕಲಬುರ್ಗಿ ಅಂತ್ಯಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಹುಬ್ಬಳ್ಳಿ–ಧಾರವಾಡ ಪೊಲೀಸರ ವಿಶೇಷ ತಂಡ ಜಿಲ್ಲೆಗೆ ಭೇಟಿ ನೀಡಿ ತನಿಖೆ, ವಿಚಾರಣೆ ನಡೆಸಿತ್ತು. ಸೋಮವಾರವೇ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮಕ್ಕೆ ಬಂದಿದ್ದ ವಿಶೇಷ ಪೊಲೀಸರ ತಂಡ ಮಾಹಿತಿ ಕಲೆ ಹಾಕಿತ್ತು. ಮಂಗಳವಾರವೂ ಗ್ರಾಮದಲ್ಲಿ ತನಿಖೆ ಮುಂದುವರೆಸಿತ್ತು. ಕಲಬುರ್ಗಿ ಅವರ ಮಗಳ ಗಂಡನ ಸಂಬಂಧಿಕರು, ಆಸುಪಾಸಿನವರಿಂದ ಮಾಹಿತಿ ಕ್ರೋಡೀಕರಿಸಿತ್ತು. ಗುಬ್ಬೇವಾಡ, ಯರಗಲ್ ಬಿ.ಕೆ. ಗ್ರಾಮಕ್ಕೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತ್ತು.

ಮಾಹಿತಿ ಇಲ್ಲ: ಜಿಲ್ಲೆಗೆ ವಿಶೇಷ ಪೊಲೀಸ್ ತನಿಖಾ ದಳ, ಸಿಐಡಿ ಅಧಿಕಾರಿಗಳ ತಂಡ ಭೇಟಿ ನೀಡಿ, ಕಲಬುರ್ಗಿ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಮಾಹಿತಿ ಜಿಲ್ಲಾ ಪೊಲೀಸ್ ಇಲಾಖೆ ಬಳಿ ಲಭ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರಕರಣ ಸಿಐಡಿಗೆ ವರ್ಗವಾಗಿದೆ. ತನಿಖೆಯಲ್ಲಿ ನಮ್ಮ ಪಾತ್ರವೇನಿಲ್ಲ. ಸಿಐಡಿ ಅಧಿಕಾರಿಗಳು ಸಹಾಯ ಕೋರಿದರೆ ಆಯಾ ಠಾಣಾ ವ್ಯಾಪ್ತಿಯಿಂದ ಒದಗಿಸುತ್ತೇವೆ’ ಎಂದರು.
*
ಹುಟ್ಟೂರಿನ ಆಸ್ತಿ
‘ಕಲಬುರ್ಗಿ ಕುಟುಂಬಕ್ಕೆ  ಯರಗಲ್ ಬಿ.ಕೆ. ಗ್ರಾಮದಲ್ಲಿ 46 ಎಕರೆ ಪಿತ್ರಾರ್ಜಿತ ಆಸ್ತಿ ಇದೆ. ಐವರು ಸಹೋದರರ ಪೈಕಿ ಎಂ.ಎಂ. ಕಲಬುರ್ಗಿ ಕೇವಲ 6 ಎಕರೆ ಜಮೀನು ಪಡೆದಿದ್ದರೂ ಅದನ್ನೂ ತನ್ನ ಸಹೋದರನಿಗೆ ವಹಿಸಿದ್ದ ಉದಾರಿ’ ಎಂದು ಗ್ರಾಮಸ್ಥರು ಹೇಳಿದರು. ಕಲಬುರ್ಗಿ ಅವರ ಮಗಳು ಪೂರ್ಣಿಮಾ ಅವರನ್ನು ತಾಂಬಾ ಗ್ರಾಮದ ಅಳ್ಳಗುಂಡಗಿ ಮನೆತನದ, ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಆಗಿದ್ದ ಅಂಬರೀಷ ಅಳ್ಳಗುಂಡಗಿ ಅವರ ಜತೆ ವಿವಾಹ ಮಾಡಿಕೊಡಲಾಗಿತ್ತು. ಅಂಬರೀಷ ಸಾಕಷ್ಟು ಆಸ್ತಿಯನ್ನು ಹೊಂದಿದ್ದರು. ಒಂದೂವರೆ ವರ್ಷದ ಹಿಂದೆ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.