ADVERTISEMENT

ಕಲಾಂ ‘ಜನರ ರಾಷ್ಟ್ರಪತಿ’–ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 19:30 IST
Last Updated 28 ಜುಲೈ 2015, 19:30 IST

ಮೈಸೂರು: ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರೊಬ್ಬ ‘ಜನತಾ ರಾಷ್ಟ್ರಪತಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಾಂ ಅವರು ಅವಿವಾಹಿತರಾಗಿದ್ದರೂ ಇಡೀ ದೇಶದ ಜನರನ್ನು ತಮ್ಮ ಕುಟುಂಬದವರಂತೆ, ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಣುತ್ತಿದ್ದರು. ಅತ್ಯಂತ ಸರಳ ಹಾಗೂ ಪ್ರಾಮಾಣಿಕ ವ್ಯಕ್ತಿ ಅವರಾಗಿದ್ದರು. ಮಾತ್ರವಲ್ಲ, ಬಾಬು ರಾಜೇಂದ್ರಪ್ರಸಾದ್ ಹಾಗೂ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ನಂತರ ರಾಷ್ಟ್ರಪತಿ ಹುದ್ದೆಗೆ ಮಹೋನ್ನತ ಗೌರವ ತಂದುಕೊಟ್ಟರು ಎಂದು ಶ್ಲಾಘಿಸಿದರು.

ವ್ಯಕ್ತಿತ್ವವೇ ಸ್ಫೂರ್ತಿದಾಯಕ: ಕಲಾಂ ಅವರ ವ್ಯಕ್ತಿತ್ವವೇ ಸ್ಫೂರ್ತಿದಾಯಕವಾದುದು. ಮಕ್ಕಳು ಹಾಗೂ ಯುವಜನತೆಯ ಮೇಲೆ ಅಪಾರವಾದ ಗೌರವ ಹಾಗೂ ನಂಬಿಕೆ ಅವರಿಗಿತ್ತು. ಎಲ್ಲಿ ಹೋದರೂ ಅವರು ಮಕ್ಕಳೊಂದಿಗೆ, ಯುವ ಜನತೆಯೊಂದಿಗೆ ಸಂವಾದ ನಡೆಸುತ್ತಿದ್ದರು ಎಂದು ಸ್ಮರಿಸಿದರು.

ಕೊನೆವರೆಗೂ ಕಾರ್ಯನಿರತ: ದೇಶದ ಮೇರು ಪದವಿಯಾದ ರಾಷ್ಟ್ರಪತಿಯಾದ ನಂತರವೂ ಅವರು ಕ್ರಿಯಾಶೀಲ ರಾಗಿದ್ದರು. ಅವರು ಉಪನ್ಯಾಸ ನೀಡುತ್ತಲೇ ನಿಧನ ಹೊಂದಿದರು. ದೇಶ ಕಂಡ ಅಪರೂಪದ ಮೇಧಾವಿ ವಿಜ್ಞಾನಿ ಅವರು ಎಂದು ಸಿದ್ದರಾಮಯ್ಯ ಬಣ್ಣಿಸಿದರು.

ಕಲಾಂ ಇಚ್ಛೆಯಂತೆ ರಜೆ ನೀಡಿಲ್ಲ
ಕಲಾಂ ಅವರು ಒಂದೆಡೆ ‘ನಾನು ನಿಧನ ಹೊಂದಿದರೆ ರಜೆ ಕೊಡಬೇಡಿ’ ಎಂದು ಹೇಳಿಕೊಂಡಿದ್ದರು. ಹಾಗಾಗಿ, ಅವರ ಆಸೆಯಂತೆ ರಾಜ್ಯಸರ್ಕಾರ ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ ಎಂದು  ಸಿದ್ದರಾಮಯ್ಯ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.