ADVERTISEMENT

ಕಲ್ಲಿದ್ದಲು ಕೊರತೆ: 2 ಘಟಕಗಳಲ್ಲಿ ಉತ್ಪಾದನೆ ಸ್ಥಗಿತ

ರಾಜ್ಯದಲ್ಲಿ ಮತ್ತೆ ಉಲ್ಬಣಿಸಿದ ವಿದ್ಯುತ್‌ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 19:30 IST
Last Updated 25 ನವೆಂಬರ್ 2014, 19:30 IST

ಬೆಂಗಳೂರು: ಕಲ್ಲಿದ್ದಲು ಕೊರತೆಯಿಂದಾಗಿ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಬಿಟಿಪಿಎಸ್‌) ಮತ್ತು ಉಡುಪಿ ಪವರ್‌ ಕಂಪೆನಿ ಲಿಮಿಟೆಡ್‌ನ (ಯುಪಿಸಿಎಲ್‌) ತಲಾ ಒಂದು ಘಟಕಗಳಲ್ಲಿ ವಿದ್ಯುತ್‌ ಉತ್ಪಾದನೆ  ಸ್ಥಗಿತಗೊಳಿ­ಸಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ವಿದ್ಯುತ್‌ ಸಮಸ್ಯೆ ಮತ್ತೆ ಉಲ್ಬಣಿಸಿದೆ.

ತಾಂತ್ರಿಕ ಕಾರಣಗಳಿಂದಾಗಿ ರಾಯ­ಚೂರು ಶಾಖೋತ್ಪನ್ನ ಸ್ಥಾವರದಲ್ಲಿ (ಆರ್‌ಟಿಪಿಎಸ್‌) 210 ಮೆಗಾವಾಟ್‌ ಸಾಮರ್ಥ್ಯದ 7ನೇ ಘಟಕ ಸ್ಥಗಿತ­ವಾಗಿದೆ. ಬಿಟಿಪಿಎಸ್‌, ಯುಪಿಸಿಎಲ್‌ ಮತ್ತು ಆರ್‌ಟಿಪಿಎಸ್‌ನ ಒಂದು ಘಟಕದಿಂದ ಒಟ್ಟು 1310 ಮೆಗಾ­ವಾಟ್‌ ವಿದ್ಯುತ್‌ ಖೋತಾ ಆಗಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.

ಇದಲ್ಲದೆ ಕೇಂದ್ರದಿಂದಲೂ ರಾಜ್ಯಕ್ಕೆ ಬರ ಬೇಕಾದ ವಿದ್ಯುತ್‌ ಪೂರ್ಣ ಪ್ರಮಾ­ಣದಲ್ಲಿ ಪೂರೈಕೆ ಆಗುತ್ತಿಲ್ಲ. ಒಟ್ಟು 1,919 ಮೆಗಾವಾಟ್‌ ಹಂಚಿಕೆ­ಯಾಗಿದ್ದು, 1100ರಿಂದ 1200 ಮೆಗಾ ವಾಟ್‌ ಮಾತ್ರ ಪೂರೈಕೆ­ಯಾಗುತ್ತಿದೆ. ಸಮಸ್ಯೆ ಉಲ್ಬಣ ವಾಗಲು ಈ ಅಂಶವೂ ಕಾರಣವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಬೇಡಿಕೆ ಮತ್ತು ಪೂರೈಕೆ ನಡುವೆ 1500ರಿಂದ 1700 ಮೆಗಾವಾಟ್‌ ಅಂತರವಿದೆ. ಕೊರತೆ ನೀಗಿಸಲು ವಿದ್ಯುತ್‌ ಕಡಿತ ಮಾಡುವುದು ಅನಿ­ವಾರ್ಯ ಎಂಬುದು ಅಧಿಕಾರಿಗಳ ಸಮರ್ಥನೆ.

ಆರ್‌ಟಿಪಿಎಸ್‌ನ ಎಂಟು ಘಟಕಗಳಿಗೆ ನಿತ್ಯ ಎಂಟು ರೇಕ್‌ ಕಲ್ಲಿದ್ದಲಿನ ಅವಶ್ಯಕತೆ ಇದೆ. ಆದರೆ, 5–6 ರೇಕ್‌ ಮಾತ್ರ ಪೂರೈಕೆ ಆಗುತ್ತಿದೆ. ಅದೇ ರೀತಿ ಬಿಟಿಪಿಎಸ್‌ಗೆ 4ರಿಂದ 5 ರೇಕ್‌ ಕಲ್ಲಿ­ದ್ದಲು ಬೇಕಾಗುತ್ತದೆ. ಸದ್ಯ 2ರಿಂದ 3 ರೇಕ್‌ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಕಲ್ಲಿದ್ದಲು ಕೊರತೆ ಇರು ವುದು ನಿಜ ಎಂದು ಕರ್ನಾಟಕ ವಿದ್ಯುತ್‌ ನಿಗಮದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾ ವಾಣಿ’ಗೆ ತಿಳಿಸಿದರು.

ಕಲ್ಲಿದ್ದಲು ನಿಕ್ಷೇಪಗಳಲ್ಲಿ ಗಣಿಗಾರಿಕೆ ನಡೆಯು ವುದು ಕಡಿಮೆಯಾಗಿದೆ. ಅಲ್ಲದೆ ‘ಹುದ್‌ ಹುದ್‌’ ಚಂಡ­ಮಾರುತ, ಪ್ರವಾಹ ಇತ್ಯಾದಿ ಕಾರಣ­ಗಳಿಂದಾಗಿ ತೇವಾಂಶವುಳ್ಳ ಕಲ್ಲಿದ್ದಲು ಲಭ್ಯವಾ ಗುತ್ತಿದೆ. ಅದನ್ನು ಬಳಸಲು ಆಗುವುದಿಲ್ಲ. ದೇಶದ ಬಹುತೇಕ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ ಈ ಸಮಸ್ಯೆ ಇದೆ ಎಂದು ವಿವರಿಸಿದರು.

ಮುಖ್ಯಾಂಶಗಳು

*1310 ಮೆಗಾವಾಟ್‌ ವಿದ್ಯುತ್‌ ಖೋತಾ
*ಕೊರತೆ ನೀಗಿಸಲು ಅನಿಯಮಿತ ವಿದ್ಯುತ್‌ ಕಡಿತ
*ಗ್ರಾಹಕರಿಗೆ ತಪ್ಪದ ಕಿರಿಕಿರಿ

ADVERTISEMENT

ನೀರು ಸಂಗ್ರಹ: ಪ್ರಮುಖ ಜಲವಿದ್ಯುತ್‌ ಉತ್ಪಾ ದನಾ ಜಲಾಶಯಗಳಾದ ಸೂಪಾ, ಮಾಣಿ ಮತ್ತು ಲಿಂಗನಮಕ್ಕಿಯಲ್ಲಿ ಕಳೆದ ವರ್ಷ ಇದೇ ಅವಧಿ ಯಲ್ಲಿ 7,676 ದಶಲಕ್ಷ ವಿದ್ಯುತ್‌ ಉತ್ಪಾ ದನೆ ಮಾಡುವಷ್ಟು ನೀರಿನ ಸಂಗ್ರಹವಿತ್ತು. ಆದರೆ, ಈ ವರ್ಷ 6,850 ದಶಲಕ್ಷ ವಿದ್ಯುತ್‌ ಉತ್ಪಾದನೆ ಮಾಡುವಷ್ಟು ನೀರಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ 826 ದಶಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದನೆ ಕಡಿಮೆ ಯಾಗ ಲಿದೆ. ನೀರಿನ ಪ್ರಮಾಣ ಕಡಿಮೆ ಇರುವು ದರಿಂದ ಈಗ ಜಲವಿದ್ಯುತ್‌ ಉತ್ಪಾದನೆಯನ್ನು ಜಾಸ್ತಿ ಮಾಡಲು ಸಾಧ್ಯವಿಲ್ಲ. ಆ ರೀತಿ ಮಾಡಿ­ದರೆ ಮುಂದಿನ ದಿನಗಳಲ್ಲಿ ಕಷ್ಟವಾಗ­ಲಿದೆ ಎನ್ನುತ್ತಾರೆ ಅಧಿಕಾರಿಗಳು.

ತಪ್ಪದ ಕಿರಿಕಿರಿ: ಅಧಿಕೃತವಾಗಿ ಲೋಡ್‌ಶೆಡ್ಡಿಂಗ್‌ ಮಾಡುತ್ತಿಲ್ಲ. ಆದರೆ, ಅನಧಿಕೃತವಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ಪದೇ ಪದೇ ವಿದ್ಯುತ್‌ ಕಡಿತ ಮಾಡಲಾ­ಗುತ್ತಿದೆ. ನಿರಂತರ ಜ್ಯೋತಿ ಯೋಜನೆ ಜಾರಿಯಲ್ಲಿರುವ ಪ್ರದೇಶಗಳಲ್ಲೂ ವಿದ್ಯುತ್‌ ಸಮಸ್ಯೆ ಇದೆ. ಸಿಂಗಲ್‌ ಫೇಸ್‌ ವಿದ್ಯುತ್‌ ಸಹ 24 ಗಂಟೆ ಪೂರೈಕೆ ಆಗುತ್ತಿಲ್ಲ. ಐದೂ ‘ಎಸ್ಕಾಂ’ಗಳು ಅನಿಯಮಿತವಾಗಿ ವಿದ್ಯುತ್‌ ಕಡಿತ ಮಾಡುವು ದರಿಂದ ಗ್ರಾಹಕರು ನಿತ್ಯ ಕಿರಿಕಿರಿ ಅನುಭವಿ ಸುತ್ತಿದ್ದಾರೆ.

ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ ಏಳು ಗಂಟೆ ಕಾಲ 3 ಫೇಸ್‌ ವಿದ್ಯುತ್‌ ನೀಡುವುದಾಗಿ ಇಲಾಖೆ ಪ್ರಕಟಿಸಿದೆ. ಆದರೆ, ವೇಳಾಪಟ್ಟಿ ಪ್ರಕಾರ ವಿದ್ಯುತ್‌ ನೀಡುತ್ತಿಲ್ಲ. 3–4 ಗಂಟೆ ಕಾಲ ಮಾತ್ರ ವಿದ್ಯುತ್‌ ನೀಡುತ್ತಾರೆ ಎಂಬುದು ರೈತರ ಆರೋಪ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ರೈತರು ಹೆಚ್ಚಾಗಿ ತರಕಾರಿ, ರೇಷ್ಮೆ ಬೆಳೆಯುತ್ತಾರೆ. ತರಕಾರಿ ಬೆಳೆಗಳಿಗೆ ಮೂರು ದಿನಕ್ಕೊಮ್ಮೆ ನೀರು ಹರಿಸ­ಬೇಕು. ದಿನಕ್ಕೆ ಮೂರು ಗಂಟೆ ವಿದ್ಯುತ್‌ ನೀಡಿದರೆ ನೀರು ಹರಿಸುವುದು ಹೇಗೆ ಎಂಬುದು ನರಸಾಪುರ ಗ್ರಾಮದ ಜಗದೀಶ್‌ ಅವರ ಪ್ರಶ್ನೆ.

ಮೂರು ದಿನಗಳ ಹಿಂದೆ ಕೋಲಾರಕ್ಕೆ ಭೇಟಿ ನೀಡಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್‌, ಜಿಲ್ಲೆಯಲ್ಲಿ ಶೇ 40ರಷ್ಟು ವಿದ್ಯುತ್‌ ಕಡಿತ ಮಾಡು ತ್ತಿರುವುದು ಸರಿಯಲ್ಲ. ಬೇರೆ ಕಡೆಯ ಹಾಗೆ ಇಲ್ಲೂ ಶೇ 10ರಷ್ಟು ಪ್ರಮಾಣದಲ್ಲೇ ಕಡಿತ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.

ಆದರೆ, ಸಚಿವರ ಸೂಚನೆ ಪಾಲನೆ ಆಗುತ್ತಿಲ್ಲ. ಸೋಮವಾರ, ಮಂಗಳ­ವಾರವೂ ಅನಿಯಮಿ ತವಾಗಿ ವಿದ್ಯುತ್‌ ಕಡಿತ ಮಾಡುವುದು ಮುಂದು ವರಿದಿದೆ. ಹೀಗಾದರೆ ಕುಡಿಯುವ ನೀರು ಸರಬ­ರಾಜಿಗೂ ತೊಂದರೆ ಆಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿ­ಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.