ADVERTISEMENT

ಕಳಸಾ–ಬಂಡೂರಿ: ಪ್ರತಿಭಟನೆ ತೀವ್ರ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2015, 19:40 IST
Last Updated 12 ಆಗಸ್ಟ್ 2015, 19:40 IST

ಹುಬ್ಬಳ್ಳಿ/ಧಾರವಾಡ/ಗದಗ: ಕಳಸಾ –ಬಂಡೂರಿ ನಾಲಾ ಯೋಜನೆ ಜಾರಿಗೆ ಆಗ್ರಹಿಸಿ ನರಗುಂದ ರೈತ ಸೇನೆ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿ ಬುಧವಾರವೂ ಧಾರವಾಡ ಹಾಗೂ ಗದಗ ಜಿಲ್ಲೆಗಳ ವಿವಿಧೆಡೆ ಪ್ರತಿಭಟನೆ ನಡೆಯಿತು.

ಹುಬ್ಬಳ್ಳಿ–ಧಾರವಾಡ, ಗದಗ ನಗರ, ನವಲಗುಂದ, ಕಲಘಟಗಿ, ನರಗುಂದ, ರೋಣ ಪಟ್ಟಣಗಳ ಜೊತೆಗೆ ಸುತ್ತಲಿನ ಗ್ರಾಮೀಣ ಪ್ರದೇಶಗಳಿಗೂ ಪ್ರತಿಭಟನೆಯ ಕಾವು ಹರಡಿತ್ತು. ಗದಗ, ರೋಣ, ನರಗುಂದದಲ್ಲಿ ವಕೀಲರು ಕಲಾಪದಿಂದ ದೂರ ಉಳಿದು ಬೆಂಬಲ ಸೂಚಿಸಿದರು.

ಮೊರಬ, ಶಿರಕೋಳ, ಶಿರೂರು ಹಾಗೂ ಆಯಟ್ಟಿ ಸೇರಿದಂತೆ ಒಂಬತ್ತು ಗ್ರಾಮಗಳಿಂದ ಬಂದಿದ್ದ ರೈತರು ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಜಲಮಂಡಳಿಯ ನೀರು ಶುದ್ಧೀಕರಣ ಘಟಕಕ್ಕೆ ಮುತ್ತಿಗೆ ಹಾಕಿ ಹುಬ್ಬಳ್ಳಿ, ಧಾರವಾಡಕ್ಕೆ ಕುಡಿಯುವ ನೀರಿನ ಪೂರೈಕೆಯನ್ನು ಮೂರು ತಾಸು ಬಂದ್‌ ಮಾಡಿಸಿದರು.

ಹುಬ್ಬಳ್ಳಿಯಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸಭೆ ನಡೆಸಿ, ಮುಂದಿನ ಹೋರಾಟದ ರೂಪ–ರೇಷೆಯ ಬಗ್ಗೆ ಚರ್ಚಿಸಿದರು. ಕಲಘಟಗಿಯಲ್ಲಿ ರೈತ ಸಂಘ–ಹಸಿರುಸೇನೆ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.