ADVERTISEMENT

ಕವಿತಾ ಸಂಕಲನ ಮಾರಾಟಕ್ಕೆ ಎಚ್‌ಎಸ್‌ವಿ ತಂತ್ರ!

​ಪ್ರಜಾವಾಣಿ ವಾರ್ತೆ
Published 18 ಜನವರಿ 2015, 19:30 IST
Last Updated 18 ಜನವರಿ 2015, 19:30 IST
ಸಾಹಿತ್ಯ ಸಂಭ್ರಮದಲ್ಲಿ ಧಾರವಾಡದ ಮನೋಹರ ಗ್ರಂಥ ಮಾಲಾ ಪ್ರಕಟಿತ ಪುಸ್ತಕ ಬಿಡುಗಡೆ ಮಾಡುತ್ತಿರುವ ಎಚ್‌.ಎಸ್‌.ವೆಂಕಟೇಶಮೂರ್ತಿ (ಮಧ್ಯದಲ್ಲಿರುವವರು). ಚಿತ್ರದಲ್ಲಿ ಗಿರಡ್ಡಿ ಗೋವಿಂದರಾಜ, ಸಿ.ಎನ್‌.ರಾಮಚಂದ್ರನ್‌, ಟಿ.ಪಿ.ಅಶೋಕ ಹಾಗೂ ರಮಾಕಾಂತ ಜೋಶಿ ಇದ್ದಾರೆ
ಸಾಹಿತ್ಯ ಸಂಭ್ರಮದಲ್ಲಿ ಧಾರವಾಡದ ಮನೋಹರ ಗ್ರಂಥ ಮಾಲಾ ಪ್ರಕಟಿತ ಪುಸ್ತಕ ಬಿಡುಗಡೆ ಮಾಡುತ್ತಿರುವ ಎಚ್‌.ಎಸ್‌.ವೆಂಕಟೇಶಮೂರ್ತಿ (ಮಧ್ಯದಲ್ಲಿರುವವರು). ಚಿತ್ರದಲ್ಲಿ ಗಿರಡ್ಡಿ ಗೋವಿಂದರಾಜ, ಸಿ.ಎನ್‌.ರಾಮಚಂದ್ರನ್‌, ಟಿ.ಪಿ.ಅಶೋಕ ಹಾಗೂ ರಮಾಕಾಂತ ಜೋಶಿ ಇದ್ದಾರೆ   

ಧಾರವಾಡ: ‘ನನ್ನ ಅನೇಕ ಪುಸ್ತಕಗಳು ಬಹಳ ಬೇಗ ಖರ್ಚಾಗುತ್ತವೆ. ಇದಕ್ಕೆ ನಾನೊಂದು ತಂತ್ರ ಮಾಡಿದ್ದೇನೆ.  ಚಂಪಾ, ಪಟ್ಟಣಶೆಟ್ಟಿ, ಕಣವಿ ಎಲ್ಲಾ ಸಿಕ್ಕಾಗ ಅವರಿಗೆ ನನ್ನ ಪುಸ್ತಕದ ಪ್ರತಿ ಕೊಡುತ್ತೇನೆ. ಹಾಗೇ ಅವರೂ  ಬಹಳ ಪ್ರೀತಿಯಿಂದ ‘ಮುಯ್ಯಿಗೆ ಮುಯ್ಯಿ ತೀರಿಸೋ ರಂಗ’ ಅನ್ನೋ ಹಾಗೆ ಅವರ ಪುಸ್ತಕ ಕೊಡುತ್ತಾರೆ. ಇದೊಂದು ಅದ್ಭುತ ಪುಸ್ತಕ ವಿತರಣಾ ವ್ಯವಸ್ಥೆ’ ಎಂದು ಕವಿ ಎಚ್‌.ಎಸ್‌ ವೆಂಕಟೇಶ­ಮೂರ್ತಿ ಹೇಳಿದಾಗ ಸಭೆಯಲ್ಲಿ ನಗು ಹೊಮ್ಮಿತು.

ಈ ಪ್ರಸಂಗಕ್ಕೆ ಕಾರಣವಾಗಿದ್ದು, ‘ಸಾಹಿತ್ಯ ಸಂಭ್ರಮ’ ದ ಮೂರನೇ ದಿನದ ಪುಸ್ತಕ ಬಿಡುಗಡೆ ಕಾರ್ಯಕ್ರಮ. ‘ಕವಿತೆಯಿಂದ ಹಣ ಮಾಡುವುದು ಸಾಧ್ಯವಿಲ್ಲ. ಅದನ್ನು ಕೊಳ್ಳಲು ಅಂಗಡಿ­ಯವರು ಸಿದ್ಧರಿರು­ವುದಿಲ್ಲ. ಹೀಗಾಗಿ ನಾನು ಸೇರಿದಂತೆ ನನ್ನಂತಹ ಅನೇಕ ಕವಿಗಳು ಉಪಾಯ ಕಂಡು­ಕೊಂಡಿ­ದ್ದೇವೆ. ನಮ್ಮ ಕವಿತೆಯನ್ನು ನಾವೇ ಹೇಗೆ ಬರೆಯುತ್ತೇವೆಯೋ ಹಾಗೆ ಪುಸ್ತಕ­ವನ್ನು ನಾವೇ ಮಾಡಬೇಕು. ಅದರ ಮಾರಾಟವನ್ನೂ ನಾವೇ ಮಾಡ­ಬೇಕು. ಇದರಿಂದ ಮಧ್ಯವರ್ತಿ­ಗಳ ಅವಶ್ಯಕತೆ ಇಲ್ಲದೆ ಕನ್ನಡ ಕಾವ್ಯ ವಿತರಣೆ ಸುಲಭವಾಗುತ್ತಿದೆ’ ಎಂದರು.

ಕವಿತೆಗಳನ್ನು ಓದುಗರ ಬಳಿ ತಲುಪಿಸುವುದು ಹೇಗೆ ಎಂಬುದನ್ನು ವಿವರಿಸಿದ ಅವರು, ಕವಿಗಳು ಗೋಷ್ಠಿ­ಯಲ್ಲಿ ಭಾಗವಹಿಸುವಾಗ ಪುಸ್ತಕದ ಪ್ರತಿಯನ್ನು ಯಾವ ಸಂಕೋಚವೂ ಇಲ್ಲದೆ ಬಗಲಲ್ಲಿ ಇಟ್ಟುಕೊಂಡು ಹೋದರೆ ವಾಪಸು ಬರುವಾಗ ಹೆಗಲ­ಭಾರ ಸ್ವಲ್ಪವಾದರೂ ಕಡಿಮೆಯಾ­ಗುತ್ತದೆ. ಯಾವ ಪ್ರಕಾಶಕರೂ ಕವಿತೆಯನ್ನು ಪ್ರಕಟಿಸಲು ಒಪ್ಪದಿದ್ದರೂ ಕವಿಗಳೇ ಕವಿಗಳಿಗೆ ಆಸರೆಯಾಗಬೇಕು. ಪತ್ರಗಳ ಮೂಲಕ ಓದುಗರು ಕವಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

‘ನನಗೆ ಎರಡು ರೀತಿಯ ಜನರನ್ನು ಕಂಡರೆ ಆಗುವುದಿಲ್ಲ. ಒಂದು ಬಹಳ ವೇಗವಾಗಿ ಬರೆಯುವ ಲೇಖಕರು, ಮತ್ತೊಂದು ಬಾಯಿಪಾಠ ಮಾಡುವ ಜನ. ಯಾಕೆಂದರೆ ಎಂದೂ ನಾನು ಇವೆರಡನ್ನೂ ಸಾಧಿಸಲೇ ಇಲ್ಲ. ನನಗೆ ಲೇಖನ ಬರೆಯಲು ಹದಿನೆಂಟು ದಿನ ಅವಧಿ ಕೊಟ್ಟರೆ ನಾನು ಪ್ರಾರಂಭಿ­ಸುವುದೇ ಹದಿನೇಳನೇ ದಿನ’ ಎಂದು ಗಿರಡ್ಡಿ ಚಟಾಕಿ ಹಾರಿಸಿದರು. ಟಿ.ಪಿ. ಅಶೋಕ ಅವರ ‘ಕಥನ ಕಾರಣ’ ಮತ್ತು ಸಿ.ಎನ್‌. ರಾಮ­ಚಂದ್ರನ್‌ ಅವರ ‘ಭಾಷಾಂತರ: ಸೈದ್ಧಾಂತಿಕ ಹಾಗೂ ಅನ್ವಯಿಕ ನೆಲೆಗಳು’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಮನೋಹರ ಗ್ರಂಥಮಾಲೆಯ ರಮಾಕಾಂತ ಜೋಶಿ ಇದ್ದರು.

ಪುಸ್ತಕ ಮೂಸಿದ ಪುತಿನ!
ಒಮ್ಮೆ ಪುತಿನ ಅವರ ಕಾವ್ಯ ನಾಟಕ­ಗಳ ಪುಸ್ತಕ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿತ್ತು. ಅವರ ಆರೋಗ್ಯ ವಿಷಮಿಸಿದ್ದರಿಂದ ಕಿವಿ ಕೇಳಿಸುತ್ತಿರಲಿಲ್ಲ. ಕಣ್ಣು ಕಾಣು­ತ್ತಿ­ರಲಿಲ್ಲ. ಹಾಗಾಗಿ ಕಾರ್ಯ­ಕ್ರಮಕ್ಕೆ ಕರೆಯಬಾರದು ಎಂದು ಮೊದಲೇ ತೀರ್ಮಾನಿಸಲಾಗಿತ್ತು. ಆದರೆ ಇನ್ನೇನು ಕಾರ್ಯಕ್ರಮ ಆರಂಭವಾಗಬೇಕು ಎನ್ನುವಾಗ ಒಮ್ಮೆಲೆ ಬೆಳಕು ಬರುವ ಹಾಗೆ ಪುತಿನ ಅವರು ಪ್ರವೇಶ ಮಾಡಿ­ದರಂತೆ.

ಆಗ ಪುಸ್ತಕ­ವನ್ನು ಅವರ ಬಳಿಗೆ ತೆಗೆದು­ಕೊಂಡು ಹೋದಾಗ ‘ಏನಿದು’ ಎಂದು ಕೇಳಿದ­ರಂತೆ. ‘ನಿಮ್ಮ ಪುಸ್ತಕ’ ಎಂದು ಉತ್ತರಿ­ಸಿದ್ದಕ್ಕೆ, ಪುಸ್ತಕವನ್ನು ತೆಗೆದು­ಕೊಂಡು ಗಟ್ಟಿಯಾಗಿ ಉಸಿರು ಎಳೆದು­ಕೊಂಡು ‘ಆಹಾ. ಚೆನ್ನಾ­ಗಿದೆ’ ಎಂದು ಹೇಳಿ­ದ್ದನ್ನು ವೆಂಕ­ಟೇಶಮೂರ್ತಿ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.