ADVERTISEMENT

ಕಾಂಗ್ರೆಸ್‌ ಜತೆ ಮೈತ್ರಿ: ಎಚ್‌ಡಿಕೆ ಸಿಡಿಮಿಡಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2015, 19:34 IST
Last Updated 24 ನವೆಂಬರ್ 2015, 19:34 IST

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್‌ನ ಒಂದು ಗುಂಪು ಮುಂದಾಗಿರುವುದು ಆ ಪಕ್ಷದಲ್ಲಿ ಬಿರುಗಾಳಿ ಎಬ್ಬಿಸಿದೆ.

‘ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಆದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವೆ’ ಎಂದು ಎಚ್.ಡಿ. ಕುಮಾರಸ್ವಾಮಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ಸ್ವತಂತ್ರವಾಗಿ ಸ್ಪರ್ಧಿಸಿದರೆ ಐದರಿಂದ ಆರು ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬಹುದು. ಹೀಗಿರುವಾಗ ಕಾಂಗ್ರೆಸ್‌ ಜೊತೆ ಹೊಂದಾಣಿಕೆಯ ಅವಶ್ಯಕತೆ ಏನಿದೆ? ಅಲ್ಲದೆ, ಸದನದಲ್ಲಿ ಕಾಂಗ್ರೆಸ್‌ ವಿರುದ್ಧ ಹೋರಾಟ ನಡೆಸಿ ಈಗ ಅದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡರೆ ಜನರೆದುರು ಮುಖ ತೋರಿಸುವುದು ಹೇಗೆ ಎಂಬ ಪ್ರಶ್ನೆಯನ್ನೂ ಕುಮಾರಸ್ವಾಮಿ ತಮ್ಮ ಆಪ್ತರ ಮುಂದಿಟ್ಟಿದ್ದಾರೆ ಎಂದು ಗೊತ್ತಾಗಿದೆ.

ಜೆಡಿಎಸ್‌ ಮುಖಂಡ, ಶಾಸಕ ಜಮೀರ್‌ ಅಹಮದ್ ಖಾನ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನು ಬೆಂಗಳೂರಿನಲ್ಲಿ ಸೋಮವಾರ ಭೇಟಿ ಮಾಡಿ ಮೈತ್ರಿ ಕುರಿತು ಚರ್ಚಿಸಿದ್ದರು. ಈ ಭೇಟಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರ ಸಮ್ಮತಿಯೂ ಇತ್ತು ಎನ್ನಲಾಗಿದೆ.

ಬಿಬಿಎಂಪಿಯಲ್ಲಿ ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲಿ ಕೂಡ ಜಮೀರ್‌ ಅವರೇ ಮುಂದಾಗಿ ಕಾಂಗ್ರೆಸ್‌ ಮುಖಂಡರ ಜೊತೆ ಮಾತುಕತೆ ನಡೆಸಿದ್ದರು. ‘ಮೈತ್ರಿ ಏರ್ಪಟ್ಟರೆ ರಾಜೀನಾಮೆ ನೀಡುವ ನಿರ್ಧಾರವನ್ನು ದೇವೇಗೌಡರಿಗೆ ಖುದ್ದಾಗಿ ತಿಳಿಸಲೂ ನಾನು ಸಿದ್ಧ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ.

ಜಮೀರ್‌ ಮತ್ತು ಶಾಸಕ ಎನ್‌. ಚೆಲುವರಾಯಸ್ವಾಮಿ ಅವರನ್ನು ಕುಮಾರಸ್ವಾಮಿ ಈ ಹಿಂದೆ ತುಸು ದೂರವಿಟ್ಟಿದ್ದರು. ಆದರೆ ಈಗ ಅವರೇ ಚುನಾವಣಾ ಮೈತ್ರಿಯಂತಹ ಪ್ರಮುಖ ವಿಚಾರಗಳಲ್ಲಿ ಮುಂದಾಳುಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಬೇಸರ ಕುಮಾರಸ್ವಾಮಿ ಅವರಲ್ಲಿದೆ ಎನ್ನಲಾಗಿದೆ.

ಎಂಟು ಸ್ಥಾನಕ್ಕೆ ಬೇಡಿಕೆ?: ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಎಂಟು ಸ್ಥಾನಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಇರಾದೆ ಜೆಡಿಎಸ್‌ಗೆ ಇದೆ ಎನ್ನಲಾಗಿದೆ.
*
ಮೈತ್ರಿ ಇಲ್ಲ: ಪರಮೇಶ್ವರ್
ಬೆಂಗಳೂರು:
ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಸ್ತಾಪ ಕಾಂಗ್ರೆಸ್‌ ಮುಂದೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿದರು. ‘ನನಗೆ ತಿಳಿದಿರುವಂತೆ ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಸ್ತಾಪ ಇಲ್ಲ. ಊಹೆಗಳಿಗೆ ನಾನು ಪ್ರತಿಕ್ರಿಯೆ ನೀಡಲಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.