ADVERTISEMENT

ಕಾಂಗ್ರೆಸ್‌ ಬಳಿಕ ಬಿಜೆಪಿ ಸರದಿ: ಹಣ ನೀಡಿ ವಿವಾದ ಎಳೆದುಕೊಂಡ ಯಡಿಯೂರಪ್ಪ

ಏಜೆನ್ಸೀಸ್
Published 8 ಏಪ್ರಿಲ್ 2017, 14:50 IST
Last Updated 8 ಏಪ್ರಿಲ್ 2017, 14:50 IST
ಕಾಂಗ್ರೆಸ್‌ ಬಳಿಕ ಬಿಜೆಪಿ ಸರದಿ: ಹಣ ನೀಡಿ ವಿವಾದ ಎಳೆದುಕೊಂಡ ಯಡಿಯೂರಪ್ಪ
ಕಾಂಗ್ರೆಸ್‌ ಬಳಿಕ ಬಿಜೆಪಿ ಸರದಿ: ಹಣ ನೀಡಿ ವಿವಾದ ಎಳೆದುಕೊಂಡ ಯಡಿಯೂರಪ್ಪ   

ಮೈಸೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮಹಿಳೆಯೊಬ್ಬರಿಗೆ ಹಣ ನೀಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದ್ದು ತೀವ್ರ ವಿವಾದಕ್ಕೀಡಾಗಿದೆ.

ಗುಂಡ್ಲುಪೇಟೆಯ ಅಣ್ಣೂರುಕೇರಿ ಗ್ರಾಮದಲ್ಲಿ ಕೆಲದಿನಗಳ ಹಿಂದಷ್ಟೇ ಸಾವಿಗೀಡಾಗಿದ್ದ ರೈತ ಚಿಕ್ಕಶೆಟ್ಟಿ ಅವರ ಪತ್ನಿ ಸಾವಿತ್ರಿ ಅವರಿಗೆ ₹1 ಲಕ್ಷದ ಚೆಕ್‌ ವಿತರಿಸುತ್ತಿರುವುದು ಸೆರೆಯಾಗಿದೆ. ಯಡಿಯೂರಪ್ಪ ಅವರ ಜತೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಪಕ್ಷದ ಬೆಂಬಲಿಗರೂ ಇದ್ದಾರೆ. ಸದ್ಯ ಈ ವಿಡಿಯೊ ಸಾಕಷ್ಟು ವೈರಲ್‌ ಆಗಿದ್ದು ವಿವಾದಕ್ಕೆ ಕಾರಣವಾಗಿದೆ.

ಈ ಸಂಬಂಧ ಕಾಂಗ್ರೆಸ್‌ ನಾಯಕ ಎಚ್‌.ಎ.ವೆಂಕಟೇಶ್‌ ಅವರು ಯಡಿಯೂರಪ್ಪ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ADVERTISEMENT

‘ರೈತರ ಬಗ್ಗೆ ಕಾಳಜಿ ಹೊಂದಿರುವರಂತೆ ನಟಿಸಿ ರೈತರ ಮತಗಳನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಚುನಾವಣಾ ನೀತಿಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಹಾಗೂ ಕಾನೂನಿನ ಅರಿವಿರುವ ಯಡಿಯುರಪ್ಪನವರ ವಿರುದ್ಧ ಕ್ರಮ ಕೈಗೊಂಡು ಅವರ ಲೊಕಸಭಾ ಸದಸ್ಯತ್ವವನ್ನು ರದ್ದು ಮಾಡಬೇಕೆಂದು ಆಗ್ರಹಿಸಿದ್ದಾರೆ.

ಕೆಲದಿನಗಳ ಹಿಂದಷ್ಟೇ ಕಾಂಗ್ರೆಸ್‌ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಹಣ ನೀಡುತ್ತಿದ್ದಾರೆ ಎಂದು ಪ್ರತಿಭಟಿಸಿ ದೂರು ನೀಡಿದ್ದ ಬಿಜೆಪಿಗೆ ಸ್ವತಃ ಮುಖಭಂಗವಾದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.