ADVERTISEMENT

ಕಾಂಗ್ರೆಸ್‌ ವಿರುದ್ಧ ರಮ್ಯಾ ತಾಯಿ ರಂಜಿತಾ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 11:41 IST
Last Updated 20 ಮಾರ್ಚ್ 2018, 11:41 IST
ರಮ್ಯಾ, ರಂಜಿತಾ
ರಮ್ಯಾ, ರಂಜಿತಾ   

ಮಂಡ್ಯ: ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರ ತಾಯಿ ರಂಜಿತಾ ಕಾಂಗ್ರೆಸ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷದ ವರಿಷ್ಠರು ತಮಗೆ ಜವಾಬ್ದಾರಿ ನೀಡಲು ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

‘ಕಳೆದ 28 ವರ್ಷಗಳಿಂದ ಕಾಂಗ್ರೆಸ್‌ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಪಕ್ಷದಲ್ಲಿ ಯಾವುದಾದರೂ ಒಂದು ಸಣ್ಣ ಸ್ಥಾನ ಕೊಡಿ ಎಂದು ಮನವಿ ಸಲ್ಲಿಸುತ್ತಾ ಬಂದೆ. ಹಲವು ವರ್ಷ ಕಳೆದರೂ ನನ್ನ ಬೇಡಿಕೆ ಈಡೇರಲಿಲ್ಲ. ನಮ್ಮ ಪಕ್ಷವೇ ಅಧಿಕಾರದಲ್ಲಿದ್ದರೂ ನನಗೆ ಒಂದು ಜವಾಬ್ದಾರಿ ಸಿಗಲಿಲ್ಲ. ಪಕ್ಷದ ಮುಖಂಡರು ಭರವಸೆ ನೀಡುತ್ತಲೇ ದಿನ ದೂಡುತ್ತಾ ಬಂದಿದ್ದಾರೆ. ನಾನು ಎಷ್ಟು ದಿನ ಕಾಯಲಿ? ಹೀಗಾಗಿ ಮುಂದಿನ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಯೋಚನೆ ಮಾಡುತ್ತಿದ್ದೇನೆ. ಈ ಬಗ್ಗೆ ಶೀಘ್ರ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ’ ಎಂದು ರಂಜಿತಾ ಹೇಳಿದರು.

ADVERTISEMENT

‘ರಂಜಿತಾ ಅವರು ಮಗಳ ಪರ ಪ್ರಚಾರ ನಡೆಸಿದ್ದನ್ನು ಬಿಟ್ಟರೆ ಮಂಡ್ಯದಲ್ಲಿ ಅವರು ಕಾಂಗ್ರೆಸ್‌ನ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ. ಅವರು ಪಕ್ಷದಲ್ಲಿ ಜವಾಬ್ದಾರಿ ಬಯಸಿದ್ದರು ಎಂಬ ವಿಷಯವೂ ನಮಗೆ ಗೊತ್ತಿಲ್ಲ. ಅವರ ಜೊತೆ ಮಾತನಾಡುತ್ತೇವೆ’ ಎಂದು ಕಾಂಗ್ರೆಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್‌ ತಿಳಿಸಿದರು.

ರಮ್ಯಾ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ರಂಜಿತಾ ಮಗಳ ಪರ ಪ್ರಚಾರ ನಡೆಸಿದ್ದರು. ರಮ್ಯಾಗೆ ಎಐಸಿಸಿಯಲ್ಲಿ ಸ್ಥಾನ ನೀಡಿ ದೆಹಲಿಗೆ ಕರೆಸಿಕೊಂಡ ನಂತರ ರಂಜಿತಾ ಬೆಂಗಳೂರಿನಲ್ಲಿ ನೆಲೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.