ADVERTISEMENT

ಕಾಮೆಡ್‌–ಕೆ : ಕರ್ನಾಟಕಕ್ಕೆ ಮೊದಲ 10 ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 27 ಮೇ 2017, 19:30 IST
Last Updated 27 ಮೇ 2017, 19:30 IST
ಕಾಮೆಡ್‌–ಕೆ : ಕರ್ನಾಟಕಕ್ಕೆ ಮೊದಲ 10 ರ‍್ಯಾಂಕ್
ಕಾಮೆಡ್‌–ಕೆ : ಕರ್ನಾಟಕಕ್ಕೆ ಮೊದಲ 10 ರ‍್ಯಾಂಕ್   

ಬೆಂಗಳೂರು: ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾದ ಕಾಮೆಡ್-ಕೆ ಪರೀಕ್ಷೆ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಮೊದಲ 10 ರ‍್ಯಾಂಕ್‌ ಕರ್ನಾಟಕದ ವಿದ್ಯಾರ್ಥಿಗಳ ಪಾಲಾಗಿದೆ.

ಈ ಪೈಕಿ ಒಂಬತ್ತು ವಿದ್ಯಾರ್ಥಿಗಳು ಬೆಂಗಳೂರಿನವರು. ಜೆ.ಪಿ. ನಗರದ ಮಾಯಾಂಕ್ ಬರನ್ವಾಲ್ 180 ಅಂಕಗಳಿಗೆ 165 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಉತ್ತರಕನ್ನಡ ಜಿಲ್ಲೆ ಶಿರಸಿಯ ವಿಶ್ವಜಿತ್‌ ಪ್ರಕಾಶ್‌ ಹೆಗಡೆ (164 ಅಂಕ) ಎರಡನೇ ರ‍್ಯಾಂಕ್ ಪಡೆದಿದ್ದಾರೆ.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಸೋಮೇಶ್ವರ ಲೇಔಟ್‌ನ ರುದ್ರಪಟ್ಟಣ ವಲ್ಲಭ್ ರಮಾಕಾಂತ್‌, ಸಹಕಾರ ನಗರದ ಸಿ.ವಿ. ಸಿದ್ಧಾರ್ಥ ಮತ್ತು ವಿಜಯ ಬ್ಯಾಂಕ್‌ ಲೇಔಟ್‌ನ ಎನ್‌. ಸಹನಾ ಮೂರನೇ ರ‍್ಯಾಂಕ್ ಪಡೆದಿದ್ದಾರೆ. ಈ ಮೂವರು 163 ಅಂಕ ಪಡೆದ್ದಾರೆ.

ಒಟ್ಟು 58,932 ವಿದ್ಯಾರ್ಥಿಗಳು ಇದೇ 14ರಂದು ನಡೆದಿದ್ದ ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ ಕರ್ನಾಟಕದ 19,601 ವಿದ್ಯಾರ್ಥಿಗಳು ಇದ್ದರು.
‌ಮೊದಲ 2,000 ರ‍್ಯಾಂಕ್ ಪಡೆದವರ ಪೈಕಿ 1,423 ವಿದ್ಯಾರ್ಥಿಗಳು ಶೇ 70ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ.

ಉಳಿದ 577 ವಿದ್ಯಾರ್ಥಿಗಳು ಶೇ 67ರಿಂದ ಶೇ 70ರಷ್ಟು ಅಂಕಗಳನ್ನು ಪಡೆದಿದ್ದಾರೆ. 7,427 ವಿದ್ಯಾರ್ಥಿಗಳು ಶೇ 50ರಿಂದ ಶೇ 60ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಮೊದಲ 100 ರ‍್ಯಾಂಕ್‌

ಗಳಲ್ಲಿ ಕರ್ನಾಟಕದ 70 ವಿದ್ಯಾರ್ಥಿಗಳು ಇದ್ದಾರೆ. ಅದೇ ರೀತಿ ಮೊದಲ 1,000 ರ‍್ಯಾಂಕ್‌ನಲ್ಲಿ ಕರ್ನಾಟಕದ 398 ವಿದ್ಯಾರ್ಥಿಗಳು ಇದ್ದಾರೆ.
ವಿದ್ಯಾರ್ಥಿಗಳ ವೈಯಕ್ತಿಕ ಅಂಕ ಮತ್ತು ವಿವರಗಳು ವೆಬ್‌ಸೈಟ್‌ನಲ್ಲಿ (www.comedk.org) ಲಭ್ಯವಿದೆ ಎಂದು ಕಾಮೆಡ್‌–ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ  ಎಸ್‌. ಕುಮಾರ್ ತಿಳಿಸಿದ್ದಾರೆ.

‘ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ಮತ್ತು ಕೌನ್ಸೆಲಿಂಗ್‌ ಸಂಬಂಧಿಸಿದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು’ ಎಂದೂ ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT